ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವ ಮೋದಿ; ಸಿ.ಎಂ ಆರೋಪ

Last Updated 16 ಜುಲೈ 2017, 7:09 IST
ಅಕ್ಷರ ಗಾತ್ರ

ಮೈಸೂರು: ಯುಪಿಎ ಸರ್ಕಾರದ ಅನೇಕ ಯೋಜನೆಗಳ ಹೆಸರುಗಳನ್ನು ಬದಲಿ­ಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಯೋಜನೆಗಳೆಂದು ಬಿಂಬಿಸುತ್ತಿದ್ದಾರೆ. ಅಲ್ಲದೇ, ಈ ಯೋಜನೆಗಳಿಗೆ ನೀಡಬೇಕಾದ ಕೇಂದ್ರ ಸರ್ಕಾರದ ಪಾಲನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಆರೋಪಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಮೈಸೂರು ಮಹಾನಗರ­ಪಾಲಿಕೆ ವತಿಯಿಂದ ಕೆ.ಆರ್‌. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಹಾಗೂ ‘ಸರ್ವರಿಗೂ ಸೂರು ಯೋಜನೆ’ ಅಡಿಯಲ್ಲಿ ನಿರ್ಮಿಸಿರುವ 2,291 ಮನೆಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜೀವ ಗಾಂಧಿ ಆವಾಸ್ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಹೆಸರುಗಳನ್ನು ಪ್ರಧಾನಿ ಮೋದಿ ಬದಲಾಯಿಸಿದ್ದಾರೆ. ಫಸಲ್‌ ಬಿಮಾ ಯೋಜನೆಯೂ ಮೂಲತಃ ಯುಪಿಎ ಸರ್ಕಾರದ್ದೇ. ಈಗ ಇವನ್ನೆಲ್ಲ ತಮ್ಮದೇ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಅರಿವಿನ ಪಾಠ ಹೇಳುವೆ: ಕೇಂದ್ರ ಸರ್ಕಾರದ ಯೋಜನೆಗಳನ್ನು ನಾನು ಉದ್ಘಾಟಿಸುತ್ತಿರುವೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ. ಅವರಿಗೆ ಮಾಹಿತಿಯ ಕೊರತೆ ಇದೆ. ಇಲ್ಲಿ ಇದ್ದಿದ್ದರೆ ಅವರಿಗೆ ಅರಿವಿನ ಪಾಠ ಹೇಳಿರುತ್ತಿದ್ದೆ ಎಂದರು.

ಇಲ್ಲಿ ನಿರ್ಮಾಣ­ವಾಗುತ್ತಿರುವ ಮನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಿರುವುದು ಏನೇನೂ ಸಾಲದು. ಒಂದು ಮನೆಗೆ ₹ 4.8 ಲಕ್ಷ ಖರ್ಚಾದರೆ, ಕೇಂದ್ರ ಸರ್ಕಾರ ನೀಡುವುದು ಕೇವಲ₹ 1.5 ಲಕ್ಷ. ಸಿಂಹಪಾಲು ನಮ್ಮದೇ ಆಗಿರುವಾಗ ನಾನೇಕೆ ಉದ್ಘಾಟಿಸ­ಬಾರದು ಎಂದು ಅವರು ಪ್ರಶ್ನಿಸಿದರು.

ತುಟಿ ಬಿಚ್ಚದ ಬಿಜೆಪಿ ಮುಖಂಡರು: ಬಿಜೆಪಿ ಮುಖಂಡರು ಮಾತಿನ ಶೂರರು. ರೈತರ ಸಾಲಮನ್ನಾ ವಿಚಾರವಾಗಿ ಪ್ರಧಾನಿ ಬಳಿಗೆ ನಿಯೋಗ ಹೋಗಿದ್ದಾಗ ಒಬ್ಬರೂ ತುಟಿ ಪಿಟಕ್ಕೆನ್ನಲಿಲ್ಲ. ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಪ್ರತಾಪ­ಸಿಂಹ ಎಲ್ಲರೂ ಮೌನ ವಹಿಸಿದ್ದರು. ನಾನು ಸಾಲ ಮನ್ನಾ ಮಾಡುವಂತೆ ಕೋರಿದ್ದು ಪ್ರಯೋಜನವಾಗಲಿಲ್ಲ. ಪ್ರತಾಪಸಿಂಹ ಮಾತು ಕಡಿಮೆ ಮಾಡಿ, ಸಾಲ ಮನ್ನಾ ಮಾಡುವಂತೆ ಪ್ರಧಾನಿಗೆ ಮನವಿ ಸಲ್ಲಿಸಲಿ. ಕೇಂದ್ರ ಸರ್ಕಾರವು ರೈತರಿಗೆ ₹ 47 ಸಾವಿರ ಕೋಟಿ ಸಾಲ ನೀಡಿದೆ. ಇದನ್ನು ಮನ್ನಾ ಮಾಡಿಸಲಿ ಎಂದು ಕುಟುಕಿದರು.

‘ರಾಜ್ಯದ ಎಲ್ಲ ಕಾರ್ಯಕ್ರಮಗಳಿಗೂ ಸಂಸದರಿಗೆ ಆಮಂತ್ರಣ ಪತ್ರಿಕೆ ಹೋಗಿರುತ್ತದೆ. ಪ್ರತಾಪಸಿಂಹ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ’ ಎಂದು ಹೇಳಿದರು.ಶಾಸಕ ಎಂ.ಕೆ.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ವಸತಿ ಸಚಿವ ಎಂ.ಕೃಷ್ಣಪ್ಪ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕ ವಾಸು, ಮೇಯರ್‌ ಎಂ.ಜೆ.ರವಿಕುಮಾರ್, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ನಗರಪಾಲಿಕೆ ಸದಸ್ಯರಾದ ಪುರುಷೋತ್ತಮ, ಜೆ.ಎಸ್‌.ಜಗದೀಶ್‌, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ದೇವರಾಜು ಭಾಗವಹಿಸಿದ್ದರು.

‘ಭಾನುವಾರದ ಮಾರುಕಟ್ಟೆ’ಗೆ ಚಾಲನೆ
ಮೈಸೂರು: ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಧಾನ್ಯಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಹಿನಕಲ್‌ ಸಮೀಪದ ವಿಜಯನಗರ 2ನೇ ಹಂತದ ‘ರೈತ ಸಂತೆ’ ಕಟ್ಟಡದಲ್ಲಿ ರೂಪಿಸಿದ ‘ಭಾನುವಾರದ ಮಾರುಕಟ್ಟೆ’ಗೆ ಸಿ.ಎಂ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು.

ಬಂಡಿಪಾಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆವರಣದಲ್ಲಿ ನಿರ್ಮಿಸಿದ ಕ್ಲೀನಿಂಗ್‌, ಗ್ರೇಡಿಂಗ್‌ ಅಂಡ್‌ ಪ್ಯಾಕಿಂಗ್‌ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕವನ್ನೂ ಉದ್ಘಾಟಿಸಲಾಯಿತು. ಮುಡಾನಿರ್ಮಿಸಿದ ‘ರೈತ ಸಂತೆ’ ಕಟ್ಟಡವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ  ಬಾಡಿಗೆ ನೀಡಲಾಗಿದೆ. ಫ್ಲಾಟ್‌ಫಾರಂ, ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT