ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ ಎಚ್ಚರ ವಹಿಸಿ

Last Updated 15 ಜುಲೈ 2017, 10:47 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ಮುಂಗಾರಿನಲ್ಲಿ ಗಂಭೀರವಾಗುತ್ತಿರುವ ಮಾರಕ ಡೆಂಗಿ  ಮತ್ತು ಚಿಕೂನ್ ಗುನ್ಯಾ ರೋಗದ ಪರಿಸ್ಥಿತಿ ಕೈಮೀರದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ರೋಗ ನಿರ್ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ದೇವೇಂದ್ರ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಜಾಗೃತಿ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಹಗಲು ವೇಳೆ ಕಚ್ಚುವ ಸೊಳ್ಳೆಯಿಂದ ಡೆಂಗಿ ಮತ್ತು ಚಿಕೂನ್ ಗುನ್ಯಾ ಬರುವ ಸಾಧ್ಯತೆ ಇದೆ. ಸಂಜೆ ವೇಳೆ ಕಚ್ಚುವ ಸೊಳ್ಳೆಯಿಂದ ಮಲೇರಿಯಾ, ರಾತ್ರಿ ಸಮಯದಲ್ಲಿ ಕಚ್ಚುವ ಸೊಳ್ಳೆಯಿಂದ ಆನೆಕಾಲು ರೋಗಕ್ಕೆ ಕಾರಣವಾಗಲಿದೆ.

ಮನೆಯ ಹೊರ ಮತ್ತು ಒಳ ಆವರಣದಲ್ಲಿರುವ ತೊಟ್ಟಿ, ಮಡಿಕೆ, ಟೈರ್, ಇತರೆ ಪರಿಕರಗಳಲ್ಲಿ ಸಂಗ್ರಹಿಸಿಡುವ ನೀರಿಗೆ ಬಿಗಿಯಾದ ಮುಚ್ಚಳದಿಂದ ಭದ್ರ ಪಡಿಸಬೇಕು, ಕನಿಷ್ಠ ಎಂಟುದಿನಗಳಿಗೊಮ್ಮೆ ಶುಚಿಗೊಳಿಸಬೇಕು, ಮನೆಯ ಅಕ್ಕಪಕ್ಕ  ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತು ಪುರಸಭೆ ಒಂದನೆ ಮತ್ತು 21ನೇ ವಾರ್ಡ್ ನಲ್ಲಿ ಚಿಕೂನ್ ಗುನ್ಯಾ ಹತೋಟಿಗೆ ಬರುತ್ತಿದೆ. ತಾಲ್ಲೂಕಿನಲ್ಲಿರುವ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಬೆಳಗ್ಗೆ ತರಗತಿ ಆರಂಭಕ್ಕೆ ಮೊದಲು ನಡೆಯುವ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಗೆ ಮಾರಕ ರೋಗಗಳ ಬಗ್ಗೆ ಕನಿಷ್ಠ 10 ನಿಮಿಷ ಶಿಕ್ಷಕರು ಜಾಗೃತಿ ಮೂಡಿಸಬೇಕು. ಶಿಕ್ಷಣ ಇಲಾಖೆ ಇದರ ಜವಾಬ್ದಾರಿ ಹೊರಬೇಕು ಎಂದರು.

ಅಂಗನವಾಡಿ ಕೇಂದ್ರಕ್ಕೆ ಬರುವ ಪೋಷಕರಿಗೆ ತಿಳಿ ಹೇಳಬೇಕು. ಗ್ರಾಮ ಪಂಚಾಯಿತಿ ಕಾರ್ಮಿಕ ಇಲಾಖೆ ಪುರಸಭೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಮಾರಕ ರೋಗದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು ಎಂದರು.

ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞೆ ಲತಾ, ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಪದ್ಮಾವತಿ ಜಗನ್ನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಪುರಸಭೆ ಆರೋಗ್ಯ ನಿರೀಕ್ಷಕಿ  ಸಯಿದಾ, ತಾಲ್ಲೂಕು ಆರೋಗ್ಯಾಧಿಕಾರಿ ರಶ್ಮಿ,  ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಕ ಸುರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT