ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಿ ಜೀವ ಉಳಿಸಿ: ಜಿಲ್ಲಾಧಿಕಾರಿ

Last Updated 16 ಜುಲೈ 2017, 5:14 IST
ಅಕ್ಷರ ಗಾತ್ರ

ಉಡುಪಿ: ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಹಾಗೂ ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ, ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಗಂಗೊಳ್ಳಿಯ ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ, ಲಯನ್ಸ್‌ ಕ್ಲಬ್ ಮಿಡ್‌ಟೌನ್, ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‌ಕ್ರಾಸ್‌ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನ ಹಾಗೂ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಹತ್ತಾರು ಜನರ ಪ್ರಾಣ ಉಳಿಸಬಹುದು.  ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತಾ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಮತ್ತು ಮನೆಯ ಪರಿಸರದಲ್ಲಿ ತ್ಯಾಜ್ಯ ಇರದಂತೆ ನೋಡಿಕೊಳ್ಳಬೇಕು.  ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಅವರು ಹೇಳಿದರು.

ಮತದಾನ ಪ್ರಕ್ರಿಯೆಯಲ್ಲಿ ಯುವ ಜನಾಂಗದ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಲು ಇರುವ ಅಧಿಕಾರ ಮತದಾನ ಎಂಬುದನ್ನು ಮರೆಯಬಾರದು. ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿಯನ್ನು ತಪ್ಪದೆ ಪಡೆದುಕೊಳ್ಳಿ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಅವರು ಮಾತನಾಡಿ, ರಾಜ್ಯದ ಇತರ ಜಿಲ್ಲೆಗಳಲ್ಲಿ ಶೇ1ರಷ್ಟು ರಕ್ತದಾನಿಗಳಿದ್ದರೆ ಉಡುಪಿಯಲ್ಲಿ ಶೇ2ರಷ್ಟಿದ್ದಾರೆ. ರಕ್ತದಾನಿಗಳ ಜಿಲ್ಲೆ ಎಂಬ ಹೆಸರಿಗೆ ಸಹ ಪಾತ್ರವಾಗಿದೆ. ಕಳೆದ ವರ್ಷ 27,000 ಯೂನಿಟ್ ರಕ್ತವನ್ನು ಸಂಗ್ರಹಿಸಿ ವಿತರಣೆ ಮಾಡಲಾಗಿದೆ. ರಕ್ತದಾನದ ಸಂದರ್ಭದಲ್ಲಿ ಅತಿ ವಿರಳ ಗ್ರೂಪ್‌ನ ರಕ್ತದಾನಿಗಳ ಸಂಖ್ಯೆಯನ್ನು ಪಡೆದುಕೊಳ್ಳುವುದರಿಂದ ಅವಶ್ಯಕ ಸಂದರ್ಭದಲ್ಲಿ ಸಹಾಯವಾಗಲಿದೆ.

ಉಡುಪಿ, ಮಣಿಪಾಲ ಮತ್ತು ಕುಂದಾಪುರದಲ್ಲಿ ಮಾನ್ಯತೆ ಪಡೆದ ರಕ್ತನಿಧಿ ಕೇಂದ್ರ ಹಾಗೂ ಕಾರ್ಕಳದಲ್ಲಿ ಮಾತ್ರ ರಕ್ತ ಶೇಖರಣಾ ಕೇಂದ್ರ ಇದ್ದು, ಇಲ್ಲಿಂದ ಸಾರ್ವಜನಿಕರು ರಕ್ತ ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.ಉಡುಪಿ ಜಿಲ್ಲಾ ಖಜಾನಾಧಿಕಾರಿ ಮಾಧವ ಹೆಗ್ಡೆ ಹಾಗೂ ವಿವಿಧ ಇಲಾಖೆಯ ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅರುಣ  ಲೋಕರೆ, ಖಜಾಂಚಿ ಬಿ. ಚಂದ್ರಶೇಖರ, ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ ರಾವ್, ಸರ್ಕಾರಿ ಪಾಲಿಟೆಕ್ನಿಕ್‌ನ  ಪ್ರಾಂಶುಪಾಲ ಸಿ.ಪಿ ಗಣಪತಿ, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಅಧ್ಯಕ್ಷ ದಿವಾಕರ ಖಾರ್ವಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ನಾರಾಯಣ ಕುಡ್ವ, ಸ್ನೇಹ ಟುಟೋರಿಯಲ್‌ ಕಾಲೇಜಿನ ಪ್ರಾಂಶುಪಾಲ ಉಮೇಶ್ ನಾಯಕ್ ಉಪಸ್ಥಿತರಿದ್ದರು. ಪ್ರಶಾಂತ್ ಹಾವಂಜೆ ನಿರೂಪಿಸಿದರು.

* * 

ವಿದ್ಯಾರ್ಥಿಗಳು ತಮ್ಮ  ಶೈಕ್ಷಣಿಕ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬಹುದಾದ ಸಾಮಾಜಿಕ ಕಾರ್ಯ ಎಂದರೆ ಅದು ರಕ್ತದಾನ.
ಪ್ರಿಯಾಂಕ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT