ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚುಗೆಯ ಸುರಿಮಳೆ.. ವಾವ್ಹ್‌.. ತಾಜ್‌..!

Last Updated 16 ಜುಲೈ 2017, 9:17 IST
ಅಕ್ಷರ ಗಾತ್ರ

ವಿಜಯಪುರದ ‘ತ್ಯಾಜ್ಯ’ ಬಾವಡಿ ಎಂದೇ ಬಿಂಬಿತಗೊಂಡಿದ್ದ ಐತಿಹಾಸಿಕ ತಾಜ್‌ ಬಾವಡಿ ಇದೀಗ ಎಲ್ಲರ ಬಾಯಲ್ಲೂ ‘ವಾವ್ಹ್‌... ಬ್ಯೂಟಿಪೂಲ್ ತಾಜ್‌..!’ ಎಂಬ ಉದ್ಗಾರ ಬರುವಂತಿದೆ. ಆದಿಲ್‌ಶಾಹಿ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಬಾವಡಿ ಶತಮಾನಗಳ ಕಾಲ ವಿಜಯಪುರಿಗರ ನೀರಿನ ಆಸರೆಯ ಜಲಮೂಲದ ತಾಣವಾಗಿತ್ತು.

ನಗರದ ಜನತೆ ಎಲ್ಲಿಯವರೆಗೂ ತಾಜ್‌ ಬಾವಡಿಯ ನೀರನ್ನು ಬಳಸು ತ್ತಿತ್ತು, ಅಲ್ಲಿಯವರೆಗೂ ಇದು ಜನೋಪ ಯೋಗಿ ಬಾವಡಿಯಾಗಿತ್ತು. ಆಧುನಿಕತೆಯ ಓಘದಲ್ಲಿ ಮನೆ ಬಾಗಿಲಿಗೆ ನಳ ಬಂದ ಬಳಿಕ ಬಾವಡಿಯ ನೀರಿನ ಬಳಕೆ ನಿಂತಿತು. ದಿನದಿಂದ ದಿನಕ್ಕೆ ಬಾವಡಿ ತ್ಯಾಜ್ಯ ಬಾವಡಿಯಾಗಿ ಪರಿವರ್ತನೆಗೊಂಡಿತ್ತು.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆಸಕ್ತಿಯಿಂದ ಈಚೆಗಿನ ದಿನಗಳಲ್ಲಿ ಮೊದಲ ಬಾರಿ ‘ಕಾಯಕಲ್ಪ’ ಕಂಡ ತಾಜ್‌ ಬಾವಡಿ ಇದೀಗ ಮತ್ತೆ ತನ್ನ ಗತವೈಭವ ಪಡೆದಿದೆ.
ಬಾವಡಿಯ ಹೂಳೆತ್ತಿ ಸ್ವಚ್ಛಗೊಳಿ ಸಿದ ಬಳಿಕ ಜಲಮೂಲಗಳಿಗೆ ಜೀವಕಳೆ ಬಂದಿದ್ದು, ಜಲಧಾರೆ ನಿರಂತರವಾಗಿ ಪುಟ್ಟ ಪುಟ್ಟ ಝರಿಗಳಾಗಿ ಧುಮ್ಮಿಕ್ಕು ತ್ತಿವೆ. ನೀರಿನ ಸೆಲೆ ಬಿರುಸಿದ್ದು, ಕೆಲ ದಿನಗಳಲ್ಲೇ ಬಾವಡಿ ಭರ್ತಿಯಾಗಲಿದೆ.

ಬಾವಡಿಯೊಳಗೆ ಧುಮ್ಮಿಕ್ಕುವ ಪುಟ್ಟ ಜಲಪಾತಗಳು ಮಲೆನಾಡಿನ ಪರಿಸರ, ಝರಿಗಳನ್ನು ನೆನಪಿಸುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ವಿಜಯಪುರಿಗರು ತಂಡೋಪ ತಂಡವಾಗಿ ಬಾವಡಿ ಬಳಿ ಜಮಾಯಿಸುವ ದೃಶ್ಯ ಈಚೆಗಿನ ದಿನಗಳಲ್ಲಿ ಮುಸ್ಸಂಜೆ ವೇಳೆ ಸಾಮಾನ್ಯವಾಗಿದೆ. ಹೊಲಸು ತುಂಬಿದ್ದ ನೀರು ಇದೀಗ ತಿಳಿಯಾಗಿದೆ.

‘ತಾಜ್‌ ಬಾವಡಿ ವೀಕ್ಷಿಸುವುದೇ ಒಂದು ಆನಂದ. ಮನಸ್ಸಿಗೆ ಮುದ ನೀಡುತ್ತದೆ. ಈಗಿನ ಸ್ವಚ್ಛ ವಾತಾವರಣ ವನ್ನು ಮಹಾನಗರ ಪಾಲಿಕೆ ಆಡಳಿತ ಕಾಪಾಡಿಕೊಂಡರೆ, ಕೆಲ ದಿನಗಳಲ್ಲೇ ಇದು ನಗರದ ಪ್ರಮುಖ ಪ್ರವಾಸಿ ತಾಣವಾಗಲಿದೆ’ ಎನ್ನುತ್ತಾರೆ ವಿಜಯ ಪುರ ನಿವಾಸಿ ಪ್ರಕಾಶ ರಾಠೋಡ. ‘ನಮ್ಮಿಂದ ಇಂತಹ ಕಲಾತ್ಮಕ ಬಾವಡಿ ನಿರ್ಮಾಣ ಅಸಾಧ್ಯ. ಪೂರ್ವಿಕರು ನಿರ್ಮಿಸಿರುವ ಬಾವಡಿಗೆ ಕಾಯಕಲ್ಪ ನೀಡಿದ್ದು ಪ್ರಶಂಸನಾರ್ಹ’ ಎಂದು ಹೇಳಿದರು.

‘ಐತಿಹಾಸಿಕ ಬಾವಡಿಯನ್ನು ಪುನರುತ್ಥಾನಗೊಳಿಸಿದ್ದು ಅಕ್ಷರಶಃ ಶ್ಲಾಘನಾರ್ಹ ಕಾಯಕ. ಯಾರು, ಯಾವ ಪಕ್ಷದ ಸರ್ಕಾರ ಈ ಮಹತ್ತರ ಕಾಯಕ ಮಾಡಿತು ಎಂಬುದು ಇಲ್ಲಿ ಅಪ್ರಸ್ತುತ. ನಿಜಕ್ಕೂ ಈ ಪ್ರಶಂಸನಾರ್ಹ ಕೆಲಸ ಮಾಡಿದವರಿಗೆ ನಾವು ಅಭಿನಂದಿಸಲೇಬೇಕು.ಇದರ ಜತೆಗೆ ಸ್ವಚ್ಛತೆಯನ್ನು ಎಲ್ಲರೂ ಕೈಜೋಡಿಸಿ ಕಾಪಿಟ್ಟುಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬಾವ ಡಿಯ ಸೌಂದರ್ಯ ಕಾಪಾಡಿಕೊಳ್ಳಲು ಮುಂದಾಗಬೇಕು’ ಎಂದು ಗುರುರಾಜ ಹುಣಶ್ಯಾಳ ತಿಳಿಸಿದರು.

‘ವಿಜಯಪುರದಲ್ಲಿ ಒಂದು  ಒಳ್ಳೆಯ ಕೆಲಸ ನಡೆದಿದೆ. ಎಲ್ಲರೂ ಇದಕ್ಕೆ ಮೆಚ್ಚುಗೆ ಸೂಚಿಸಬೇಕು. ಈ ವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದರೆ ಬಾವಡಿಯ ನೀರು ಬಳಕೆಯಾಗಬೇಕು. ಸ್ನಾನ, ಬಟ್ಟೆ ಒಗೆಯುವುದು, ಗಣೇಶ ವಿಸರ್ಜನೆ ಸ್ಥಗಿತಗೊಳ್ಳಬೇಕು’ ಎನ್ನುತ್ತಾರೆ ರಘು ಸುಣಗಾರ.

* * 

ಜನರ ಪ್ರತಿಕ್ರಿಯೆ ಗಮನಿಸಿದೆ. ಮನಸ್ಸಿಗೆ ಖುಷಿಯಾಯ್ತು. ಜನರ ಬಳಿ ದೇಣಿಗೆ ಬೇಡಿದ್ದು, ಸಾರ್ಥಕ ಎನಿಸಿತು. ಎಲ್ಲರೂ ಸೇರಿ ಬಾವಡಿ ಸೌಂದರ್ಯ ಹೆಚ್ಚಿಸೋಣ
ಎಂ.ಬಿ.ಪಾಟೀಲ
ಜಲಸಂಪನ್ಮೂಲ ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT