ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಭಾಗ್ಯ’ ಜಾರಿಗೆ ಕೇಂದ್ರ ಸರ್ಕಾರದ ಚಿಂತನೆ

Last Updated 16 ಜುಲೈ 2017, 6:58 IST
ಅಕ್ಷರ ಗಾತ್ರ

ಮಂಡ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಕೇಂದ್ರ ಸರ್ಕಾರ ಕೂಡ ಈ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಎಂ.ರೇವಣ್ಣ ಹೇಳಿದರು. ಕಾಂಗ್ರೆಸ್‌ ಜಿಲ್ಲಾ ಘಟಕ, ಕಾರ್ಮಿಕ ವಿಭಾಗ ಶನಿವಾರ ನಗರದ ಗಾಂಧಿಭವನದದಲ್ಲಿ ಆಯೋಜಿಸಿದ್ದ ‘ಕಾಂಗ್ರೆಸ್‌ ಸರ್ಕಾರ ಮತ್ತು ಜನಪರ ಕಾರ್ಯಕ್ರಮಗಳು’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎರಡು ವರ್ಷಗಳಿಂದ ರಾಜ್ಯದಲ್ಲಿ ಬರ ಆವರಿಸಿದ್ದರೂ, ಹಸಿವಿನಿಂದ ಯಾರೂ ನರಳಿಲ್ಲ. ಇದಕ್ಕೆ ಅನ್ನಭಾಗ್ಯ ಯೋಜನೆಯೇ ಕಾರಣ. ಬಡವರು ಎರಡು ಹೊತ್ತು ಅನ್ನ ಉಣ್ಣುತ್ತಿದ್ದು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಿದ್ದಾರೆ ಎಂದು ಕೆಲವರು ಆರೋಪ ಮಡುತ್ತಾರೆ. ಆದರೆ ಹಸಿವಿನ ಅರಿವು ಇದ್ದವರು ಈ ರೀತಿಯ ಆರೋಪ ಮಾಡುವುದಿಲ್ಲ. ಹಸಿವುಮುಕ್ತ ಸಮಾಜ ನಿರ್ಮಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ಇದರಿಂದ 3.5 ಕೋಟಿ ಬಡವರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

‘ದೇವರಾಜ ಅರಸು ಸೇರಿ ಕಾಂಗ್ರೆಸ್‌ ಮುಖ್ಯಮಂತ್ರಿಗಳೆಲ್ಲರೂ ಸಾಮಾಜಿಕ ನ್ಯಾಯದ ಮೇಲೆ ಕೆಲಸ ಮಾಡಿದ್ದಾರೆ. ಅರಸು ಅವರು ಉಳುವವನೇ ಭೂಮಿಯ ಒಡೆಯ, 20 ಅಂಶಗಳ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಮಕ್ಕಳೂ ವೈದ್ಯ, ಎಂಜಿನಿಯರ್‌ ಆಗಬೇಕು ಎಂಬ ಉದ್ದೇಶದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಾರಿಗೆ ತಂದರು. ಇದು ಇಂದಿಗೂ ಜಾರಿಯಲ್ಲಿದೆ’ ಎಂದು ಹೇಳಿದರು.

ಆಡು ಮುಟ್ಟದ ಸೊಪ್ಪಿಲ್ಲ: ‘ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿ ಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಟ್ಟದ ಕಾರ್ಯಕ್ರಮಗಳೇ ಇಲ್ಲ. ದೇವರಾಜ ಅರಸು ಅವರ ದಾರಿಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಜನಪರ ಕೆಲಸ ಮಾಡಿದ್ದಾರೆ. ಅರಸು ಅವರು ಜಾರಿಗೊಳಿಸಿದ್ದ ಭಾಗ್ಯಜ್ಯೋತಿ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ಇದ್ದಾಗ ರದ್ದು ಮಾಡಿತ್ತು. ಈಗ ಅದು ನಿರಂತರ ಜ್ಯೋತಿಯಾಗಿ ಬಡವರ ಮನೆ ಬೆಳಗುತ್ತಿದೆ’ ಎಂದು ಹೇಳಿದರು.

‘₹ 50 ಸಾವಿರದವರೆಗೆ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿರುವ ಕಾಂಗ್ರೆಸ್‌ ಸರ್ಕಾರ ರೈತರ ಕೈ ಹಿಡಿದಿದೆ. ಅಲ್ಲದೆ ಅಲ್ಲದೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಮನ್ನಾ ಮಾಡಿ ಬಡವರಿಗೆ ಆಸರೆ ಆಗಿದೆ. ಅತಿಹೆಚ್ಚು ಬಜೆಟ್‌ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಇಲಾಖೆಗಳ ಅದಿಕಾರಿಗಳ ಜೊತೆ ಚರ್ಚಿಸಿ ಅಭಿವೃದ್ಧಿಯ ಬಜೆಟ್‌ ಮಂಡಿಸುವಲ್ಲಿ ಪರಿಣತಿ ಪಡೆದಿದ್ದಾರೆ’ ಎಂದು ಹೇಳಿದರು.

ರಾಜ್ಯ ಮೂಲಭೂತ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಮಾತನಾಡಿ ‘ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುವ ಏಕೈಕ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ ಮಾತ್ರ. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸಿರುವ ಮುಖ್ಯಮಂತ್ರಿ ಸರ್ವ ಜನಾಂಗಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್‌.ಎಸ್‌.ಪ್ರಕಾಶಂ ಮಾತನಾಡಿ ‘ಕಾರ್ಮಿಕರ ಏಳ್ಗೆಗಾಗಿ ಕಾಂಗ್ರೆಸ್‌ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ವೈದ್ಯಕೀಯ ಸೌಲಭ್ಯ ಒದಗಿಸಲು ಹಲವು ವಿಮಾ ಸೌಲಭ್ಯ ಇದೆ. ಮಕ್ಕಳಿಗೆ ಶಿಕ್ಷಣ ನೀಡಲು ಹಲವು ಕಾರ್ಯಕ್ರಮಗಳಿವೆ. ಅವುಗಳ ಅರಿವು ಪಡೆದು ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮುಖಂಡರಾದ ಡಾ.ಎಚ್‌.ಎಂ.ರವೀಂದ್ರ, ಡಿ.ರಮೇಶ್‌, ಹೊಸಹಳ್ಳಿ ಬೋರೇಗೌಡ, ಉಮಾದೇವಿ, ಸಿ.ಎಂ.ದ್ಯಾವಪ್ಪ ಹಾಜರಿದ್ದರು.

* * 

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ಇಲ್ಲದಿದ್ದರೂ ಅವರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿ ದ್ದಾಗ ಹಲವು ಜನಪ್ರಿಯ ಯೋಜನೆ ಜಾರಿಗೊಳಿಸಿದ್ದಾರೆ
ಎಚ್‌.ಎಂ.ರೇವಣ್ಣ
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT