ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಚಾಲನೆ ವೃತ್ತಿ, ಉರಗ ರಕ್ಷಣೆ ಪ್ರವೃತ್ತಿ

Last Updated 16 ಜುಲೈ 2017, 9:23 IST
ಅಕ್ಷರ ಗಾತ್ರ

ಅಕ್ಕಿಆಲೂರ: ಹಾವನ್ನು ಕಂಡರೆ ಭಯಗೊಳ್ಳುವವರೆ ಹೆಚ್ಚು. ಭಯದಿಂದಾಗಿ ಅದನ್ನು ಸಾಯಿಸುವವರೂ ಇದ್ದಾರೆ. ಆದರೆ ಹಾನಗಲ್‌ ತಾಲ್ಲೂಕಿನ ಆಡೂರು ಗ್ರಾಮದ ಕೃಷ್ಣರೆಡ್ಡಿ ಅವರಿಗೆ ಹಾವುಗಳೆಂದರೆ ಭಯವಿಲ್ಲ. ಬದಲಿಗೆ ಅವುಗಳ ಬಗ್ಗೆ ಅನುಕಂಪ ಇದೆ. ಹಾವು ಕಂಡರೆ ಅವರು ಅದನ್ನು ರಕ್ಷಿಸಿ ಸುರಕ್ಷಿತ ಸ್ಥಾನಕ್ಕೆ ಹೋಗಿ ಬಿಟ್ಟು ಬರುತ್ತಾರೆ. ಹೀಗಾಗಿ ಅವರು ಈ ಭಾಗದಲ್ಲಿ ಸ್ನೇಕ ಕೃಷ್ಣರೆಡ್ಡಿ ಎಂದೇ ಜನಜನಿತ.

ಅಂದಹಾಗೆ ಕೃಷ್ಣರೆಡ್ಡಿ ಅವರ ವೃತ್ತಿ ಚಾಲನೆ. ಬಸ್‌ ಚಾಲಕರಾಗಿರುವ ಅವರು, ಉರಗ ಸಂರಕ್ಷಣೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ಬಾಲ್ಯದ ಹವ್ಯಾಸವಲ್ಲ: ಹಾವು ರಕ್ಷಣೆ ಇವರ ಬಾಲ್ಯದ ಹವ್ಯಾಸ ಅಲ್ಲ. 37 ವರ್ಷದ ಕೃಷ್ಣರೆಡ್ಡಿ ಅವರು ಐದಾರು ವರ್ಷದಿಂದ ಈ ಹವ್ಯಾಸ ಬೆಳೆಸಿಕೊಂಡಿದ್ದಾರೆ.

‘ನಮ್ಮ ಭಾಗದಲ್ಲಿ ಹಾವುಗಳು ಹೆಚ್ಚು. ನಮ್ಮೂರಿನಲ್ಲಿ ಮುರ್ನಾಲ್ಕು ಜನರು ಹಾವು ಹಿಡಿಯುವ ಕೆಲಸ ಮಾಡುತ್ತಿದ್ದರು. ಆದರೆ, ಅವುಗಳನ್ನು ದುರ್ಬಳಕೆ ಮಾಡುತ್ತಿದ್ದರು. ಹಿಡಿದ ಹಾವುಗಳ ಹಲ್ಲು ಕಿತ್ತು, ಅವುಗಳನ್ನು ಶ್ರೀಮಂತರ ಮನೆಗಳಲ್ಲಿ ಬಿಟ್ಟು, ದುಡ್ಡು ಕಿತ್ತ ಉದಾಹರಣೆಗಳೂ ಇವೆ. ಆದರೆ, ಅವರೆಲ್ಲ ಕಡೆಗೆ ಹಾವು ಕಚ್ಚಿಯೇ ಮೃತಪಟ್ಟರು. ಬಳಿಕ ನಾನು ಅವುಗಳ ರಕ್ಷಣೆ ಮುಂದಾಗಬೇಕು ಎನಿಸಿತು. ಈ ಕುರಿತು ಟಿ.ವಿಯಲ್ಲಿ ಪ್ರಾಣಿಗಳ ಚಾನೆಲ್‌ಗಳಲ್ಲಿ ಹಾವು ಹಿಡಿಯುವ, ಪಳಗಿಸುವ ಕುರಿತು ಸೂಕ್ಷ್ಮವಾಗಿ ಗಮನಿಸಿದೆ. ಬಳಿಕ ಧೈರ್ಯ ಮಾಡಿ ಹಾವು ಹಿಡಿಯುವುದನ್ನು ಆರಂಭಿಸಿದೆ’ ಎಂದು ಅವರು ವಿವರಿಸಿದರು.

ಜನ ಜಾಗೃತಿ!: ಹಾವು ಹಿಡಿಯಲು ಯಾವುದೇ ಹಣ ಪಡೆಯದ ಇವರು, ಹಾವುಗಳ ಕುರಿತು ಜನ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ‘ಮೊದಲಿಗೆ ಹಾವು ಹಿಡಿದು ಸುರಕ್ಷಿತ ಸ್ಥಾನದಲ್ಲಿ ಬಿಟ್ಟು ಬರುತ್ತಿದೆ. ಆದರೆ, ಬಳಿಕ ಅದರ ಕುರಿತು ಜನರಲ್ಲಿ ಅರಿವು ಮೂಡಿಸುವುದು ಉತ್ತಮ ಎನಿಸಿತು. ಹಾವು ಸಿಕ್ಕರೆ ಪಕ್ಕದ ಶಾಲೆ– ಕಾಲೇಜಿಗೆ ಅದನ್ನು ತೆಗೆದುಕೊಂಡು ಹೋಗಿ ಅದರ ಪ್ರಭೇದ, ಅವು ರೈತ ಸ್ನೇಹಿಯೋ,  ಅಲ್ಲವೋ ಎಂಬುದು ಸೇರಿದಂತೆ ಮತ್ತಿತರ ವಿವರಗಳನ್ನು ತಿಳಿಸಿಕೊಡುತ್ತಿದ್ದೇನೆ. ಈತನಕ 25ಕ್ಕೂ ಹೆಚ್ಚು ಶಾಲಾ–ಕಾಲೇಜಿಗಳಲ್ಲಿ ಈ ಹೀಗೆ ಮಾಡಿದ್ದೇನೆ. ಹಾವುಗಳ ಕುರಿತು ಶಾಲಾ–ಕಾಲೇಜುಗಳಲ್ಲಿ ಸಂವಾದವನ್ನೂ ನಡೆಸಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಟಿಪ್ಪಣಿ ಮಾಡುತ್ತಾರೆ: ‘ಕಳೆದ ಕೆಲ ವರ್ಷಗಳಲ್ಲಿ ಹಿಡಿದ ಹಾವುಗಳನ್ನು ಲೆಕ್ಕ ಇಟ್ಟಿದ್ದೇನೆ. ಈತನಕ 1059 ಹಾವು ಹಿಡಿದಿದ್ದೇನೆ. ಈ ಕುರಿತು ಮನೆಯಲ್ಲಿ ಸಂಕ್ಷಿಪ್ತವಾಗಿ ಬರೆದು ಇಡುತ್ತೇನೆ. ಹಾವಿನ ಪ್ರಭೇದ, ಆಹಾರ, ಅದರ ದಿನಚರಿ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ದಾಖಲಿಸುತ್ತಿದ್ದೇನೆ’ ಎಂದು ಅವರು ವಿವರಿಸಿದರು. ಉರಗ ಸಂತತಿಯ ರಕ್ಷಣೆಗೆ ಮುಂದಾಗಿರುವ ಕೃಷ್ಣರೆಡ್ಡಿ, ‘ಹಾವುಗಳ ಕುರಿತು ಭಯ ಸಲ್ಲದು. ಅವು ಕೂಡ ನಮ್ಮಂತೆಯೇ ಪ್ರಾಣಿ. ಅವುಗಳ ಮೇಲೆ ಅನುಕಂಪ ಇರಲಿ. ಅವಸಾನದ ಅಂಚಿನಲ್ಲಿರುವ ಉರಗಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎನ್ನುತ್ತಾರೆ ಅವರು. ಹಾವು ಕಚ್ಚಿದರೆ ಮಾಡಬಹುದಾದ ಪ್ರಥಮ ಚಿಕಿತ್ಸೆಯ ಕುರಿತೂ ಅವರು ಜನರಿಗೆ  ಮಾಹಿತಿ ನೀಡುತ್ತಾರೆ. ಆಡೂರು ಸುತ್ತಲು ಹಾವು ಕಾಣಿಸಿಕೊಂಡರೆ ಕೃಷ್ಣರೆಡ್ಡಿ ಅವರ ಸೇವೆ ಪಡೆಯಬಹುದು. ಮೊಬೈಲ್:  9739095654
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT