ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯರೋಸ್ತಾಮಿಯ ಕ್ಲೋಸಪ್ಪು ಮತ್ತು ಸಲೂನಿನವ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಕಟಿಂಗು ಮಾಡಿಸಿ ತಿಂಗಳು ಕಳೆದಿದ್ದವು. ಮೊದಮೊದಲೆಲ್ಲ ಪಟ್ಟಗೆ ಕ್ರೋಪು ಬಾಚುವಂತಿದ್ದ ಕೂದಲು ದಿನ ಕಳೆದಂತೆ ಗುಂಗುರಾಗಿ ಕೋಳಿಪುಕ್ಕವಾಗಿ ನವಿಲುಗರಿಯಾಗಿ ಕತ್ತದ ಸುಗುಡಾಗಿ ಎಣ್ಣೆತಟ್ಟಿ ಪೆಟ್ಟೆಯಾಗಿ ಮಾವಿನ ಮರಕೆ ಹಬ್ಬಿದ ಬೆಂದಟಕದಂತೆ ನನ್ನದಲ್ಲದಾಗಿ ಕಾಡುತ್ತದೆ. ವಾರಗಟ್ಟಲೆ ‘ನಾಳೆ ಹೋದರಾಯಿತು’ ಎಂದು ಮುಂದೂಡಿ, ಒಂದು ಡೋಸು ತಲೆನೋವು ನುಂಗಿ ತಲೆಯ ಮಗ್ಗುಲಿನಲ್ಲಿ ಯಾರೋ ತಾಕತ್ತು ಮೀರಿ ಬೆರಳುಗಳಲ್ಲಿ ಒತ್ತಿ ಹಿಡಿದೇ ಇದ್ದಾರೆ ಎನಿಸಿದಾಗ. ‘ಇವತ್ತು ಕಟಿಂಗಿಗೆ ಹೋಗುವುದೇ ಹೌದು ಇಲ್ಲದಿರೆ ಪಾಯ ಇಲ್ಲ’ ಎಂದು ದಿನ ನಿಕ್ಕಿ ಮಾಡಿದೆ.

ಎಲ್ಲಿಗೆ ಹೋಗುವುದು?. ಧಾರವಾಡದಲ್ಲಿ ಕಟಿಂಗ್‌ ಸಲೂನುಗಳಿಗೆ ಬರ ಇಲ್ಲ. ಆದರೆ ಎಲ್ಲರೂ ಒಂದೇ ರೇಟಿನವರು. ಎಲ್ಲೇ ಆಗಲಿ ಅಂಗಡಿಯಲ್ಲಿ ಚಂದ ಕಂಡಷ್ಟು ಮನೆಗೆ ಬಂದಾಗ ಕಾಣುವುದಿಲ್ಲ. ಕನ್ನಡಿಯಲ್ಲೇ ಏನೋ ಕಣ್ಣುಕಟ್ಟು ಇದ್ದಾತು. ಇವೆಲ್ಲ ಯೋಚಿಸಿ ಕೊನೆಗೆ ಶೆಟ್ಟರ್ ಕಾಲೊನಿಯ ಗಣೇಶ ಹೋಟೆಲ್ಲಿನ ಎದುರಿಗಿನ ಅಂಗಡಿ ಎಂಬುದನ್ನು ಪಕ್ಕಾ ಮಾಡಿಕೊಂಡು ಹೊರಟೆ. ಅಂಗಡಿ ಹೆಸರು ನೆನಪಿರಲಿಲ್ಲ. ಅದು ಬೇಕಿರಲೂ ಇಲ್ಲ.

ಖಾಲಿಯಿತ್ತು ಅಂಗಡಿ. ಹೋದ ಕೂಡಲೆ ಕುರ್ಚಿ ಏರಿದ್ದಕ್ಕೆ ಮನಸ್ಸಲ್ಲೆ ಖುಷಿಪಟ್ಟು ಕೊನೆಯ ಬಾರಿ ಎಂಬಂತೆ ಕನ್ನಡಿಯನ್ನು ದಿಟ್ಟಿಸಿದೆ. ಕೂದಲು ಚೆನ್ನಾಗಿ ಕಾಣಿಸ್ತಿದೆ, ಕನ್ನಡಿಯಲ್ಲಿ ಕಣ್ಕಟ್ಟು ಇದೆ ಅಂತಲೇ ಮತ್ತೆ ಅನಿಸಿತು.

‘ಮುಂಡೆಗಂಡ ಸಂಜೆ ಮೇಲೆ ಕಟಿಂಗ್ ಮಾಡಸ್ತಾ ಇದಿಯಲ್ಲಾ’ ಕಿವಿಯಲ್ಲಿ ಕೂಗಿದಂತಾಗಿ ಯಾರು ಎಂದು ಯೋಚಿಸಿದೆ. ಅಮ್ಮನ ಧ್ವನಿ ಅನ್ನಿಸಿ ತಲೆ ಎತ್ತುವಾಗ ಹಿಂಬದಿಗೆ ಹಾದು ಹೋದ ಸಲೂನಿನವ ಕನ್ನಡಿಯಲ್ಲಿ ಮೂಡಿ ಮರೆಯಾದ. ಕತ್ತು ಹೊರಳಿಸಿದೆ.

ಮಧ್ಯವಯಸ್ಕ ಬಡಕಲು ದೇಹ, ನೀಟಾಗಿ ಕೂದಲು ಬಾಚಿ ಚಕ್ಸಿನ ಅಂಗಿ ತೊಟ್ಟಿದ್ದ. ತೋಳನ್ನು ಮಡಚಿ ತುಸು ಎಂಬಂತೆ ಹೊರಹೊಮ್ಮಿದ್ದ ಹೊಟ್ಟೆಯನ್ನು ಬಿಗಿದಪ್ಪಿದ ಅಂಗಿಯನ್ನು ಕೊಡವುತ್ತಾ ಕೂದಲು ಕುಂತಿದ್ದ ಹಸುರು ಬಟ್ಟೆಯೊಂದನ್ನು ಗಾಳಿಯಲ್ಲಿ ಸುತ್ತಾಡಿಸಿ ಹೊದೆಸಿ ಕುತ್ತಿಗೆಯ ಸುತ್ತ ಒಂದು ಕೂದಲೂ ಮೈಗಿಳಿಯದಂತೆ ಬಿಗಿ ಮಾಡಿದ.

‘ಯಾವ ಸ್ಟೈಲು...’ ಎಂದಾಗ
‘ನಾರ್ಮಲ್...’ ಎಂದೆ.
‘ಮಷ್ರೂಮ್ ಕಟ್ ಹೊಡಿವ ಮಸ್ತಾಗ್ತದೆ...’
‘ಇಲ್ಲಾ ನಾರ್ಮಲ್ ಸಾಕು... ಸೈಡ್ ಲಾಕ್ ತುಸು ಉದ್ದ ಇರಲಿ’ ಎಂದೆ.
ದಿಟ್ಟಿಸಿ ನೋಡುತ್ತಾ ತುಟಿಯನ್ನು ಸೊಟ್ಟಗೆ ಮಡಚುತ್ತಾ
‘ಉದ್ದ ಬೇಕಂದ್ರೆ... ಮಸಿ ಹಚ್ಚಬೇಕಲ್ರಿ...’ ಗಿಸಕ್ಕಂದ.

ಹುಳಿನಗೆ ಬೀರಿ ಕುಂತೆ. ಸ್ಪ್ರೇಯರ್ ತೆಗೆದುಕೊಂಡು ನೀರು ಸಿಂಪಡಿಸುತ್ತಾ ಅದೇ ಜೋಕಿಗೆ ಇನ್ನೂ ನಗುತ್ತಾ ತಲೆಮೇಲೆ ಕೈಯಾಡಿಸುತ್ತಾ ಬಹಳ ವರ್ಷದಿಂದ ಬಲ್ಲವನೋ ಎಂಬಂತೆ ಸಲುಗೆಯಿಂದ ನಾನೇ ಮುಟ್ಟಿರದ ತಲೆಯೂರಿನ ಮೂಲೆಗೆಲ್ಲ ಸಂಚರಿಸಿ ಬಾಚಣಿಕೆಯಲ್ಲಿ ಪೊದೆ ಪೊದೆ ಕೂದಲನ್ನು ಬಾಚಿಕೊಳ್ಳುತ್ತಾ ಕತ್ತರಿಸುತ್ತಾ ಇರುವಾಗ ಕುಯ್ ಗುಡುತ್ತಿದ್ದ ಮೀಟರ್ ಬೋರ್ಡಿನ ಸದ್ದನ್ನು ಮೀರಿ ಸಲೂನಿನವನ ಮಾತು ಜೀವಂತವಾಗತೊಡಗಿತು.

‘ಊರೆಲ್ಲಿ ನಿಮ್ದು...’
‘ಶಿರಸಿ...’
‘ಮತ್ತೆ ಇಲ್ಲಿ....ಪಿ ಯು ಸಿ ಯೋ...’
‘ಅಲ್ಲ... ಮಾಸ್ಟರ್ ಡಿಗ್ರಿ...’
‘ಎಲ್ಲಿ...’
‘ಯೂನಿವರ್ಸಿಟಿ...’
‘ಓಹೋ...’ ಮತ್ತೆ ಕೆಲಕಾಲ ಮಾತುಗಳಿರಲಿಲ್ಲ.

ಸುತ್ತಿರುಗುವಂತಿಲ್ಲ, ಬಗ್ಗಿಸಿದ ತಲೆಯಲ್ಲೇ ಕಣ್ಣುಗುಡ್ಡೆಯನ್ನು ನೆತ್ತಿಗೆ ದಾಟಿಸಲು ಪ್ರಯತ್ನಿಸುತ್ತಿದ್ದವನಂತೆ ಕನ್ನಡಿಯನ್ನು ಕೆಕ್ಕರಿಸಿ ನೋಡುತ್ತಲಿದ್ದೆ. ಕಿವಿಯ ಮೇಲಿಂದ ಹಿಂಭಾಗದವರೆಗೆ ಕಾಲುವೆ ತೋಡುವಂತೆ ಕತ್ತರಿಯ ಮೊನೆ ತಿಕ್ಕುತ್ತಾ ಹೋದ. ಉರಿಗೆ ತಲೆ ಕೊಡವಿದೆ.

‘ಕೂದಲು ಕತ್ತರಿಸ್ತಾ ಇದ್ದೀರೋ...ಕೀಳ್ತಾ ಇದ್ದೀರೋ....’ ನಾನೂ ನಕ್ಕೆ ಬಹಳ ಹೊತ್ತು.
‘ನೀವೇನು ಹೆದರಬ್ಯಾಡಿ... ಹೀರೋ ಮಾಡ್ವ ನಿಮ್ಮನ್ನ... ಸುಮ್ಮನೆ ಕುಂತ್ಗಳಿ ಸಾಕು...’ ಎಂದ. ಅಂದರೆ ಭಾಷೆ ಧಾರವಾಡದ್ದಲ್ಲ. ಆಸಾಮಿಯೂ ನನ್ನಂತೆ ಊರುಬಿಟ್ಟು ಬಂದ ವಲಸಿಗ ಅನ್ನಿಸುತ್ತಲೇ ಚೂರು ಹತ್ತಿರದವ ಅನ್ನಿಸಿ ‘ಹೆಸರು...’ ಎಂದೆ.

ಅಷ್ಟರಲ್ಲೇ ಚೈನಾ ಸೆಟ್ಟೊಂದು ಗಂಟಲು ಬಿರಿಯುವಂತೆ ಕೂಗಿ ಕಟಿಂಗು ಮಾಡುತ್ತಿದ್ದವನ ತುಸು ದೂರ ಕರೆದೊಯ್ದಿತು.ಕುಳಿತ ಕುರ್ಚಿಯ ಪಕ್ಕದಲ್ಲಿದ್ದ ಮತ್ತೊಂದು ಕುರ್ಚಿಯಲ್ಲಿದ್ದ ಆಸಾಮಿ ಸಮ್ಮತಿ ಪಡೆದು ಸಿಗರೇಟು ಹಚ್ಚಿದ.
‘ಇವತ್ತು ಗಿರಾಕಿಯೇ ಇಲ್ಲ...’ ಎಂದು ಗಡ್ಡ ಜೋಲಿಸಿದ.
‘ಒಳ್ಳೆಯದೇ ಆಯ್ತು. ಬೇಗ ನಮ್ಮ ಪಾಳಿ ಬರತ್ತೆ ಬಿಡಿ...’ ಮುಖ ನೋಡಿದೆ.
‘ಹೌದಪ್ಪಾ ನಿಮಗೆ ಆರಾಮು... ಆದರೆ ಅಂಗಡಿ ನಂದಲ್ವೆ’
‘ಮತ್ತೆ ಅವರು...’
‘ನನ್ನ ತಂಗಿ ಗಂಡ... ಘಟ್ಟದ ಕೆಳಗಿನವ...’
‘ಓ...ಹೋ...’ ಎಂದಿದ್ದಕ್ಕೆ ಅವರೇನೂ ಉತ್ತರಿಸಬೇಕಿರಲಿಲ್ಲ.
ಹೊರಳಿ ಬಂದವನೇ ಕಟಿಂಗಿಗೂ ಮಾತಿಗೂ ಶುರುವಿಟ್ಟ.
‘ಈ ಬಾರಿ ಶಿರಸಿ ಜಾತ್ರೆ ಉಂಟಲ್ಲವೇ...’
‘ಇಲ್ಲ.. ಎರಡು ವರ್ಷಕ್ಕೊಮ್ಮೆ ಜಾತ್ರೆ. ಹಿಂದಿನ ವರ್ಷ ನಡೆದಿತ್ತಲ್ಲ ಹಂಗಾಗಿ ಈ ವರ್ಷ ಬ್ಯಾಡದ ವೇಷ’
‘ಈಗಲೂ ಕೋಣ ಕಡೀತಾರೆ ಅಲ್ವೆ...’
‘ಇಲ್ಲ... ಇಲ್ಲ... ಸಿರಿಂಜಿನಲ್ಲಿ ರಕ್ತ ತೆಗೆದು ಅಭಿಷೇಕ ಮಾಡ್ತಾರೆ ದೇವಿಗೆ...’
‘ಮಾರಿ ಕೋಣ ನೋಡಕ್ಕೆ ಬಾರಿ ಚಂದ... ರೊಣೆಯಿಲ್ಲದೆ ಬೋಳಾಗಿ ಮೈ ತುಂಬಿಕೊಂಡು...ಆಹಾ...’
‘ಹ್ಞೂಂ...’

ಮಾತಿಗೂ ಕೆಲಸಕ್ಕೂ ಸ್ಪರ್ಧೆ ಏರ್ಪಟ್ಟಂತೆ ಕಟಿಂಗು ಸಾಗಿಯೇ ಇತ್ತು... ಇವರು ಕಟಿಂಗು ಮಾಡುವಾಗ ಮಾತಾಡುವುದು ಕಟಿಂಗಿನಲ್ಲಿ ಎಡ್ರ ಪಡ್ರ ಆದದ್ದು ಗಿರಾಕಿಗೆ ಗೊತ್ತಾಗದಿರಲಿ ಎಂಬ ಕಾರಣಕ್ಕೋ ಎಂದನಿಸಿ ಕನ್ನಡಿ ನೋಡಿದೆ ಪರವಾಗಿಲ್ಲ ದೇವಸ್ಥಾನದ ಮೆಟ್ಟಿಲು ಕೆತ್ತಿಲ್ಲ ಸಮಾಧಾನ ಪಟ್ಟೆ. ಬದಿಗೆ ಕುಂತಿದ್ದವ ಸುಮ್ಮನಿರು ಎಂದು ನನಗೆ ಸನ್ನೆ ಮಾಡಿದ ಯಾಕೆ ಎಂದು ತಿಳಿಯದೆ ನಾನು ಕಂಗಾಲಾದೆ.

‘ಡ್ರಿಂಕ್ಸ್ ಮಾಡ್ತೀರಾ...?’ ಹಜಾಮ ಪಿಸುಗುಟ್ಟಿದ.

ವಿಚಿತ್ರ ಅನಿಸಿ ಮಾತಾಡದೇ ಸುಮ್ಮನಿದ್ದೆ. ಇಷ್ಟು ಕೇಳಿದ ಮೇಲೆ ಯಾಕೋ ಅವನ ಬಾಯಿಂದ ಕಂಟ್ರಿ ಬ್ರಾಂದಿಯ ವಾಸನೆ ಹೊಮ್ಮುತ್ತಿರುವುದು ಪ್ರಜ್ಞೆಗೆ ಬಂತು.

‘ಕಾಲ ಕೆಟ್ಟೋಗಿದೆ ಬಿಡಿ’ ಎಂದ.

ದೊಡ್ಡದೊಂದು ಮಾತಿನ ಬಂಡಿ ಹೊರಡುವ ಮುನ್ನ ಚಕ್ರದ ಎದುರಿಗಿಟ್ಟು ಮೆಟ್ಟಿ ಅಪ್ಪಚ್ಚಿಯಾಗುವ ನಿಂಬೆಹಣ್ಣು ನಾನಾದೆನೋ ಅನ್ನಿಸಿತು. ಬದಿಯವ ಮತ್ತೆ ನಸುನಕ್ಕ.

ಶಿರಸಿಯಲ್ಲೂ ತಾನು ಎರಡು ವರ್ಷ ಇದ್ದುದ್ದಾಗಿಯೂ ಜಾತ್ರೆಗೆ ಹಲವು ಬಾರಿ ಬಂದದ್ದಾಗಿಯೂ ಕೋಟೆಕೆರೆ, ಸಿ. ಪಿ. ಬಜಾರ ಮುಂತಾದ ಕಡೆ ಸ್ನೇಹಿತರಿರುವುದಾಗಿಯೂ ಸಲೂನಿನವ ಹೇಳುತ್ತಿದ್ದರೆ ಇದ್ದಿರಬಹುದು ಎಂಬಂತೆ ತಲೆಯಾಡಿಸುತ್ತಾ ಕುಂತಿದ್ದೆ.

‘ಏನೇ ಹೇಳಿ ಕುಡೀಬಾರ್ದು...’
‘ಹ್ಞೂಂ...’ ಅಂದೆ. ಇದೆಂತಾ ಆಸಾಮಿಯಪ್ಪ ಕುಡಿದುಕೊಂಡೇ ಹೀಗೆ ಹೇಳ್ತಾನೆ ಎನ್ನುತ್ತಾ.
‘ಹೋಳಿ ಗೊತ್ತಲ್ಲ...’
‘ಗೊತ್ತು...’
‘ಶಿರಸಿಯಲ್ಲೂ ಜೋರು ಅಲ್ವಾ...’ ಪೇಪರಿನಲ್ಲಿ ಸುತ್ತಿಟ್ಟಿದ್ದ ಪಾನು ತುರುಕಿಕೊಂಡ.
‘ಧಾರವಾಡದಷ್ಟೇನು ಅಲ್ಲ...’ ಅಂದೆ.

‘ಇದೆಂತ ಜೋರು ಕರ್ಮದ್ದು. ಇಲ್ಲಿ ಬರಿ ಗಲಾಟೆ...ಆಚರಣೆ ಇಲ್ಲ...ಕುಡುದು...ಕುಡದು ಗಲಾಟಿ ಮಾಡುದು...ಹಿಂದಿನ ವರ್ಷದ ಕೇಸು ಗೊತ್ತಿಲ್ಲ?...ಏ..ದೊಡ್ಡ ರಾಮಾಯಣ...ಒಂದು ಅಮ್ಮ ಮಗಳಿಗೆ ಬಣ್ಣ ಹಚ್ಚು ನೆಪದಲ್ಲಿ ಅಡ್ಡ ಹಾಕಿ ಮೈ ಮೇಲೆಲ್ಲಾ ಕೈ ಹಾಕಿ...ಪ್ಯಾಂಟಿ ಎಲ್ಲ ಎಳದಾಡಿ....ಥೋ...ಹೇಳಿ ತೀರುದಲ್ಲ...ಅಬ್ಬೆ ಎದ್ರಿಗೆ ಮಗಳಿಗೆ...ಮಗಳ ಎದ್ರಿಗೆ ಅಬ್ಬೆಗೆ...’

‘ಹೌದಾ...’
‘ಅಷ್ಟೇ ಅಲ್ಲ....ಹಬ್ಬ ಅಂದ್ರೆ ಬಣ್ಣ ಹಚ್ಚುದ...ತೋಕುದ...?..ಮೊಟ್ಟೆ ಹೊಡುದು...ನೀರ ಸಂತಿಗೆ ಗಂಜಲ ಕೂಡ್ಸಿ ಸೋಕುದು...ಎಲ್ಲ ನಡಿತದೆ....’
ಹೋಳಿಯ ಆರ್ಭಟ ಗೊತ್ತಿಲ್ಲದೆ ದಂಗಾದೆ.
‘ಹೋಳಿ ಟೇಮಲ್ಲಿ ಖೂನಿ ಆಗಿತ್ತು...’
‘ಮತ್ತೆ ಪೋಲಿಸರು...’
‘ಎಷ್ಟ ಕಡೆ ಅಂತ ಪೋಲಿಸರು ಇರದು....ಜನ ಹೆಚ್ಚಾ ಪೋಲಿಸರಾ ಹೇಳಿ ನಂಬರಲ್ಲಿ...’

ಸಲೂನಿನವನ ಮಾತಿಂದಾಗಿ ಹೋಳಿ ಹಬ್ಬವೇ ವಿರೂಪಗೊಂಡು ಬಣ್ಣ ಸೋಕುವುದೆಲ್ಲ ಕಾರದಪುಡಿ ಎರಚಿದಂತಾಗಿ ಏನೂ ಮಾತಾಡದೆ ಸುಮ್ಮನಿದ್ದಾಗ

‘ಮುಂಚೆ ಹಿಂಗಿರಲಿಲ್ಲ...’ ಎಂದ...
ಖುಷಿಯಿಂದ ಬಣ್ಣ ಆಡಿ ಊರಿಗೆಲ್ಲ ಊಟ ಹಾಕಿ ಆ ಸೊಗಸು ಬೇರೆ ಇತ್ತು ಎಂದು ಹೇಳುವಷ್ಟು ಹೊತ್ತಿಗೆ ಕಟಿಂಗು ಮುಗಿದಿತ್ತು.
‘ಸ್ವಲ್ಪ ತಲೆನೋವು ತಲೆತಟ್ಟಿಕೊಡ್ತೀರಾ?’ ಅಂದೆ.

ಕೈ ಬೆರಳನ್ನು ಒಂದು ಲಯದಲ್ಲಿ ಆಡಿಸುತ್ತಾ ಲಟಿಗೆ ತೆಗೆದಂತೆ ಸದ್ದು ಮಾಡುತ್ತ ತಲೆಯ ಮೇಲೆ ತಟ್ಟುತ್ತಿದ್ದರೆ ಇಷ್ಟೊತ್ತು ಆಡಿದ ಮಾತುಗಳೆಲ್ಲ ನೆನಪುಗಳ ಸುರುಳಿಯಾಗಿ ತಲೆಯ ಮೂಲೆಗಳಲ್ಲಿ ಸಂದಿನಲ್ಲಿ ಮರಳು ಇಳಿವಂತೆ ಕೂಡ್ರುತ್ತಿದ್ದವು.

ಆಸಾಮಿ ವಿಚಿತ್ರ ಎನಿಸಿ ‘ಇನ್ನೂ ಚೂರು ಸಣ್ಣಗಾಗಬೇಕಿತ್ತು ಕೂದಲು ಎಂದೆ’ ಇನ್ನಷ್ಟು ಗಳಿಗೆ ಮಾತು ಕೇಳಬೇಕೆನಿಸಿ, ಅವನ ಮಾತು ಒಂದು ವಿಷಯಕ್ಕೆ ಅಂಟಿರುತ್ತಿರಲಿಲ್ಲ. ಮನಸ್ಸಿನ ಕಲ್ಪನಾವಿಲಾಸದಂತೆ ಈಗ ಇಲ್ಲಿದ್ದರೆ ಅರೆಗಳಿಗೆಗೆ ಮತ್ತೆಲ್ಲೋ...ಮಾತು ಬಿದ್ದಷ್ಟೆ ವೇಗದಲ್ಲಿ ಆವಿಯಾಗುತ್ತಿದ್ದವು. ಮತ್ತೊಂದು ಮಾತು ಅಲ್ಲಿ ಅದೇ ಜಾಗದಲ್ಲಿ ಬಿದ್ದಿರುತ್ತಿತ್ತು.

‘ಆಯ್ತು ನೀವು ಹೇಳಿದಂತೆ ಮಾಡುದೆ ನಮ್ಮ ಕೆಲಸ...’ ಎಂದು ಶುರುವಾದ.

‘ನಿಮಗೆ ಗೊತ್ತ...’
‘ಏನು...’
‘ನಾವು ನೋಡುಕಷ್ಟೇ ಹಿಂಗೆ...’
‘ಅಂದ್ರೆ...’
‘ಯಾರ್ರರಿಗೆ ಕಟಿಂಗು ಮಾಡಿದ್ದೆ ಹೇಳಿ ಒಂದು ಅಂದಾಜಿದ್ಯ ನಿಮ್ಗೆ...’
‘ಯಾರಿಗೆ...’
‘ನೀವು ಹೇಳಿ ನೋಡ್ವ...’
‘ಏ ಗೊತ್ತಿಲ್ಲ ಹೇಳಿ’ ರೇಗಿದೆ
‘ಉಪೇಂದ್ರ...’
‘ಏನು?...’
‘ಹೌದು ಉಪೇಂದ್ರ...ಇಪ್ಪತ್ತು ವರ್ಷದ ಹಿಂದೆ ನಮ್ಮ ಹೊನ್ನಾವರದ ಅಂಗಡಿ ಇದ್ದ ಹೊತ್ತಲ್ಲಿ’
‘ಓಹೋ...ಜೋರಿತ್ತು ಆಟ ನಿಮ್ದು ಹಂಗಾದ್ರೆ...’ ನಕ್ಕೆ.
ಅವನು ನನ್ನನ್ನು ಮೀರಿಸಿ ಉಸಿರು ನೆತ್ತಿಗೆ ಸಿಕ್ಕವನಂತೆ ನಕ್ಕು ಮೈಯೆಲ್ಲ ಕೊಡವಿದ.

ಎಷ್ಟಾಯಿತು ಎಂದೆನ್ನುತ್ತಾ ಜೇಬು ತಡಕಾಡುತ್ತಿರುವಾಗ ಮೆಲ್ಲಗೆ ಎಂಬತ್ತು ಎಂದ. ತಲೆ ಗಿರುಗುಟ್ಟಿ‘ಇದೇನಪ್ಪ ಕಾಸ್ಟ್ಲಿ ಆಯಿತಲ್ಲ’ ಎಂದೆ.

ಏನೂ ಮಾತಾಡದೆ ಸುಳಿಮಿಳಿ ಮಾಡುತ್ತ ಸುತ್ತುವರಿಯತೊಡಗಿದ. ನೂರು ರುಪಾಯಿ ನೋಟು ಕೊಟ್ಟೆ..ಮೂವತ್ತು ಪರತ್ ಕೊಟ್ಟು ಡಿಸ್ಕೌಂಟು ಎಂದ. ನಲವತ್ತು ರೂಪಾಯಿ ಮಾತ್ರ ಡ್ರಾಯರಿಗೆ ಹಾಕಿದ ಎಂಬುದು ನನ್ನ ಗ್ರಹಿಕೆ.

‘ಸರಿ’ ಎಂದು ಮತ್ತೊಮ್ಮೆ ಕ್ರೋಪು ಬಾಚಿ ಹಾಸ್ಟೆಲಿನ ಕಡೆ ಹೊರಟೆ. ಅಂಗಡಿಯಿಂದ ಹೊರ ಬಂದು ತುಸುದೂರ ಬಂದಾಗ ಅವನ ನೆರಳು ಅವನನ್ನು ಜಗ್ಗಿಕೊಂಡು ಎದುರಿಗಿನ ವೈನ್ ಶಾಪಿನ ಕಡೆಗೆ ಓಡಿತು.

ಫುಲ್ಲು ಕುಡಿದು ಮನೆಯಲ್ಲಿರುವ ಮಕ್ಕಳಿಗೆ ಚಾಕೋಲೇಟು ಒಯ್ಯುವ ಅಪ್ಪಂದಿರನ್ನು ನೋಡಿದ್ದೇನೆ. ಪ್ರೀತಿ ಇದ್ದಿರಬಹುದು, ಅದು ಸೆಕೆಂಡರಿ. ಆದರೆ ಇದು ಡೆಮೇಜು ಕಂಟ್ರೋಲಿಂಗು ಎಂದು ಅನ್ನಿಸಿತು. ಹಂಗಾದರೆ ಈ ಸಲೂನಿನವ ಇಷ್ಟೊಂದು ಸುಳ್ಳುಗಳನ್ನ ಪೋಣಿಸಿ ಸುಳ್ಳು ಸುಳ್ಳೇ ಶಿರಸಿ, ಹೊನ್ನಾವರ ಎನ್ನುತ್ತಾ ಗಿರಾಕಿಗೆ ಹತ್ತಿರಾಗುತ್ತ, ಕುಡಕೊಂಡೇ ಕುಡಿವವರಿಗೆ ಬಯ್ಯುತ್ತ ಕೊನೆಗೆ ಉಪೇಂದ್ರನಿಗೆ ಕಟಿಂಗು ಮಾಡಿದ್ದೇನೆ ಎಂದು ಬಿಟ್ಟನಲ್ಲ..! ಇವನಿಗೆಂತ ಕಾಯಿಲೆ? ಮೇಲ್ನೋಟಕ್ಕೇ ಹಸಿಸುಳ್ಳು ಬೋಗಸ್ಸು ಎನಿಸಿಕೊಳ್ಳುವ ಮಾತುಗಳನ್ನು ಆಡುತ್ತಾನಲ್ಲ ಎಂಬ ಯೋಚನೆಯ ಗುಂಗಿನಲ್ಲೇ ನಡೆದದ್ದು ಖಬ್ರಿಲ್ಲದಂತೆ ಕಾಲು ಎಡವುತ್ತಾ ಗೂಡು ಸೇರಿದೆ.

ಸ್ನಾನ ಮುಗಿಸಿ ರೂಮಿಗೆ ಬಂದು ಸಿಗರೇಟು ಹೊತ್ತಿಸುವ ಹೊತ್ತಿಗೆ ಧುತ್ತನೆ ಕಿರೋಸ್ತಾಮಿಯ ಕ್ಲೋಸಪ್ಪು ತಲೆಗೆ ಬಂತು. ಎಷ್ಟೋ ಬಾರಿ ನೋಡಿದ ಫಿಲ್ಮನ್ನು ಮತ್ತೆ ನೋಡಿದೆ. ಖಾಲಿಯಾದ ಬಾಟಲನ್ನು ಒದೆಯುತ್ತ ಸಾಗುವ ಶಾಟ್‌ನಿಂದ ಸಿನಿಮಾ ಶುರುವಾಯಿತು. ತವಕ ಕಾಲಹರಣಕ್ಕೆ ಅವಕಾಶ ಕೊಡಲಿಲ್ಲ. ಬೇಕಿದ್ದದ್ದು ಮಾತ್ರ ನೋಡು ಎಂದು ಹೇಳಿಕೊಂಡೆ.

ಸಬ್ಜಿಯಾನ ಎಂಬವ ಸೈಕ್ಲಿಸ್ಟ್‌ ಸಿನಿಮಾ ನೋಡಿಕೊಂಡು ಅದೇ ಹೆಸರಿನ ಪುಸ್ತಕ ಹಿಡಿದು ಹೆಂಗಸೊಬ್ಬಳಿಗೆ ಬಸ್ಸಿನಲ್ಲಿ ಸಿಕ್ಕು ತಾನೇ ಮಕ್ಮಲ್ಬಾಪ ಈ ಪುಸ್ತಕ ಬರೆದವ ಎಂದು ತನ್ನನ್ನು ಪರಿಚಯಿಸಿಕೊಂಡು ಮುಂದಿನ ಚಿತ್ರಕ್ಕೆ ವಸ್ತು ಹುಡುಕಲು ಪಬ್ಲಿಕ್ ಟ್ರಾನ್ಸ್‌ಪೋರ್ಟಿನಲ್ಲಿ ಬಂದೆ ಎಂದು ಸಮಜಾಯಿಸಿ ಹೇಳುವುದು. ಆಕೆಯ ಮನೆಗೆ ಹೋಗಿ ಇಲ್ಲಿ ಚಿತ್ರೀಕರಣ ಮಾಡುತ್ತೇನೆಂದು ಹೇಳಿ ಮಕ್ಮಲ್ಬಾಪನಾಗಿ ಬದುಕುತ್ತ ಕೊನೆಗೊಮ್ಮೆ ಮನೆಯವರಿಗೆ ಅನುಮಾನ ಬಂದು ಪೊಲೀಸರಿಗೆ ಕಂಪ್ಲೇಂಟು ಕೊಟ್ಟು ಅವರು ಬರುವಾಗ ಒಬ್ಬನೇ ಮನೆಯೊಳಗೆ ಸೋಫಾ ಒಂದರ ಮೇಲೆ ಅನಾಥವಾಗಿ ಕುಳಿತಿರುವುದು ಎಲ್ಲವನ್ನ ಹಕ್ಕಿ ಹಣ್ಣು ಕುಕ್ಕಿದಂತೆ ಅಲ್ಲಲ್ಲಿ ನೋಡಿ ಕಿರೋಸ್ತಾಮಿಗೆ ಕೈಮುಗಿದು ಕ್ಯಾಮೆರಾ ಕೈಗೆತ್ತಿಕೊಂಡು ಸಲೂನಿನತ್ತ ಓಡಿದೆ.

ಬಸ್ಸಿನಲ್ಲಿ ಮತ್ತೆ ಕ್ಲೋಸಪ್ಪು ನೋಡುತ್ತಾ ಹೋದೆ. ಸಬ್ಜಿಯಾನನ ಅರೆಸ್ಟು ಮಾಡಿ ಕೋರ್ಟಿನಲ್ಲಿ ವಿಚಾರಣೆ ಮಾಡುವಾಗ ಜಡ್ಜು ಕೇಳುವ ಪ್ರಶ್ನೆ, ಸಬ್ಜಿಯಾನನ ಸ್ಪಷ್ಟೀಕರಣ ಎಲ್ಲ ಮುಗಿದು ಅವನಿಗೆ ಮಾಫಿ ಸಿಕ್ಕಿ ಹೊರಬಂದು ಕೊನೆಗೆ ಮಕ್ಮಲ್ಬಾಪ– ಸಬ್ಜಿಯಾನ ಎದುರಾಗುತ್ತಾರೆ. ಒಂದೇ ಬೈಕಿನಲ್ಲಿ ಆ ಮಹಿಳೆಯ ಮನೆಗೆ ಹೋಗಿ ಹೂ ಬೊಕ್ಕೆ ಕೊಡುತ್ತಾರೆ. ನಂತರ ಮಕ್ಮಲ್ಬಾಪ ಕೇಳುತ್ತಾನೆ

‘ನಿನಗೆ ಮಕ್ಮಲ್ಬಾಪ ಆಗಿರುವುದು ಇಷ್ಟವೋ ಸಬ್ಜಿಯಾನನಾಗಿಯೋ?’ ಎಂದು ‘ನನಗೆ ನಾನಾಗಿ ಬದುಕುವ ಬದುಕು ಸಾಕಾಗಿದೆ’ ಇಲ್ಲಿಗೆ ಸಿನಿಮಾ ನಿಲ್ಲಿಸಿದೆ.

ಬಸ್ಸಿನಲ್ಲಿದ್ದೂ ಸದ್ದಿಲ್ಲದ ನಿರ್ವಾತದಲ್ಲಿದ್ದಂತಾಯ್ತು. ಹಿಂದಿರುಗಿ ನೋಡಿದೆ. ಮುಖ ಜೋಲಿಸಿ ಕುಂತ ಮುಖವಾಡದ ಅಂಗಡಿ ಚಲಿಸುತ್ತಿದೆ ಅನ್ನಿಸಿತು. ಬಸ್ಸಿನ ಕಿಟಕಿಯಿಂದ ಹೊರಗೆ ಕಣ್ಣಾಯಿಸಿದೆ. ಕಿರೋಸ್ತಾಮಿಯ ಸಿನಿಮಾಗಳ ಒಣಗಿದ ಜೋಳದ ಬಟಾಬಯಲು ಬೋಳುಗುಡ್ಡ ಮುಗಿಯದ ದಾರಿ ಇದೇ ಎನಿಸಿತು. ಮೆಲ್ಲಗೆ ಹಾರ್ನು ಸದ್ದು. ಕಣ್ಣು ಕುಕ್ಕಿದ ಬೆಳಕು. ಬೆಚ್ಚಿನಂತೆ ನಿಂತಿದ್ದ ಬಿಲ್ಡಿಂಗು ಕಂಡು ಇದೇ ಜಗತ್ತಿಗೆ ಮರಳಿಬಂದೆ. ಬಸ್ಸಿಳಿದು ನಡೆದು ಸಲೂನು ತಲುಪಿದೆ.

ಈಗಲೂ ಗಿರಾಕಿಗಳ ಗೌಜಿರಲಿಲ್ಲ. ಒಬ್ಬ ಕುಳಿತಿದ್ದ. ಸಲೂನಿನವನನ್ನು ಹುಡುಕಿದೆ. ಮತ್ತೂ ಚೂರು ಅಮಲು ಏರಿದವನಂತೆ ಕಂಡ. ನನ್ನನ್ನು ನೋಡುತ್ತಲೇ ‘ಅರೆ’ ಎನ್ನುತ್ತ ಬಳಿಬಂದ.

‘ಅದು...ಮೊಬೈಲು ಎಲ್ಲಿಬಿಟ್ಟೆ ಗೊತ್ತಾಗಲಿಲ್ಲ...’ ಗೊತ್ತಾಗದೆಯೇ ಸುಳ್ಳು ಜಿಗಿಯಿತು.
ಹುಡುಕಾಡಿದರು ಅಂಗಡಿ ತುಂಬೆಲ್ಲ. ಎದುರಿನ ಕನ್ನಡಿ ಗಿಸಕ್ಕೆಂದಿತು. ನಾಚಿ ಕಣ್ಣು ಬೇರೆಡೆ ಹೊರಳಿಸಿದೆ.
‘ಹೋಗಲಿ...ಇಲ್ಲಿ ಬಿಟ್ಟಿರಲಿಕ್ಕಿಲ್ಲ’ ಎಂದು ಹೊರಬಂದೆ.
‘ಅಲ್ಲ...ಮತ್ತಿನೇನಾದರೂ ಕೆಲಸವಿತ್ತ...?’ ಕೇಳಿದ ಸಲೂನಿನವ ಮನಸೊಳಗೆ ಹೊಕ್ಕಿ ನೋಡಿದವನಂತೆ.
‘ಅದೂ...ನಾನು ಶಾರ್ಟ್‌ ಫಿಲ್ಮು ಮಾಡ್ತೇನೆ...ನಿಮ್ಮ ಮೇಲೊಂದು ಮಾಡುವ ಎಂದು...’
‘ನನ್ನ ಮೇಲೆಂತ ಮಣ್ಣು ಮಾಡ್ತೀರಿ...ನಾ ಎಂತ ಹೀರೋ ಅಲ್ಲ...ಅದೆಲ್ಲ ಬೇಡ’ ನಗುತ್ತಲೇ ತಿರಸ್ಕರಿಸಿದ.
‘ಆಕ್ಟಿಂಗು ಏನೂ ಇಲ್ಲ...ಅಂಗಡಿ ಮೂಲೆಯಲ್ಲಿ ಕ್ಯಾಮೆರಾ ಇಡುತ್ತೇನೆ. ನೀವು ದಿನದಂತೆಯೇ ಕಟಿಂಗು ಮಾಡುತ್ತಾ ಗಿರಾಕಿಯ ಜೊತೆ ಮಾತಾಡಿ’ ಎಂದೆ.
ಎಲ್ಲಿದ್ದನೋ ಅಂಗಡಿ ಮಾಲೀಕ ಬುಸುಗುಟ್ಟುತ್ತ ಎದುರಿಗೆ ಅವತರಿಸಿ
‘ಇದೆಲ್ಲ ಡೊಂಬರಾಟ ಬೇಡ. ಬೋಳಿಮಗ ಹೊಡದು ಬಡದು ಹೆಂಡತಿ ಕೊಂದು ವಶಿಪಟ್ಟಿ ಕಾಲದಲ್ಲಿ ಮನೆಮಾರಿ ಚರಂಡೀಲಿ ಬಿದ್ದವನ ತಂದು ಕೆಲಸಕ್ಕೆ ಹಚ್ಚಿದರೆ ಕೆಲಸ ನೆಟ್ಟಗೆ ಮಾಡ ಯೋಗ್ಯತೆ ಇಲ್ಲ...ಕೈ ಸಾಲ ಮಾಡ್ತಾ ಇರದು ಸಾಲ್ದೆ ಪಿಚ್ಚರು ಹೀರೋ ಆಗವನಂತೆ...ನೀವು ಹೋಗ್ರಿ ಸುಮ್ಮನೆ...’ ಇಬ್ಬರಿಗೂ ದಬಾಯಿಸಿದ.

ಅಳುವ ಮುಸುಡಿ ಹೊತ್ತು ನಿಂತೇ ಇದ್ದೆ. ಕೆಲಹೊತ್ತಿನ ನಂತರ ಹೊರಳಿ ಹೆಜ್ಜೆ ಕಿತ್ತಿಡತೊಡಗಿದೆ. ಸಲೂನಿನವ ನನ್ನನ್ನು ಹಿಂಬಾಲಿಸಿ ಬಂದ.
‘ಹೊರಗೆಲ್ಲಾದರೂ ಮಾಡುವ ಸಿನೆಮಾವ...ಅವ್ನ ಮಾತಿಗೆಲ್ಲ ತಲೆಕೆಡಿಸ್ಗಬೇಡಿ’ಎಂದು ಹೇಳುತ್ತಿರುವಾಗವನ ಭಾವ ಮತ್ತೆ ಹೊರಬಂದ.
‘ಏನ್ ಹಲ್ಕಟ್ ಗಿರಾಕಿ ಬರ್ತವೆ ನೋಡಿ...ನೆಟ್ಟಗೆ ಕೆಲಸ ಮಾಡ್ತಾ ಇದ್ದವನ ತಲೆಗೆ ...ಲು ಹಚ್ಚಕೆ’ ಎಂದು ಕಟಿಂಗು ಮಾಡುವ ವಸ್ತ್ರ ಕೊಡವಿ ಒಳಹೋದ

‘ನಿಮಗೆ ಮತ್ತೊಂದು ವಿಚಾರ ಗೊತ್ತ... ನಾನು ಉಪೇಂದ್ರನ ಕಟಿಂಗು ಮಾಡಿದ್ದಷ್ಟೇ ಅಲ್ಲ... ಒಂದಿನ ಹಿಂಗೇ ಉಪೇಂದ್ರ ಮನೆಗೆ ಕರೆಸಿದ್ದ ಕಟಿಂಗು ಮಾಡಿಸೋಕೆ. ನಾನು ಕುರ್ಚಿ, ಹಣಿಗೆ, ಕನ್ನಡಿ ಎಲ್ಲ ಒಪ್ಪಾಗಿಟ್ಟು, ಕನ್ನಡಿ ನೋಡುತ್ತ ಚೆನ್ನಾಗಿ ಬೆಳೆದಿದ್ದ ಕೂದಲು ಹಿಡಿದು ಕನ್ನಡಿ ನೋಡುತ್ತ ಮಕ್ಕಳಿಗೆ ಹಾಕುವಂತೆ ಜುಟ್ಟು ಹಾಕಿಕೊಳ್ಳುತ್ತಿದ್ದೆ. ಕನ್ನಡಿಯಲ್ಲಿ ಯಾರೋ ಬಂದದ್ದು ಕಂಡು ಹಿಂದಿರುಗಿದರೆ ಉಪೇಂದ್ರ!’

‘ಏ  ತುಂಬಾ ಚನ್ನಾಗಿದೇರಿ....ಇದನ್ನ ನಾನು ಸಿನೆಮಾದಲ್ಲಿ ಯೂಸ್ ಮಾಡ್ತೇನೆ ಅಂದರು. ಮುಂದೆ ಗೊತ್ತಲ್ಲ ಉಪೇಂದ್ರ ಸಿನೆಮಾ’ ಎಂದು ಓಡಿಹೋದ.

ನೋಡುತ್ತಲೇ ನಿಂತೆ. ಇವಂಗೂ ಸಬ್ಜಿಯಾನಗೂ ಫರಕೇ ಇಲ್ಲ ಎಂದು ಮನಸ್ಸಿನಲ್ಲೇ ಬಯ್ದೆ. ತಿರುಗಿ ಬಂದು ಬಸ್ಸು ಹತ್ತಿದೆ. ಬ್ಯಾಗಿನೊಳಗಿಂದ ಸದ್ದು ಬರಹತ್ತಿತು ನೋಡಿದೆ.

‘ನೀನೂ ಕಿರೋಸ್ತಾಮಿ ಅಲ್ವೇನೋ... ಚಂದ್ರನ ಎದುರಿಗೆ ಬೆಳಕು ತೋರಿಸುವವನೆ... ಸಬ್ಜಿಯಾನ... ಏ ಸಬ್ಜಿಯಾನ’ ಎಂದು ಕ್ಯಾಮೆರಾ ಮತ್ತು ಚೂರುಪಾರು ಚಿತ್ರೀಕರಿಸಿ ದಡಹತ್ತದೇ ಇದ್ದ ಫೂಟೇಜುಗಳೆಲ್ಲ ರೂಮು ತಲುಪುವವರೆಗೂ ಅಣಕಿಸುತ್ತಲೇ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT