ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನ ಸಾಧಿಸಲು ಕ್ರೀಡೆ ಸಹಕಾರಿ

Last Updated 16 ಜುಲೈ 2017, 6:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮನುಷ್ಯನ ದೇಹ ಮತ್ತು ಮನಸ್ಸು ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯತೆ ಬಹಳಷ್ಟಿದೆ. ಪೋಷಕರು ಮಕ್ಕಳನ್ನು ಚಿಕ್ಕಂದಿನಲ್ಲೇ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿದರೆ ಸದೃಢವಾದ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗುತ್ತದೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರ ಹೊರವಲಯದಲ್ಲಿರುವ ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿರುವ ರಾಜ್ಯ ಐಸಿಎಸ್‌ಇ ಶಾಲೆಗಳ ಎರಡು ದಿನಗಳ ರಾಜ್ಯಮಟ್ಟದ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಹದ ಪ್ರತಿಯೊಂದು ಅಂಗವೂ ಕ್ರಿಯಾಶೀಲವಾಗಿ ಕೆಲಸ ಮಾಡಿದಾಗ ಮಾತ್ರ ಮೆದುಳಿನೊಳಗೆ ಇರುವ ನರಕೋಶಗಳು ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆಯಿಂದ ಮಾತ್ರವೇ ದೇಹದ ಎಲ್ಲಾ ಅಂಗಗಳು ಚಲನಶೀಲವಾಗಲು ಸಾಧ್ಯ. ಆದ್ದರಿಂದ ಶಾಲೆಯಲ್ಲಿ ಹೆಚ್ಚೆಚ್ಚು ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಕ್ರೀಡೆ ದೇಹದಲ್ಲಿ ಶಕ್ತಿ ಉತ್ಪನ್ನ ಮಾಡುವ ಜತೆಗೆ ಹೊಸ ಚೈತನ್ಯ ಮೂಡಿಸುತ್ತದೆ. ಪಂಚೇಂದ್ರಿಗಳ ಮೂಲಕ ಸಮಾಜದಲ್ಲಿರುವ ಒಳ್ಳೆಯ ಅಂಶಗಳು ಗ್ರಹಿಸಿದರೆ ಅದು ಕೂಡ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇಂತಹ ಗ್ರಾಮೀಣ ಭಾಗದಲ್ಲಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ 82 ತಂಡಗಳು ಭಾಗವಹಿಸಿರುವುದು ಬಹಳ ಉತ್ತೇಜನಕಾರಿ ಸಂಗತಿ’ ಎಂದು ಹೇಳಿದರು.

ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಏರ್‌ ಕಮೊಡೋರ್ ಆರ್.ಮುರುಳಿ, ‘ಕೆಲ ಕಾಲ ಕಾಲೇಜಿನಲ್ಲಿ ಕೆಲಸ ಮಾಡಿರುವ ನಾನು ಮಕ್ಕಳ ಜತೆಗೆ ಬೆರೆಯುವ ಅವಕಾಶ ಸಿಗುವ ಕಾರಣಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿರುವೆ. ಇಲ್ಲಿನ ಮಕ್ಕಳ ಉತ್ಸಾಹ ನೋಡಿದರೆ ನನಗೆ ಬಾಲ್ಯಕ್ಕೆ ಜಾರುವ ಬಯಕೆಯಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧೆಗಿಂತಲೂ ಕ್ರೀಡಾಸ್ಫೂರ್ತಿಯಿಂದ ಆಡಬೇಕು’ ಎಂದು ತಿಳಿಸಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಗಳಿವೆ. ಪಠೇತ್ಯರ ಚಟುವಟಿಕೆಗಳ ಪೈಕಿ ಕ್ರೀಡೆ ಹೆಚ್ಚಿನ ಆದ್ಯತೆ ನೀಡಿದರೆ ದೇಹದ ಕ್ಷಮತೆ ವೃದ್ಧಿಸುವ ಜತೆಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಕೂಡ ಕ್ರೀಡೆ ಸಹಕಾರಿಯಾಗಬಲ್ಲದು. ಇವತ್ತು ಕ್ರೀಡೆಗೆ ಹಿಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ’ ಎಂದರು.

ಕರ್ನಾಟಕ ರಾಜ್ಯ ಐಸಿಎಸ್‌ಸಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಾಂತನುದಾಸ್ ಮಾತನಾಡಿ, ‘ಮನುಷ್ಯನಲ್ಲಿ ಏಕಾಗ್ರತೆ ಒಂದಿದ್ದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಏಕಾಗ್ರತೆ ಹೆಚ್ಚಿಸುವಲ್ಲಿ ಕ್ರೀಡೆ ತುಂಬಾ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜತೆಗೆ ಏಕಾಗ್ರತೆ ಗಳಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ವಿಜಯಪುರದ ನಂದಿನಿ ಕಾಲೇಜಿನ ಉಪನ್ಯಾಸಕ ಜೋಸೆಫ್‌ ಮಾತನಾಡಿ, ‘ಕ್ರೀಡೆಯಲ್ಲಿ ಸೋತವನು ಗೆದ್ದವನಿಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಆಡಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲ್ಲು ಸಾಧ್ಯವಿಲ್ಲ. ಸೋಲು ನಿರಾಶೆ ಉಂಟು ಮಾಡಬಾರದು. ಬದಲು ಛಲವನ್ನು ಹುಟ್ಟಿಸಬೇಕು. ಕ್ರೀಡೆಯಲ್ಲಿ ಕ್ರೀಡಾಸ್ಫೂರ್ತಿಯಷ್ಟೇ ಮುಖ್ಯವಾಗಬೇಕೇ ವಿನಾ ಉಳಿದೆಲ್ಲ ನಗಣ್ಯ’ ಎಂದರು.

ಪಂದ್ಯಾವಳಿಯಲ್ಲಿ 44 ಶಾಲೆಗಳಿಂದ 82 ತಂಡಗಳು ಭಾಗವಹಿಸಿವೆ. ಪಂದ್ಯಾವಳಿಗೆ ಭಾನುವಾರ ತೆರೆ ಬೀಳಲಿದೆ. ಕೆ.ವಿ ಐಸಿಎಸ್‌ಸಿ ಶಾಲೆಯ ಪ್ರಾಂಶುಪಾಲ ತ್ಯಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT