ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗಳಿಗೆ ನೀರು ಹರಿಸಲು ರೈತ ಸಂಘ ಆಗ್ರಹ

Last Updated 16 ಜುಲೈ 2017, 6:55 IST
ಅಕ್ಷರ ಗಾತ್ರ

ಮಂಡ್ಯ: ತಮಿಳುನಾಡಿಗೆ ಹರಿದು ಹೋಗುತ್ತಿರುವ ಕಾವೇರಿ ನೀರು ನಿಲ್ಲಿಸಿ, ಜಿಲ್ಲೆಯ ಜನ ಜಾನುವಾರುಗಳು ಕುಡಿಯಲು ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಕಾವೇರಿ ನಿರಾವರಿ ನಿಗಮದ ಕಚೇರಿ ಎದುರು ಶನಿವಾರ ಪ್ರತಿಭಟನೆ ಮಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಸರ್ಕಾರ ಕುರುಡುತನ ಪ್ರದರ್ಶಿಸುತ್ತಿದೆ. ತಮಿಳು ನಾಡಿನ ಪರವಾಗಿದಿಯೋ ಅಥವಾ ಕರ್ನಾಟಕದ ಪರವಾಗಿದಿಯೋ ಎಂಬ ಅನುಮಾನ ಮೂಡಿದೆ. ಆ ರೀತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿ ದ್ದಾರೆ ಎಂದು ಆರೋಪಿಸಿದರು.

ಐದು ವರ್ಷಗಳ ಹಿಂದೆ ಜುಲೈನಲ್ಲಿ ಕೆಆರ್ಎಸ್‌ ಅಣೆಕಟ್ಟೆಯು 72 ಅಡಿ ತಲುಪಿದಾಗ ಜಿಲ್ಲೆಯ ನಾಲೆಗಳಿಗೆ ನೀರು ಬಿಡಲಾಗಿತ್ತು. ಪ್ರಸ್ತುತ 78 ಅಡಿ ನೀರಿನ ಪ್ರಮಾಣ ಇದ್ದರೂ ನೀರು ಬಿಡುತ್ತಿಲ್ಲ. ಕಾವೇರಿ ನೀರಾವರಿ ನಿಗಮವು ‘ತಮಿಳುನಾಡು ಕಾವೇರಿ ನೀರಾವರಿ ನಿಗಮ’ದಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಿಳಿಗಿರಿ ರಂಗನಾಥ ಅವರು ಪ್ರತಿಭಟನೆ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು.

ಎರಡು ಅಥವಾ ಮೂರು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸದಿದ್ದರೆ ಹೋರಾಟದ ದಾರಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ಕೆ.ಎಸ್‌. ನಂಜುಂಡೇಗೌಡ, ಹನಿ ಯಂಬಾಡಿ ನಾಗರಾಜು, ಕೃಷ್ಣೇಗೌಡ, ಹಳುವಾಡಿ ಶ್ರೀನಿವಾಸ್‌, ಹೆಮ್ಮಿಗೆ ಮಾದು, ನಾಗೇಂದ್ರ, ಸಿದ್ದೇಗೌಡ, ಚಿಕ್ಕನಂಜು ಭಾಗವಹಿಸಿದ್ದರು.

9ನೇ ದಿನಕ ಧರಣಿ; ಸಾ.ರಾ.ಗೋವಿಂದ್‌ ಬೆಂಬಲ
ಮದ್ದೂರು: ಕೆಆರ್‌ಎಸ್‌ ಜಲಾಶಯ ದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರ 9ನೇ ದಿನಕ್ಕೆ ಕಾಲಿಟ್ಟಿದೆ.

ಮದ್ದೂರಮ್ಮ ಕೆರೆಯಂಗಳದಲ್ಲಿ ರಾಜ್ಯ ಘಟಕದ ಅಧ್ಯಕ್ಷ ರಮೇಶಗೌಡ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌
ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಕೆರೆಕಟ್ಟೆಗಳಿಗೆ ನೀರಿಲ್ಲದೆ ಜನ ಜಾನುವಾರುಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯ ದೃಷ್ಟಿಯಿಂದಾದರೂ 2 ಟಿಎಂಸಿ ನೀರನ್ನು ನಾಲೆಗಳಿಗೆ ಹರಿಸಬಬೇಕು ಎಂದು ಸಾ.ರಾ.ಗೋವಿಂದ್‌ ಆಗ್ರಹಿಸಿದರು.

ಚಿತ್ರ ನಟರ ಬೆಂಬಲ: ಜುಲೈ 17ರಂದು ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಅಲ್ಲಿಯೂ ಸಮಸ್ಯೆ ಇತ್ಯರ್ಥಗೊಳ್ಳದಿದ್ದಲ್ಲಿ ಚಲನಚಿತ್ರ ನಾಯಕನಟರನ್ನು ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿದರು.

ಕನ್ನಡ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿ.ಗಿರೀಶಗೌಡ, ದ್ರುವೇಶಗೌಡ.  ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೂರು ರಾಜೇಶ್, ಪದಾಧಿಕಾರಿಗಳಾದ ಮಹೇಶ್, ಚೆನ್ನಪ್ಪ, ರಾಘವ, ವೀರಪ್ಪ, ಚಂದು, ಲೋಕೇಶ್, ಬಸವಯ್ಯ, ಮುನಿಯಪ್ಪ, ಸಂತೋಷ್, ಚಂದ್ರಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT