ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ನ ಸಚಿನ್‌ ತೆಂಡೂಲ್ಕರ್‌

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ರೈಲ್ವೆಯಲ್ಲಿ ಟಿಕೆಟ್‌ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್‌ ದೋನಿ ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕ ಎನಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಭರತನಾಟ್ಯ ಪ್ರವೀಣೆಯಾಗಿ ಕಾರ್ಯಕ್ರಮ ನೀಡುತ್ತಿದ್ದ ಮಿಥಾಲಿ ರಾಜ್‌ ಭಾರತ ಕ್ರಿಕೆಟ್‌ ತಂಡದ ಯಶಸ್ವಿ ಆಟಗಾರ್ತಿಯಾಗಿ, ನಾಯಕಿಯಾಗಿ ಬೆಳೆದಿರುವ ಪರಿ ಅದ್ಭುತ.

17 ಅಥವಾ 18ನೇ ವಯಸ್ಸಿಗೆ ಕ್ರಿಕೆಟ್‌ ಆಡಲು ಶುರು ಮಾಡುವ ಯುವತಿಯರು ಸಾಮಾನ್ಯವಾಗಿ 23 ಅಥವಾ 24 ವಯಸ್ಸಿಗೆ ಬರುವಷ್ಟರಲ್ಲಿ ಆಟ ನಿಲ್ಲಿಸಿ ಬಿಡುತ್ತಾರೆ. ಅದಕ್ಕೆ ಶಿಕ್ಷಣ, ಉದ್ಯೋಗ, ಮದುವೆ, ಮಕ್ಕಳು, ಮನೆಯಲ್ಲಿ ಒತ್ತಡ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಇಂಥ ಅಡೆತಡೆಗಳನ್ನು ದಾಟಿ ನಿಂತು ಮಹಿಳಾ ಕ್ರಿಕೆಟ್‌ನಲ್ಲಿ ಮನೆಮಾತಾಗಿರುವ ಹೆಸರು ಮಿಥಾಲಿ ರಾಜ್‌. 35 ವರ್ಷದ ಅವರು 18 ವಸಂತಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೇ ಕಳೆದಿದ್ದಾರೆ. ಸಾಧನೆಯ ಪಯಣ ಇನ್ನೂ ಮುಂದುವರಿದಿದೆ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಯಶಸ್ವಿ ನಾಯಕಿ ಕೂಡ. ‘ಮಹಿಳಾ ಕ್ರಿಕೆಟ್‌ನ ಸಚಿನ್‌ ತೆಂಡೂಲ್ಕರ್‌’ ಎಂದೇ ಅವರನ್ನು ಕರೆಯುತ್ತಾರೆ. ಡಯಾನಾ ಎಡುಲ್ಜಿ, ಶಾಂತಾ ರಂಗಸ್ವಾಮಿ, ಅಂಜುಮ್‌ ಚೋಪ್ರಾ ಅವರಂಥ ಕ್ರಿಕೆಟಿಗರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಿಥಾಲಿ ವಿಶ್ವದಾಖಲೆ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 6,000 ರನ್‌ಗಳ ಗಡಿ ಮುಟ್ಟಿದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಅದು. ಈ ಮೂಲಕ ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್‌ (5,992 ರನ್‌) ದಾಖಲೆ ಅಳಿಸಿ ಹಾಕಿದ್ದಾರೆ. ಈ ಸಾಧನೆ ಮಾಡುತ್ತಿದ್ದಂತೆ ಮೊದಲು ಅಭಿನಂದಿಸಿದವರು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌. ಈ ಹಿಂದೆ ಮಿಥಾಲಿಗೆ ಕಾರಿನ ಉಡುಗೊರೆ ನೀಡಿದ್ದರು.

‘ಮಿಥಾಲಿ ಅವರ ಬೆಳವಣಿಗೆಯನ್ನು ನಾನು ಸನಿಹದಿಂದ ಬಲ್ಲೆ. 10ನೇ ವಯಸ್ಸಿನಲ್ಲೇ ಕ್ರಿಕೆಟ್‌ ಮೇಲೆ ಪ್ರೀತಿ ಬೆಳೆಸಿಕೊಂಡ ಅವರು ಈಗ ವಿಶ್ವದಾಖಲೆ ಮೂಲಕ ಮಹಿಳೆಯರ ಪಾಲಿಗೆ ಸ್ಫೂರ್ತಿಯ ಸೆಲೆ ಆಗಿದ್ದಾರೆ’ ಎಂದು ಟ್ವೀಟ್‌ ಮಾಡುವ ಮೂಲಕ ಕ್ರಿಕೆಟಿಗ ವಿ.ವಿ.ಎಸ್‌.ಲಕ್ಷ್ಮಣ್‌ ಅವರು ಮಿಥಾಲಿ ಸಾಧನೆಯನ್ನು ಕೊಂಡಾಡಿದ್ದಾರೆ.

ಮಿಥಾಲಿ ಕ್ರಿಕೆಟ್‌ ಪಯಣ ಹಲವು ಏಳುಬೀಳುಗಳಿಂದ ಕೂಡಿದೆ. ಅಜ್ಜ ಅಜ್ಜಿಯ ಒತ್ತಾಯಕ್ಕೆ ಬಿದ್ದ ಅವರು ಬಾಲ್ಯದಲ್ಲಿ ಭರತನಾಟ್ಯ ಕಲಿಯಲಾರಂಭಿಸಿದರು. ಅದರಲ್ಲೂ ಪ್ರತಿಭೆ ಮೆರೆದರು. ಬರೋಬ್ಬರಿ ಎಂಟು ವರ್ಷ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿವಿಧೆಡೆ ಪ್ರದರ್ಶನ ನೀಡಿ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದರು. ಕ್ರಮೇಣ ಅವರ ಮನಸ್ಸು ಕ್ರಿಕೆಟ್‌ನತ್ತ ಆಕರ್ಷಿತವಾಯಿತು. ಈ ವಿಷಯ ಅಮ್ಮ ಲೀಲಾ ರಾಜ್‌ಗೆ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಆಗ ಮಹಿಳಾ ಕ್ರಿಕೆಟ್‌ ಎಂದರೆ ಮೂಗುಮುರಿಯುತ್ತಿದ್ದವರೇ ಹೆಚ್ಚು. ನಿರ್ಲಕ್ಷ್ಯ, ಅಸಡ್ಡೆ ಧೋರಣೆ ಈಗ ಇರುವುದಕ್ಕಿಂತಲೂ ಆಗ ಹೆಚ್ಚು ಇತ್ತು. ಆಗ ಈ ಕ್ರೀಡೆಯಲ್ಲಿ ಹಣವೂ ಇರಲಿಲ್ಲ, ಹೆಸರೂ ಇರಲಿಲ್ಲ. ಮಹಿಳೆಯರೂ ಕ್ರಿಕೆಟ್‌ ಆಡುತ್ತಾರೆ ಎಂಬ ವಿಚಾರ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಟಿವಿಯಲ್ಲಿ ನೇರ ಪ್ರಸಾರ ಆಗುತ್ತಿರಲಿಲ್ಲ. ಪುರುಷರ ಕ್ರಿಕೆಟ್‌ನ ಪ್ರಾಬಲ್ಯದ ನಡುವೆ ಮಹಿಳಾ ಕ್ರಿಕೆಟ್‌ನ ಸದ್ದೇ ಇರಲಿಲ್ಲ. ಹೀಗಾಗಿ, ಮೊಮ್ಮಗಳು ಕ್ರಿಕೆಟ್‌ ಅಂಗಳ ಪ್ರವೇಶಿಸುವುದು ಅಜ್ಜ ಅಜ್ಜಿಗೆ ಸುತರಾಂ ಇಷ್ಟವಿರಲಿಲ್ಲ. ಮಿಥಾಲಿ ಕಲಾವಿದೆಯಾಗಿ ಹೆಸರು ಮಾಡಬೇಕೆಂಬುದು ಅವರ ಕನಸು.

ಇತ್ತ ಮಿಥಾಲಿ ಭರತನಾಟ್ಯ ಕಲಿಯುತ್ತಲೇ ಕ್ರಿಕೆಟ್‌ ಜಪ ಮಾಡತೊಡಗಿದರು. ಅದಕ್ಕೆ ತಂದೆ ದೊರೈರಾಜ್‌ ಅವರ ಪ್ರೋತ್ಸಾಹ ಇತ್ತು. ಅವರು ವಾಯುಪಡೆಯ ನಿವೃತ್ತ ಅಧಿಕಾರಿ. ಲೀಲಾ ರಾಜ್‌ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮಗಳ ಕ್ರಿಕೆಟ್‌ ಆಟದ ತುಡಿತವನ್ನು ಪೋಷಿಸತೊಡಗಿದರು. ನಸುಕಿನಲ್ಲೇ ಕ್ರಿಕೆಟ್‌ ಅಂಗಳಕ್ಕೆ ಪುತ್ರಿಯನ್ನು ಕರೆದುಕೊಂಡು ಹೋಗಿ ಬಿಟ್ಟುಬರುತ್ತಿದ್ದರು.

ತಮಿಳು ಕುಟುಂಬದ ಮಿಥಾಲಿ ಜನಿಸಿದ್ದು ರಾಜಸ್ಥಾನದ ಜೋಧಪುರದಲ್ಲಿ. ಬೆಳೆದಿದ್ದು ಸಿಕಂದರಾಬಾದ್‌ನಲ್ಲಿ. ಈಗಲೂ ಅವರ ಕುಟುಂಬ ಇಲ್ಲಿಯೇ ನೆಲೆಸಿದೆ. ಅವರ ಕ್ರಿಕೆಟ್‌ ಜೀವನ ಶುರುವಾಗಿದ್ದು ತಾವು ವಾಸವಿದ್ದ ಬೀದಿಯ ಹುಡುಗರ ಜೊತೆಯಲ್ಲಿ. ಅವರ ಅಣ್ಣ ಕೂಡ ಕ್ರಿಕೆಟಿಗ. ಬಳಿಕ ಕ್ರಿಕೆಟ್ ಅಕಾಡೆಮಿ ಸೇರಿ ಅಲ್ಲೂ ಹುಡುಗರ ಜೊತೆ ತಾಲೀಮು ನಡೆಸತೊಡಗಿದರು. 17ನೇ ವಯಸ್ಸಿಗೆ ರಾಷ್ಟ್ರ ತಂಡದಲ್ಲಿ ಆಡುವ ಅವಕಾಶ ಒಲಿದು ಬಂತು. 1999ರಲ್ಲಿ ಪದಾರ್ಪಣೆ ಪಂದ್ಯದಲ್ಲಿಯೇ ಐರ್ಲೆಂಡ್‌ ಎದುರು ಶತಕದ ಉಡುಗೊರೆ ನೀಡಿದಾಗ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲ. 19ನೇ ವಯಸ್ಸಿನಲ್ಲಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದರು. ಆ ಸಮಯದಲ್ಲಿ ಅದು ವಿಶ್ವದಾಖಲೆ ಕೂಡ. ಐದು ವಿಶ್ವಕಪ್‌ಗಳಲ್ಲಿ ಆಡಿದ ಹೆಗ್ಗಳಿಕೆ ಅವರದ್ದು. 2004ರಿಂದ ತಂಡ ಮುನ್ನಡೆಸುತ್ತಿದ್ದಾರೆ. ನಾಯಕತ್ವ ಒಲಿದಾಗ ಅವರಿಗೆ ಕೇವಲ 22 ವರ್ಷ. 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮಿಥಾಲಿ ಸಾರಥ್ಯದ ಭಾರತ ಫೈನಲ್‌ ತಲುಪಿತ್ತು. ಆದರೆ, ಆಸ್ಟ್ರೇಲಿಯಾವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ.

10 ಟೆಸ್ಟ್‌ ಹಾಗೂ 183 ಏಕದಿನ ಪಂದ್ಯಗಳನ್ನು ಆಡಿರುವ ಕೀರ್ತಿ ಮಿಥಾಲಿ ಅವರದ್ದು. 63 ಟ್ವೆಂಟಿ–20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ರೈಲ್ವೆ ತಂಡದ ಪರ ಆಡುವ ಅವರು ಅರ್ಜುನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕೂಡ.

‘ಈಗ ಸೌಕರ್ಯ ಚೆನ್ನಾಗಿದೆ. ಪಂದ್ಯಗಳು ಟಿವಿಯಲ್ಲಿ ನೇರಪ್ರಸಾರವಾಗುತ್ತಿವೆ. ಆದರೆ, ಮಹಿಳಾ ಕ್ರಿಕೆಟ್‌ ಮೇಲಿನ ಅಸಡ್ಡೆ ಧೋರಣೆ ಮಾತ್ರ ಬದಲಾಗಿಲ್ಲ. ಯುವತಿಯರಲ್ಲಿ ಕ್ರಿಕೆಟ್‌ ಆಡುವ ಉತ್ಸಾಹವಿದೆ. ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ’ ಎಂದು ಮಿಥಾಲಿ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದಾರೆ.

ಆ ಅಸಮಾಧಾನ ಅವರಲ್ಲಿ ಇನ್ನೂ ಇದೆ. ವಿಶ್ವಕಪ್‌ನಲ್ಲಿ ಆಡಲೆಂದು ಮಿಥಾಲಿ ಇಂಗ್ಲೆಂಡ್‌ಗೆ ಹೊರಡುವ ಮುನ್ನ ಪತ್ರಕರ್ತರೊಬ್ಬರು ‘ನಿಮ್ಮ ಮೆಚ್ಚಿನ ಕ್ರಿಕೆಟ್‌ ಆಟಗಾರ ಯಾರು’ ಎಂದು ಪ್ರಶ್ನೆ ಕೇಳಿದರು. ಕೋಪಗೊಂಡ ಮಿಥಾಲಿ, ‘ಇಷ್ಟವಾದ ಆಟಗಾರ್ತಿ ಯಾರು ಎಂದು ಪುರುಷ ಕ್ರಿಕೆಟಿಗರಿಗೆ ಪ್ರಶ್ನೆ ಕೇಳುತ್ತೀರಾ’ ಎಂದು ಆ ಪತ್ರಕರ್ತನಿಗೆ ತಿರುಗೇಟು ನೀಡಿದರು.

ಬಿಸಿಸಿಐ ಸುಪರ್ದಿಗೆ ಬಂದ ಮೇಲೆ ಮಹಿಳಾ ಕ್ರಿಕೆಟ್‌ನಲ್ಲಿ ಕೆಲವೊಂದು ಬದಲಾವಣೆಗಳಾಗಿವೆ. ಕ್ರಿಕೆಟಿಗರ ಆರ್ಥಿಕ ಸಮಸ್ಯೆ ನೀಗಿದೆ. ಉತ್ತಮ ಹೋಟೆಲಿನಲ್ಲಿ ವಾಸ್ತವ್ಯ, ಪಂದ್ಯದ ಶುಲ್ಕ ಸೇರಿದಂತೆ ಹಲವು ಸೌಕರ್ಯಗಳು ಸಿಗುತ್ತಿವೆ. ಆದರೆ, ದೃಷ್ಟಿಕೋನ ಮಾತ್ರ ಬದಲಾಗಿಲ್ಲ. ಅದೇನೇ ಇರಲಿ, ಭರತನಾಟ್ಯದ ಗೆಜ್ಜೆಗಳನ್ನು ಬಿಚ್ಚಿಟ್ಟು ಕ್ರಿಕೆಟ್‌ ಪ್ಯಾಡ್‌ ಕಟ್ಟಿದ ಮಿಥಾಲಿ ಹಲವು ಸಾಧನೆಗಳ ಒಡತಿಯಾಗಿದ್ದಾರೆ. ಅವರ ಬದುಕು ದೇಶದ ಯುವಕ–ಯುವತಿಯರಿಗೆ ಸ್ಫೂರ್ತಿ ತುಂಬುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT