ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಾರ್ಥಿಗಳ ‘ಪದಯಾತ್ರೆ’

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ‘ಪಾದಯಾತ್ರೆ’, ಇಳಿವಯಸ್ಸಿನಲ್ಲಿ ಕಾಶಿ–ರಾಮೇಶ್ವರಕ್ಕೆ ಹೋಗುವ ‘ತೀರ್ಥಯಾತ್ರೆ’ ಗೊತ್ತಿದೆ. ‘ಪದಯಾತ್ರೆ’ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ.

‘ಅಕ್ಷರೋಪಾಸನೆ... ಭಾವದಲ್ಲಿ ಬಂಧಿಯಾಗಿ ಸಾಗುವ ತೀವ್ರ ತುಡಿತದ ಅನವರತ ಪಯಣವೇ ಪದಯಾತ್ರೆ’ ಎಂದು ಇದರ ಯಾತ್ರಿಕರು ‘ಫೇಸ್‌ಬುಕ್‌’ ವಾಲ್‌ನಲ್ಲಿ ಹಾಕಿಕೊಂಡಿದ್ದಾರೆ. ಹೌದು, ಕಾವ್ಯಾಸಕ್ತರ ಈ ಗುಂಪು, ಬೆಂಗಳೂರಿನಲ್ಲಿ ತಿಂಗಳಿಗೊಮ್ಮೆ ಒಂದೆಡೆ ಸೇರಿ, ಕನ್ನಡ ಕಾವ್ಯಗಳನ್ನು ತನ್ಮಯವಾಗಿ ಓದುತ್ತಾ, ತುಂಬು ಮನಸ್ಸಿನಿಂದ ಆಸ್ವಾದಿಸುತ್ತಿದೆ. ಹೊಸದಾಗಿ ಬರವಣಿಗೆ ಆರಂಭಿಸಿರುವವರ ಬೆನ್ನು ತಟ್ಟುತ್ತಿದೆ.

ಈ ಮೂಲಕ ಪುಸ್ತಕ ಓದುವ ಸಂಸ್ಕೃತಿ ಮತ್ತು ಕನ್ನಡದ ಕಂಪನ್ನು ಪಸರಿಸುತ್ತಿದೆ. ಈಗಾಗಲೇ ಪದಯಾತ್ರೆಯನ್ನು 568 ಮಂದಿ ಲೈಕ್‌ ಮಾಡಿದ್ದು, 585 ಮಂದಿ ಫಾಲೋ ಮಾಡುತ್ತಿದ್ದಾರೆ.

ವೀಕೆಂಡ್‌ ವಿತ್‌ ಕವನ
‘ಸಮಯ–ಹಣ ವ್ಯರ್ಥ ಮಾಡಿಕೊಂಡು ಅಲ್ಲಿ ಇಲ್ಲಿ ತಿರುಗುವ ಬದಲು ಎಲ್ಲಾದರೂ ಕುಳಿತು ಓದೋಣ ಎಂದು ‘ಫೇಸ್‌ಬುಕ್‌ನ ‘ಕವನ’ ಗ್ರೂಪ್‌ನ ಕೆಲವು ಸದಸ್ಯರು ತೀರ್ಮಾನಿಸಿದೆವು. ಅದರಂತೆ, 2015ರ ನವೆಂಬರ್‌ನಲ್ಲಿ ಬೆಂಗಳೂರಿನ ಬಿ.ಟಿ.ಎಂ ಉದ್ಯಾನದಲ್ಲಿ ಸೇರಿದೆವು. ಅಲ್ಲಿನ ಮಂಟಪದಲ್ಲಿ ಕುಳಿತು ಕನ್ನಡ ಕವಿತೆಗಳನ್ನು ಗಟ್ಟಿಯಾಗಿ ಓದುತ್ತಿದ್ದೆವು. ಇದನ್ನು ಗಮನಿಸಿದ ಕೆಲವು ಸಾರ್ವಜನಿಕರು ಕುತೂಹಲದಿಂದ ಹತ್ತಿರ ಬಂದು, ಕವಿತೆಗಳನ್ನು ಕೇಳುತ್ತಾ ನಿಂತರು.

ಎರಡು ಗಂಟೆ ವಿಚಲಿತರಾಗದಂತೆ ನಿಂತಿದ್ದ ಜನರ ಆಸಕ್ತಿ ಮತ್ತು ಕವಿತೆಯ ಚುಂಬಕ ಶಕ್ತಿಗೆ ನಾವು ಮಾರು ಹೋದೆವು. ಜನರಿಂದ ಬಂದ ಮೆಚ್ಚುಗೆಯ ಮಾತುಗಳಿಂದ ಮತ್ತಷ್ಟು ಸ್ಫೂರ್ತಿ ಪಡೆದ ನಾವು, ಪ್ರತಿ ತಿಂಗಳು ಆಯ್ದ ಭಾನುವಾರದಂದು ಕನ್ನಡ ಕಾವ್ಯ ವಾಚನ ಮಾಡಬೇಕು ಎಂದು ತೀರ್ಮಾನಿಸಿದೆವು. ಹೀಗೆ, 15 ಅಧ್ಯಾಯಗಳನ್ನು ಪೂರ್ಣಗೊಳಿಸಿ, 16ನೇ ಅಧ್ಯಾಯಕ್ಕೆ ಅಡಿ ಇಡುತ್ತಿರುವ ಸಾಹಿತ್ಯಿಕ ಚಟುವಟಿಕೆಯೇ ಪದಯಾತ್ರೆ’ ಎಂದು ಪದಯಾತ್ರೆಯ ಸಕ್ರಿಯ ಸದಸ್ಯೆ ಸೌರಭ ರಾವ್‌ ಹೇಳುತ್ತಾರೆ.

ವಿವಿಧತೆಯಲ್ಲಿ ಏಕತೆ
ಪದಯಾತ್ರೆ ತಂಡದಲ್ಲಿ ವಿಭಿನ್ನ ಕ್ಷೇತ್ರದ ತರಹೇವಾರಿ ಸದಸ್ಯರಿದ್ದಾರೆ. ಚಿತ್ರಕಲಾವಿದೆ ಸಂಧ್ಯಾ ಅಯ್ಯಂಗಾರ್‌, ರಂಗಭೂಮಿ ಕಲಾವಿದ ನರೇಶ್‌ ಭಟ್‌, ಗಾಯಕಿ ಸುಮನಾ ನಾರಾಯಣ್‌, ವೈದ್ಯ ಗೌತಮ್‌ ಶ್ರೀನಿವಾಸ್‌, ಎಂಜಿನಿಯರ್‌ ಶಶಾಂಕ್‌ ಪರಾಶರ್‌, ಛಾಯಾಗ್ರಾಹಕ ವೆಂಕಟೇಶ್‌ ಕಟ್ಟಾ, ‘ಟೀಚ್‌ ಫಾರ್‌ ಇಂಡಿಯಾ’ ಸಂಘಟನೆಯ ಅನುಷಾ ಹೆಗಡೆ, ಬರಹಗಾರ್ತಿ ಸೌರಭ ರಾವ್‌, ರಾಜೇಶ್ವರಿ ಚೆನ್ನಾಂಗೋಡು, ಪ್ರಜ್ಞಾ ತೇಜಸ್ವಿ, ಹೇಮಾ ನಾಯಕ್‌ ಮುಂತಾದ ಕಾವ್ಯಾಸಕ್ತರಿದ್ದಾರೆ. ಅಷ್ಟೆ ಅಲ್ಲದೆ, ಅಮೆರಿಕ, ಸ್ಪೇನ್‌ ಮುಂತಾದ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಗೂಗಲ್‌ ಟಾಕ್‌, ಸ್ಕೈಪ್‌, ಫೇಸ್‌ಬುಕ್‌ ಮುಂತಾದ ಮಾಧ್ಯಮಗಳ ಮೂಲಕ ಪದಯಾತ್ರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.

ಬೇಸರಾಗಿದೆ ಮಾತು, ಭಾರವಾಗಿದೆ ಮೌನ...
ಪದಯಾತ್ರೆ ಕಾರ್ಯಕ್ರಮವು ಬೆಂಗಳೂರಿನ ವಿವಿಧ ಉದ್ಯಾನ ಮತ್ತು ತಂಡದ ಸದಸ್ಯರ ಮನೆಗಳಲ್ಲಿ ಭಾನುವಾರದಂದು ಸಂಜೆ 4ರಿಂದ 6ರವರೆಗೆ ನಡೆಯುತ್ತದೆ. ಇದರಲ್ಲಿ ಎರಡು ಸುತ್ತುಗಳಿರುತ್ತವೆ. ಮೊದಲನೇ ಸುತ್ತಿನಲ್ಲಿ ತಮ್ಮ ನೆಚ್ಚಿನ ಕವಿಗಳ ಕಾವ್ಯಗಳನ್ನು ಓದುವುದು. ಎರಡನೇ ಸುತ್ತಿನಲ್ಲಿ ಸ್ವರಚಿತ ಕಾವ್ಯ/ ಕವನಗಳನ್ನು ಓದುವುದು. ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಯಶವಂತ ಚಿತ್ತಾಲ, ಚನ್ನವೀರ ಕಣವಿ, ಜಿ.ಎಸ್‌. ಶಿವರುದ್ರಪ್ಪ, ಕೆ.ಎಸ್‌. ನಿಸಾರ್‌ ಅಹಮದ್‌, ಎಚ್‌.ಎಸ್‌. ವೆಂಕಟೇಶಮೂರ್ತಿ, ಜಯಂತ ಕಾಯ್ಕಿಣಿ ಮುಂತಾದ ಕವಿಗಳ ಆಯ್ದ ಕಾವ್ಯಗಳನ್ನು ಒಬ್ಬೊಬ್ಬರಾಗಿ ಓದುತ್ತಾರೆ. ಉಳಿದವರು ಕಿವಿಯಾಗುತ್ತಾರೆ.

ಓದಿದ ನಂತರ ಕಾವ್ಯದ ಹಿನ್ನೆಲೆ, ಅದರ ಭಾವಾರ್ಥವನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಾರೆ. ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಇದರ ಜತೆಯಲ್ಲೇ ಚರ್ಚೆ, ಸಂವಾದ, ಭಾಷಣ, ಹರಟೆಯೂ ನಡೆಯುತ್ತದೆ. ಗದ್ದಲ ತಾರಕಕ್ಕೆ ಹೋಯಿತು ಎನಿಸುವಷ್ಟರಲ್ಲಿ ಅಲ್ಲಿರುವ ಗಾಯಕರೊಬ್ಬರು ‘ಬೇಸರಾಗಿದೆ ಮಾತು, ಭಾರವಾಗಿದೆ ಮೌನ...’ ಎಂಬಂತಹ ನವಿರಾದ ಕಾವ್ಯಗಳನ್ನು ಆಯ್ಕೆ ಮಾಡಿಕೊಂಡು ಹಾಡುತ್ತಾರೆ. ಆ ಕ್ಷಣದ ದಿವ್ಯಾನುಭೂತಿಗೆ ಎಲ್ಲರೂ ಮನಸೋಲುತ್ತಾರೆ.

ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’, ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು’, ಎಸ್‌.ಎಲ್‌. ಭೈರಪ್ಪನವರ ‘ಯಾನ’, ಗಿರೀಶ ಕಾರ್ನಾಡರ ‘ತುಘಲಕ್‌’ ನಾಟಕ ಸೇರಿದಂತೆ ನೆಚ್ಚಿನ ಕೃತಿಗಳಿಂದ ಆಯ್ದ ಗದ್ಯ ಭಾಗವನ್ನು ಓದುವುದೂ ಉಂಟು. ಹೀಗೆ ಪದ್ಯದ ಜತೆಗೆ ಗದ್ಯ, ನಾಟಕ, ಕಥೆ, ಹಾಸ್ಯ, ಪ್ರಬಂಧ ಮುಂತಾದವುಗಳ ಬಗ್ಗೆಯೂ ಧ್ಯಾನಿಸುತ್ತಾರೆ. ಓದಿರುವ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತದೆ. ಸಂಗ್ರಹದಲ್ಲಿರುವ ಪುಸ್ತಕಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಕಾರ್ಯಕ್ರಮ ನಡೆದ ಮನೆಯಲ್ಲಿ ಊಟೋಪಚಾರವೂ ಸಾಂಗವಾಗಿ ನಡೆಯುತ್ತದೆ. ಕಾರ್ಯಕ್ರಮದ ನಂತರ ಬಿಡುವಿದ್ದವರು, ಪುಸ್ತಕಾಲಯಗಳಿಗೆ ಹೋಗಿ ಹೊಸ ಪುಸ್ತಕಗಳನ್ನು ಖರೀದಿಸುತ್ತಾರೆ.

ಬರಸೆಳೆಯುವ ತಾಣಗಳು
‘ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’ ಪುಸ್ತಕ ಓದಿದಾಗ ಕುಪ್ಪಳಿಯಲ್ಲಿರುವ ಕವಿಶೈಲ ಬಹಳವಾಗಿ ಕಾಡಿತು. ಹಾಗಾಗಿ, ತಂಡದ ಸದಸ್ಯರು ಕವಿಶೈಲಕ್ಕೆ ಹೋಗಿ ಅಲ್ಲಿ ಪುಸ್ತಕಗಳನ್ನು ಓದುತ್ತಾ, ನಿಸರ್ಗದ ಸೊಬಗನ್ನು ಸವಿದು ಬಂದೆವು. ಬೇಂದ್ರೆಯವರ ಕಾವ್ಯ ಓದಿದಾಗ ಸಾಧನಕೇರಿ ನಮ್ಮನ್ನು ಬಿಟ್ಟೂ ಬಿಡದೇ ಕಾಡಿದೆ. ಹಾಗಾಗಿ ಅಲ್ಲಿಗೂ ಹೋಗಿ ಬರಲು ತೀರ್ಮಾನಿಸಿದ್ದೇವೆ. ಹೀಗೆ, ಪದಗಳ ಯಾತ್ರೆ, ಒಮ್ಮೊಮ್ಮೆ ಪಾದಯಾತ್ರೆಯೂ ಆಗುತ್ತದೆ.

ಹಲವಾರು ಸ್ಥಳಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿ ಕುಳಿತು ಓದಿದ ಕವಿತೆಯ ವಿಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತೇವೆ. ಇದರಿಂದ ಕಾರ್ಯಕ್ರಮಕ್ಕೆ ಬರಲು ಆಗದವರು ಅದನ್ನು ವೀಕ್ಷಿಸಿ ತೃಪ್ತಿ ಪಡುತ್ತಾರೆ.

ಒಟ್ಟಿನಲ್ಲಿ ಪದಯಾತ್ರೆ ಎಂಬುದು ಕಾವ್ಯಗಳ ಮೂಲಕ ಜೀವನ ಪ್ರೀತಿ, ಮಾನವೀಯ ಮೌಲ್ಯ, ಸಂಬಂಧಗಳ ಬೆಲೆ ಮತ್ತು ಬದುಕುವ ರೀತಿಯನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ನಮ್ಮ ಈ ಸಾಹಿತ್ಯ ಚಟುವಟಿಕೆಗೆ ಎಲ್ಲ ಕಾವ್ಯಾಸಕ್ತರಿಗೂ ಮುಕ್ತ ಅವಕಾಶವಿದೆ. ಮುಂದಿನ ಪದಯಾತ್ರೆ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಪ್ರಕಟಿಸುತ್ತೇವೆ. ಮೊಗೆದಷ್ಟೂ ಭಾವಾರ್ಥ ಸಿಗುವ ಕನ್ನಡ ಕಾವ್ಯಗಳು ಮತ್ತಷ್ಟು ಮನೆ–ಮನಗಳನ್ನು ತಲುಪಲಿ ಎಂಬ ಸದುದ್ದೇಶ ನಮ್ಮದಾಗಿದೆ’ ಎನ್ನುತ್ತಾರೆ ಸೌರಭ ರಾವ್‌.

ಕಾಯ್ಕಿಣಿ ಕಾಣಿಕೆ
‘ಕಾವ್ಯದ ಬಗ್ಗೆ ನಿಜವಾಗಿ ಆಸಕ್ತಿ ಇರುವ ಗ್ರೂಪ್‌ ಅದು. ಕಾವ್ಯವೇ ಅವರನ್ನೆಲ್ಲ ಸೇರಿಸಿದೆ, ಕಾವ್ಯದಲ್ಲೇ ಅವರು ಬಂದಿಯಾಗಿದ್ದಾರೆ. ಹಾಗಾಗಿ ಈ ಕಾವ್ಯಾರ್ಥಿಗಳ ಸಾಹಿತ್ಯಿಕ ಚಟುವಟಿಕೆಗೆ ‘ಪದಯಾತ್ರೆ’ ಎನ್ನುವ ಟೈಟಲ್‌ ಕೊಟ್ಟೆ. ಕೇವಲ ತಮ್ಮ ಕವಿತೆಗಳನ್ನು ಮಾತ್ರ ಓದದೆ, ಇತರ ಕವಿಗಳ ಕಾವ್ಯಗಳನ್ನು ಓದುವುದು ಈ ಗ್ರೂಪ್‌ನ ವಿಶೇಷ. ನಮ್ಮ ಕವಿಗೋಷ್ಠಿಗಳ ಕಲ್ಪನೆಗಳೂ ಅದೇ ರೀತಿ ಆಗಬೇಕು. ನಮ್ಮ ಕವಿಗೋಷ್ಠಿಗಳು ನೀರಸವಾಗಲು ಕಾರಣ, ಎಲ್ಲ ಕವಿಗಳು ತಮ್ಮ ಕವಿತೆಗಳನ್ನು ಓದುವುದರಲ್ಲೇ ಮುಳುಗಿರುವುದರಿಂದ. ಬೇರೆಯವರ ಕಾವ್ಯಗಳನ್ನು ಓದಿದಾಗ ಅಲ್ಲಿ ನಿಸ್ವಾರ್ಥ ಮತ್ತು ನಿಜವಾದ ಕಾವ್ಯ ಪ್ರೇಮ ಇರುತ್ತದೆ. ಸ್ವಕಾವ್ಯ ಪ್ರೇಮದಿಂದ ಬಿಡುಗಡೆ ಹೊಂದಿದ ಅಪ್ಪಟ ಕಾವ್ಯಪ್ರೇಮದ ಆತ್ಮೀಯತೆಯೇ ಪದಯಾತ್ರೆಯ ಲಕ್ಷಣವಾಗಿದೆ. ಜೀವನ ಕುರಿತ ಕೌತುಕ ಕುತೂಹಲವೇ ಅದರ ಜೀವಂತಿಕೆಗೆ ಕಾರಣ.
– ಜಯಂತ ಕಾಯ್ಕಿಣಿ,
ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT