ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಕಟ್ಟಡದಲ್ಲೇ ಸರ್ಕಾರಿ ಕೆಲಸ!

Last Updated 15 ಜುಲೈ 2017, 10:11 IST
ಅಕ್ಷರ ಗಾತ್ರ

ಕೂಡ್ಲಿಗಿ: ರಾಜ್ಯದಲ್ಲಿಯೇ ಅತಿ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆ ಪಾತ್ರವಾಗಿ ರುವ ತಾಲ್ಲೂಕು ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿಯನ್ನು ಸಹ ಕಟ್ಟಿಕೊಂಡಿದೆ. ಇಂತಹ ತಾಲ್ಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ನಿರಾಶ್ರಿತವಾಗಿವೆ.

ತಾಲ್ಲೂಕು ಕೇಂದ್ರದಲ್ಲಿ 26 ಸರ್ಕಾರಿ ಕಚೇರಿಗಳಿದ್ದು, ಅವುಗಳಲ್ಲಿ 16 ಕಚೇರಿಗಳಿಗೆ ಶಾಶ್ವತ ಮತ್ತು ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡವನ್ನೆ ಆಶ್ರಯಿಸಿವೆ. ಇದರಿಂದ ಸರ್ಕಾರಿ ಕಚೇರಿಗಳು ಒಂದು ಕಡೆ ಇರದೆ ಪಟ್ಟಣದ ಮೂಲೆ ಮೂಲೆ ಯಲ್ಲಿ ಹಂಚಿ ಹೋಗಿದ್ದು, ಕೆಲವೊಂದು ಕಚೇರಿಗಳು ಎರಡು ಕಿ.ಮೀ.ಗಿಂತ ಹೆಚ್ಚು ದೂರ ಇವೆ.

ಅಲ್ಲದೆ ಬಹುತೇಕ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪದೇ ಪದೇ ಸ್ಥಳಾಂತರಗೊಳ್ಳುತ್ತವೆ. ಇದರಿಂದ ಸ್ಥಳೀಯರಿಗೂ ಸಹ ಯಾವ ಕಚೇರಿ ಎಲ್ಲಿದೆ ಎಂದು ಗೊತ್ತಾಗುವುದಿಲ್ಲ. ತಾಲ್ಲೂಕಿನ 40ಕಿ.ಮೀ. ದೂರದ ಗಡಿ ಭಾಗದಿಂದ ತಮ್ಮ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಗ್ರಾಮಸ್ಥರು, ವಿವಿಧ ಫಲಾನುಭವಿಗಳು ತಮಗೆ ಬೇಕಾಗಿರುವ ಕಚೇರಿ ಎಲ್ಲಿದೆ ಎಂದು ಹುಡುಕುತ್ತ, ಬಿಸಿಲು, ಗಾಳಿ ಎನ್ನದೆ ನಡೆದೇ ಕಚೇರಿಗಳನ್ನು ತಲುಪಬೇಕು. ಇಲ್ಲವೇ ಆಟೋಗಳನ್ನು ಆಶ್ರಯಿಸಬೇಕು.

ಸ್ವಂತ ಕಟ್ಟದವಿಲ್ಲದೆ ಎಲ್ಲಾ ಕಚೇರಿಗಳು ವಸತಿ ಗೃಹಗಳನ್ನೇ ಬಾಡಿಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಜಾಗದ ಅಭಾವದಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೆ ಅಧಿಕಾರಿಗಳು ಅಡುಗೆ ಕೋಣೆ, ಮಲಗುವ ಕೋಣೆಗಳಲ್ಲಿಯೇ ಕಾರ್ಯ ನಿರ್ವಹಿಸಿ ಬೇಸತ್ತಿದ್ದಾರೆ.

ಕಚೇರಿಗೆ ಬರುವ ಸಾರ್ವಜನಿಕರಂತೂ ನಿಂತು ಕೊಂಡೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೋಗಬೇಕು. ಕಟ್ಟಡಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ತಮ್ಮ ಅಮೂಲ್ಯವಾದ ಕಡತಗಳನ್ನು ರಕ್ಷಿಸಿ ಕೊಳ್ಳಲು ಸಿಬ್ಬಂದಿ ಇನ್ನಿಲ್ಲದ ಹರ ಸಹಾಸ ಪಡಬೇಕಾಗಿದೆ. ಅನೇಕ ಕಚೇರಿಗಳು ಮಹಡಿ ಮೇಲಿರುವುದರಿಂದ ವೃದ್ದರು, ಅಂಗವಿಕಲರು ಅಧಿಕಾರಿಗಳನ್ನು ಬೇಟಿ ಮಾಡಲು ಸಾಧ್ಯವಾಗುವುದೇ ಮರಳಿದ ನಿದರ್ಶನಗಳಿವೆ.

ಅನೇಕ ಕಚೇರಿಗಳು ವರ್ಷಾನು ಗಟ್ಟಲೆ ಬಾಡಿಗೆ ಹಣವನ್ನೇ ನೀಡಿಲ್ಲ ಎಂಬ ದೂರು ಕಟ್ಟಡ ಮಾಲೀಕ ರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕು ಗಳಲ್ಲಿ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಿ ಎಲ್ಲಾ ಇಲಾಖೆಗಳು ಒಂದೇ ಕಡೆ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಆದರೆ ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿಗೆ ಮಾತ್ರ ಈ ಭಾಗ್ಯವಿಲ್ಲದ್ದಂತಾಗಿದೆ. ಇದರಿಂದ ಬ್ರಿಟೀಷ್ ಆಡಳಿತದಲ್ಲಿ ನಿರ್ಮಾಣವಾಗಿ ಶತಮಾನದತ್ತ ಸಾಗಿರುವ ತಾಲ್ಲೂಕು ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಅನೇಕ ಕಡೆ ಸೋರುತ್ತಿದೆ. ಇದರಿಂದ ಕಡತ, ಕಂಪ್ಯೂಟರ್ ನಂತಹ ವಸ್ತುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಮಳೆಗಾಲದಲ್ಲಿ ಮೇಲ್ಚಾವಣಿಗೆಗೆ ಹೊದಿಕೆ ಹಾಕಿಕೊಳ್ಳುತ್ತಾರೆ.

ಇವೆಲ್ಲ ಕಷ್ಟಗಳಿಂದ ಸಾರ್ವಜನಿರನ್ನು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಮುಕ್ತಿಗೊಳಿಸಲು ಜನ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಕ್ರಮ ಕೈಗೊಂಡು ಒಂದೇ ಸೂರಿನಡಿ ವಿವಿಧ ಸೌಕರ್ಯ ಒದಗಿಸುವ ಮೂಲಕ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ತಾಲ್ಲೂಕಿನ ಜನರ ಒತ್ತಾಯವಾಗಿದೆ.

ಬಾಡಿಗೆ ಕಟ್ಟಡದಲ್ಲಿ ಕಚೇರಿಗಳು
ಬಿಸಿಎಂ. ಕೃಷಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಕೆಐಆರ್‌ಡಿಎಲ್, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಮೀನುಗಾರಿಕೆ, ಜಿಲ್ಲಾ ಪಂಚಾಯ್ತಿ ಎಂಜನಿಯರಿಂಗ್ ವಿಭಾಗ, ಸಾರ್ವಜನಿಕ ಗ್ರಂಥಾಲಯ, ಅಬಕಾರಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಶಾಲಾ ಕೊಠಡಿ), ಸಣ್ಣ ನೀರಾವರಿ, ಅಕ್ಷರ ದಾಸೋಹ, ಕ್ಚೇತ್ರ ಸಮನ್ವಯಾಧಿಕಾರಿ ಕಚೇರಿ

* * 

ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಹತ್ತು ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಿರುವ ಕಚೇರಿಯನ್ನು ಸೂಕ್ತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು
ಬಿ.ನಾಗೇಂದ್ರ, ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT