ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ

Last Updated 16 ಜುಲೈ 2017, 6:33 IST
ಅಕ್ಷರ ಗಾತ್ರ

ಚಾಮರಾಜನಗರ: ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮುಗಲಭೆಗೆ ಬಿಜೆಪಿ ಸಂಸದರಾದ ಬಿ.ಎಸ್. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಪ್ರಚೋದನೆ ನೀಡುತ್ತಿದ್ದು, ಅವರ ಲೋಕಸಭಾ ಸದಸ್ಯತ್ವ ಸ್ಥಾನ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಜಿಲ್ಲಾ ಘಟಕದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11.30ರ ಸುಮಾರಿಗೆ ನಗರದ ಲಾರಿ ನಿಲ್ದಾಣದಿಂದ ಮೆರವಣಿಗೆ ತೆರಳಿದ ಎಸ್‌ಡಿಪಿಐ ಸದಸ್ಯರು, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಕ್ಷದ ಅಧ್ಯಕ್ಷ ಅಬ್ರಾರ್‌ ಅಹಮದ್‌ ಮಾತನಾಡಿ, ‘ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ಬಂಧಿಸಿದರೆ ರಾಜ್ಯಕ್ಕೇ ಬೆಂಕಿ ಇಡುವುದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದರೆ, ನಾವು ಅದನ್ನು ಆರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಹೇಳಿಕೆ ನೀಡುತ್ತಾರೆ. ಈ ಎರಡೂ ಪಕ್ಷದವರು ರಾಜಕೀಯ ಲಾಭಕ್ಕಾಗಿ ನಾಟಕ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎರಡು ತಿಂಗಳಿನಿಂದ ನಿರಂತರವಾಗಿ ಗಲಭೆಗಳು ಉಂಟಾಗುತ್ತಿವೆ. ಹಿಂದೂ ಮತ್ತು ಮುಸ್ಲಿಮರ ನಡುವೆ ಚಾಕು ಇರಿತದ ಘಟನೆಗಳು ನಡೆಯುತ್ತಿವೆ. ಸಣ್ಣ ಘಟನೆಯಿಂದ ಇದು ದೊಡ್ಡದಾಗಿ ಬೆಳೆದಿದೆ. ಸರ್ಕಾರ ಆಗಲೇ ಎಚ್ಚೆತ್ತುಕೊಂಡು ಶಾಂತಿ ಸಭೆ ನಡೆಸಿದ್ದರೆ ಈ ಸಮಸ್ಯೆಯೇ ಉಂಟಾಗುತ್ತಿರಲಿಲ್ಲ’ ಎಂದು ಆರೋಪಿಸಿದರು.

‘ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅನೇಕ ಪ್ರಕರಣಗಳಿವೆ. ಅವುಗಳ ವಿಚಾರಣೆಗೆ ನ್ಯಾಯಾಲಯ ತಡೆ ನೀಡಿದ್ದರೂ, ಸರ್ಕಾರ ಅದನ್ನು ಪ್ರಶ್ನಿಸಲು ಮುಂದಾಗದಿರುವುದು ವಿಪರ್ಯಾಸ’ ಎಂದು ಟೀಕಿಸಿದರು.

ನಿಷೇಧಾಜ್ಞೆ ಉಲ್ಲಂಘನೆ: ‘ಶರತ್‌ ಶವಯಾತ್ರೆ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್‌ ಕಟೀಲ್ ಸಾವಿರಾರು ಜನರನ್ನು ಸೇರಿಸಿ ಮತ್ತೆ ಗಲಭೆ ಹೆಚ್ಚಲು ಕುಮ್ಮಕ್ಕು ನೀಡಿದ್ದಾರೆ’ ಎಂದು ಆರೋಪಿಸಿದರು.

‘ಇಡೀ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿದವರು ಹಿಂದೂಗಳಾಗಿರಲಿ, ಮುಸ್ಲಿಮರಾಗಿರಲಿ ಕಾನೂನಿನ ಮುಂದೆ ಎಲ್ಲರೂ ಒಂದೇ’ ಎಂದು ಹೇಳಿದರು.

ಶಾಂತಿಗೆ ಹೆಸರಾದ ದಕ್ಷಿಣ ಕನ್ನಡದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಲಾಗುತ್ತಿದೆ. ಮಸೀದಿಗಳ ಮೇಲೆ ಕಲ್ಲು ಎಸೆಯುವುದು. ಮುಸ್ಲಿಂ ಯುವತಿಯರನ್ನು ಕಿಚಾಯಿಸು ವುದು, ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಹೇಳಿಕೆಗಳನ್ನು ನೀಡುವುದು ನಿರಂತರವಾಗಿ ನಡೆಯುತ್ತಿವೆ ಎಂದರು.

ಸರ್ಕಾರ ಶಾಂತಿಸಭೆಗಳನ್ನು ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕೋಮುಗಲಭೆ ಹರಡಲು ಕಾರಣರಾದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಲೋಕಸಭಾ ಸದಸ್ಯತ್ವ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಸ್ಥಿತಿಗತಿಯನ್ನು ಮತ್ತು ರಾಜಕೀಯ ಪಕ್ಷಗಳನ್ನು ವಿಡಂಬನೆ ಮಾಡುವ ಲಾವಣಿಗಳನ್ನು ಹಾಡುವ ಮೂಲಕವೂ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಉಪಾಧ್ಯಕ್ಷ ಸಮೀವುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಜಬಿನೂರ್, ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್‌ಉಲ್ಲಾ, ನಗರಸಭೆ ಸದಸ್ಯರಾದ ಎಂ. ಮಹೇಶ್‌, ಸಿ.ಎಸ್. ಸಯ್ಯದ್‌ ಆರೀಫ್, ಜಿಲ್ಲಾ ಸಮಿತಿ ಸದಸ್ಯ ಸೈಯದ್‌ ಜುಲ್ಫೀಕರ್, ಡಿಎಸ್‌ಎಸ್‌ ಸಾಗರ್ ಬಣದ ಅಧ್ಯಕ್ಷ ಶಿವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT