ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕಲಾವಿದರನ್ನು ರಂಗಾಯಣ ಪ್ರೋತ್ಸಾಹಿಸಲಿ

Last Updated 16 ಜುಲೈ 2017, 11:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶೀಯ ಕಲೆ ಮತ್ತು ಸಂಸ್ಕೃತಿ ಬಿಂಬಿಸುವಂತಹ ನಾಟಕ­ಗಳನ್ನು ರಚಿಸಿ, ಪ್ರದರ್ಶಿಸುವುದರ ಜೊತೆಗೆ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವ ಮಹತ್ವದ ಕಾರ್ಯ ಕಲಬುರ್ಗಿ ರಂಗಾಯಣದಿಂದ ನೆರವೇರಬೇಕು’ ಎಂದು ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅಭಿಪ್ರಾಯಪಟ್ಟರು.

ನಗರದ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಶನಿವಾರ ಕಲಬುರ್ಗಿ ರಂಗಾಯಣದ ವತಿಯಿಂದ ಆಯೋ­ಜಿಸಲಾಗಿದ್ದ ‘ರಂಗಾರಂಗಿ’ ಮತ್ತ ‘ತಮಾಶಾ’ ನಾಟಕ ಪ್ರದರ್ಶನದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಳೆಯ ಕಥೆ, ಮಾದರಿ ಮತ್ತು ತಂತ್ರಗಳಿಗಿಂತ ಹೊಸತನ ಹೇಳುವಂತಹ ನಾಟಕಗಳಿಗೆ ಆದ್ಯತೆ ನೀಡಬೇಕು’ ಎಂದರು.

‘ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ವಿಚಾರಗಳನ್ನು ಮೇಳೈಸಿಕೊಂಡು ಹೊರ ಹೊಮ್ಮುವ ನಾಟಕಗಳು ಜನರನ್ನು ಪ್ರೀತಿಯಿಂದ ಒಗ್ಗೂಡಿಸಬೇಕು. ಬದುಕಿನ ಮೌಲ್ಯಗಳ ಕುರಿತು ಅರಿವು ಮೂಡಿಸುತ್ತ ಬದುಕುವ ಕಲೆಯನ್ನು ತಿಳಿಪಡಿಸುವ ರಂಗಭೂಮಿಯು ಸಮಾಜಕ್ಕೆ ಹೊಸ ದಿಕ್ಕನ್ನು ನೀಡಬೇಕು. ಅದು ಎಲ್ಲವನ್ನೂ ಒಳಗೊಳ್ಳಬೇಕು’ ಎಂದು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಭೂಮಿ ಕಲಾವಿದರಿದ್ದು, ರಂಗ ಚಟುವಟಿಕೆ ನಡೆದರೂ ಹೆಚ್ಚು ಬೆಳಕಿಗೆ ಬರುತ್ತಿಲ್ಲ. ಇಲ್ಲಿನ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ಜವಾಬ್ದಾರಿ ರಂಗಾಯಣದ ಮೇಲಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ರಂಗ ಸಮಾಜದ ಸದಸ್ಯೆ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ನಾಡಿನ ನಾಲ್ಕು ದಿಕ್ಕುಗಳಲ್ಲಿನ ರಂಗಾಯಣಗಳು ಆಯಾ ಪ್ರಾಂತ್ಯದ ಸೊಗಡು, ಸಂಸ್ಕೃತಿ ಅನುಸಾರವಾಗಿ ಕಾರ್ಯನಿರ್ವಹಿಸಬೇಕು ಎಂಬ ಆಶಾಭಾವ ರಂಗ ಚೇತನ ಬಿ.ವಿ.ಕಾರಂತ ಹೊಂದಿದ್ದರು. ಅವರ ಆಶಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಟುವಟಿಕೆಗಳು ನಡೆಯಬೇಕು’ ಎಂದರು.

‘ಯಕ್ಷಗಾನದಷ್ಟೇ ಖ್ಯಾತಿ ಗಳಿಸುವ ಅರ್ಹತೆ ದೊಡ್ಡಾಟ, ಸಣ್ಣಾಟ, ಬಯಲಾ­ಟದಂತಹ ಕಲೆಗಳು ಹೊಂದಿವೆ. ಆದರೆ ಆ ಕಲೆ ಮತ್ತು ಕಲಾವಿದರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಪ್ರೋತ್ಸಾಹ ಸಿಗದ ಕಾರಣ ಹಿನ್ನಡೆ­ಯಾಗಿದೆ. ಇಂತಹ ಕಲೆ­ಗಳು ಸೇರಿದಂತೆ ಜಾನಪದ ಕಲೆಗಳಿಗೆ ರಂಗಾಯಣದಲ್ಲಿ ವಿಶೇಷ ಆದ್ಯತೆ ದೊರೆಯಬೇಕು’ ಎಂದು ತಿಳಿಸಿದರು.
ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ್ ಮಾತನಾಡಿ, ‘ಇಲ್ಲಿನ ರಂಗಾಯಣವು ಹೊಸ ಬಗೆಯ ಉತ್ಸಾಹ, ಉಲ್ಲಾಸದೊಂದಿಗೆ ಪುನರಾ ರಂಭಗೊಂಡಿರುವುದು ಸಂತಸ ತಂದಿದೆ. ರಂಗಭೂಮಿಗೆ ನಾವೆಲ್ಲರೂ ಸೇರಿ ಪ್ರೋತ್ಸಾಹಿಸಬೇಕಿದೆ’ ಎಂದರು.

ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ, ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಚಂದ್ರಕಾಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್‌ ಠಾಕೂರ್, ಹಿರಿಯರಾದ ಚಂದ್ರಗುಪ್ತ ಚಾಂದಕವಠೆ, ಹಿರಿಯ ರಂಗಕರ್ಮಿ ಪ್ರಭಾಕರ ಸಾತಖೇಡ, ಹಿರಿಯ ರಂಗಕರ್ಮಿ ಶಾಂತಾ ಕುಲಕರ್ಣಿ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಪ್ಪ ಮಲ್ಲಪ್ಪ ನಿಂಗೋಜಿ ಮತ್ತು ರಂಗ ಕಲಾವಿದ ರಮೇಶಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT