ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕೇಶ್‌ ಬುದ್ಧಿವಂತಿಕೆ ಹಿಂದಿನ ಶಕ್ತಿ ಯಾವುದು?

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ, ಪತ್ರಕರ್ತ, ಚಲನಚಿತ್ರ ನಿರ್ದೇಶಕ, ನಟ –ಹೀಗೆ ಬಹುಮುಖ ಪ್ರತಿಭೆಯ ಪಿ.ಲಂಕೇಶ್‌ ಅವರ ಬುದ್ಧಿವಂತಿಕೆಯ ಹಿಂದಿನ ಶಕ್ತಿ ಯಾವುದು?

ಲಂಕೇಶ್‌ ಪುತ್ರ ಇಂದ್ರಜಿತ್‌ ಲಂಕೇಶ್‌ ಪ್ರಕಾರ ಅವರ ಸಾಧನೆಗಳಿಗೆಲ್ಲ ‘ದೈವಶಕ್ತಿ’ಯೇ ಕಾರಣ.

ಇತ್ತೀಚೆಗೆ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ‘ಬಸವಣ್ಣ ಅವರ ಹಾದಿಯಲ್ಲಿ ಜನನಾಯಕರು’ ಕಾರ್ಯಕ್ರಮದಲ್ಲಿ ಇಂದ್ರಜಿತ್‌ ಅವರು ಈ ಬಗ್ಗೆ ವಿವರಿಸಿದ್ದು ಹೀಗೆ...

‘ತಂದೆ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ. ಆಗ ಊರಿನಲ್ಲಿ ಅದ್ಭುತ ಘಟನೆಯೊಂದು ನಡೆದಿತ್ತು. ನಮ್ಮ ತಾತ ಬಡ ರೈತ.

ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಅವರು ಸ್ವಾಮೀಜಿಗಳಿಗೆ ಆತಿಥ್ಯ ನೀಡುವಷ್ಟು ಸ್ಥಿತಿವಂತರಾಗಿರಲಿಲ್ಲ.  ಅವರು ಆಹ್ವಾನ ನೀಡದಿದ್ದರೂ  ಕಾಶಿ ಸ್ವಾಮೀಜಿ ಹಾಗೂ   ಕರ್ನಾಟಕದ ಇಬ್ಬರು ಸ್ವಾಮೀಜಿಗಳು ತಾತನ ಮನೆಗೆ ಭೇಟಿ ಕೊಟ್ಟಿದ್ದರು. ಮನೆಯಲ್ಲಿ 15 ದಿನಗಳವರೆಗೆ  ಪೂಜೆ ಸ್ವೀಕರಿಸಿದ್ದರು.’

‘ತಂದೆಯ ಅಣ್ಣ, ಅಕ್ಕ ಓದಲಿಲ್ಲ. ಅವರು ಹಳ್ಳಿಯಲ್ಲೇ ಇದ್ದರು. ಆದರೆ, ನಮ್ಮ ತಂದೆ ಚೆನ್ನಾಗಿ ಓದಿ ವಿದ್ಯಾವಂತರಾದರು. ಮುಂದೆ, ಪ್ರಾಧ್ಯಾಪಕರಾಗಿ, ಚಲನಚಿತ್ರ ನಿರ್ದೇಶಕರಾಗಿ, ಮೊದಲ ಚಿತ್ರಕ್ಕೇ ಸ್ವರ್ಣ ಕಮಲ ಪ್ರಶಸ್ತಿ ಪಡೆದರು. ಪತ್ರಕರ್ತರಾಗಿ ಕಾಂಗ್ರೆಸ್‌ ಸರ್ಕಾರ ಬೀಳಿಸುವುದಕ್ಕೂ ಕಾರಣರಾಗಿದ್ದರು.’

‘ಆ 15 ದಿನಗಳವರೆಗೆ ಸ್ವಾಮೀಜಿಗಳು ನಮ್ಮ ಮನೆಯಲ್ಲಿ ಪೂಜೆ ಮಾಡಿದ್ದರಿಂದ  ಇದೆಲ್ಲವೂ ಸಾಧ್ಯವಾಗಿದೆ. ಆ ದೈವಶಕ್ತಿಯಿಂದ ನಮ್ಮ ತಂದೆ ದೈತ್ಯಶಕ್ತಿಯಾಗಿ ಬೆಳೆದರು.’

‘ನಮ್ಮ ತಂದೆಯನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.  ಸ್ವಾಮೀಜಿ, ಜಗದ್ಗುರುಗಳ ಜತೆ ಅವರು ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಸಿದ್ಧಗಂಗಾ ಮಠದ ಬಗ್ಗೆ ಅಭಿಮಾನ ಇತ್ತು. ಸಿರಿಗೆರೆ ಮಠದಲ್ಲಿ ಮೂರು ದಿನ ವಾಸಮಾಡಿದ್ದರು. ಪೇಜಾವರ ಶ್ರೀಗಳೊಂದಿಗೆ  ಒಡನಾಟ ಇತ್ತು’ ಎಂದು ವಿವರಿಸಿದರು.

‘ಗಿರೀಶ್‌ ಕಾರ್ನಾಡ್‌, ಎಂ.ಎಂ.ಕಲಬುರ್ಗಿ, ಕಂಬಾರ ಅವರೂ ಬಸವಣ್ಣನ ಬಗ್ಗೆ ಬರೆದಿದ್ದಾರೆ. ಆದರೆ, ನಮ್ಮ ತಂದೆ ಬರೆದ ‘ಸಂಕ್ರಾಂತಿ ನಾಟಕಕ್ಕೆ ಹೆಚ್ಚಿನ ಮಹತ್ವ, ಶಕ್ತಿ ಇದೆ. ಅವರು ವೀರಶೈವರಾಗಿ ಇದ್ದಿದ್ದರಿಂದ ಧರ್ಮ, ಜಾತಿಯ ಬಗ್ಗೆ ಗೊತ್ತಿತ್ತು. ಈ ಬಗ್ಗೆ ಅವರು, ನಾನು ವೀರಶೈವನಾಗಿದ್ದಕ್ಕೆ ಹೆಮ್ಮೆ ಇದೆ. ವೀರಶೈವನಾಗಿರದೇ ಇದ್ದಿದ್ದರೆ ಸಂಕ್ರಾಂತಿ ನಾಟಕ ಬರೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಪತ್ರಿಕೆಯಲ್ಲೇ ಬರೆದುಕೊಂಡಿದ್ದಾರೆ’ ಎಂದು ಇಂದ್ರಜಿತ್‌ ಮೆಲುಕು ಹಾಕಿದರು. ಇದನ್ನು ಕೇಳಿ ವರದಿಗಾರರು ಮೂರ್ಛೆಹೋಗುವುದು ಬಾಕಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT