ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಗ್ರಾಮದಲ್ಲಿ...

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಲಂಡನ್‌ನಲ್ಲಿ ಮೇ ಮೊದಲ ವಾರ ಬೇಸಿಗೆ ಶುರುವಾಗಿದ್ದರೂ ಚಳಿ ಕಡಿಮೆಯಾಗಿರಲಿಲ್ಲ. ಲಂಡನ್ ಕೋಟೆಯಿಂದ ಗಾವುದ ದೂರವಿದ್ದ ವಿಂಬಲ್ಡನ್ ಗ್ರಾಮಕ್ಕೆ ನಮ್ಮ ತಂಡ ಹೋದಾಗ ಪೂರ್ವ ನಿಗದಿಯಂತೆ ಮಾರ್ಗದರ್ಶಿ ಡ್ಯುಕ್‌ ಕಾಲಿನ್‌ ನಮ್ಮನ್ನು ಸ್ವಗತಿಸಿದರು.

ಸೆಂಟರ್ ಕೋರ್ಟ್ ಮುಂಭಾಗದಲ್ಲಿ ನಮ್ಮ ಗುಂಪಿನ ಸದಸ್ಯರಿಗೆಲ್ಲಾ ಬಲಗೈಗೆ ಹಸಿರು ಪಟ್ಟಿ ಕಟ್ಟಿದ ಬಳಿಕ ಕಾಲಿನ್ ತಮ್ಮ ಹಾಗೂ ತಮ್ಮ ಸಹೋದ್ಯೋಗಿಗಳ ಪರಿಚಯ ಮಾಡಿಸಿ ವಿಂಬಲ್ಡನ್ ಸಮುಚ್ಛಯದತ್ತ ಮುಂದಡಿ ಇಟ್ಟರು.

ಮೊದಲಿಗೆ ನಾವು ಒಳಕ್ಕೆ ಹೊರಟಿದ್ದೇ ಸೆಂಟರ್ ಕೋರ್ಟ್ ಮುಂಭಾಗದಿಂದ. 140 ವರ್ಷಗಳ ವಿಂಬಲ್ಡನ್ ಚರಿತ್ರೆಯಲ್ಲಿ ಮೂರು ಬಾರಿ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡು ಹ್ಯಾಟ್ರಿಕ್ ವೀರ ಎನ್ನಿಸಿಕೊಂಡ ಎಫ್.ಜೆ. ಪೆರಿ ಅವರ ಪ್ರತಿಮೆ ಪಕ್ಕದ ಮುಖ್ಯದ್ವಾರದಿಂದ ಹತ್ತೆಂಟು ಮೆಟ್ಟಿಲು ಹತ್ತಿದರೆ ಕಂಡಿದ್ದು ಹಸಿರು ಹಾಸಿನ ಬೃಹತ್ ಟೆನಿಸ್ ಅಂಗಣ. ಇದೇ ಸೆಂಟರ್ ಕೋರ್ಟ್. ಇದರಲ್ಲಿ ವರ್ಷಕ್ಕೆ ನಡೆಯುವುದು ಬೆರಳೆಣಿಕೆಯಷ್ಟು ಪಂದ್ಯಗಳು ಮಾತ್ರ. ಅದರಲ್ಲಿ ವಿಂಬಲ್ಡನ್ ಪುರುಷರ ಹಾಗೂ ಮಹಿಳಾ ಸಿಂಗಲ್ಸ್ ಪಂದ್ಯಗಳು ಮುಖ್ಯವಾದವು.

ಪಂದ್ಯಗಳು ನಡೆಯುವಾಗ ಪ್ರೇಕ್ಷಕರಿಂದ ತುಂಬಿರುವ ಸೆಂಟರ್ ಕೋರ್ಟ್ ಪ್ರದೇಶ ನಾವು ಹೋಗಿದ್ದಾಗ ಸಂಪೂರ್ಣವಾಗಿ ಖಾಲಿಯಾಗಿತ್ತು. ಒಂದಷ್ಟು ಹಕ್ಕಿಗಳು ಮೈದಾನದ ಹುಲ್ಲಿನ ಮೇಲೆ ಹಾರಾಡುತ್ತಿದ್ದವು. ಹುಲ್ಲು ಕತ್ತರಿಸುವ ಪುಟ್ಟ ಯಂತ್ರಗಳೊಂದಿಗೆ ಕೆಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಈಗ ವಿಶ್ವದ ನಾಲ್ಕು ಪ್ರಮುಖ ಟೆನಿಸ್‌ ಗ್ರ್ಯಾನ್‌ಸ್ಲಾಮ್‌ ಕೂಟಗಳಲ್ಲಿ ಹುಲ್ಲಿನ ಮೈದಾನದ ಮೇಲೆ ಪಂದ್ಯಗಳು ನಡೆಯುವುದು ವಿಂಬಲ್ಡನ್‌ನಲ್ಲಿ ಮಾತ್ರ. ಹೀಗಾಗಿ ಮೈದಾನದಲ್ಲಿ ಹುಲ್ಲು ಬೆಳೆಸುವ ಕತ್ತರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಲು ಪ್ರತ್ಯೇಕ ವಿಭಾಗವೇ ವರ್ಷಪೂರ್ತಿ ಕಾರ್ಯ ನಿರ್ವಹಿಸುತ್ತದೆ ಎಂದರು ಗೈಡ್.

ಈಗ ಯಾವುದೇ ಕ್ರೀಡೆಯಾದರೂ ಪ್ರಾಯೋಜಕರು ಜಾಹೀರಾತುದಾರರ ಭರಾಟೆ ಜೋರು. ಆದರೆ ವಿಂಬಲ್ಡನ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಮುಚ್ಛಯದ ಯಾವುದೇ ಭಾಗದಲ್ಲೂ ಜಾಹೀರಾತುಗಳ ಕುರುಹೂ ಕಾಣಲಿಲ್ಲ. ಅಲ್ಲಲ್ಲಿ ಕಾಣುವ ದೊಡ್ಡ ದೊಡ್ಡ ಗಡಿಯಾರಗಳಲ್ಲಿ ರೋಲೆಕ್ಸ್ ಚಿಹ್ನೆ ಮಾತ್ರ ಕಾಣುತ್ತದೆ.

ಸೆಂಟರ್ ಕೋರ್ಟ್‌ನಲ್ಲಿ ನಮ್ಮನ್ನು ಗಮನ ಸೆಳೆದಿದ್ದು ಕಳೆದ ವರ್ಷದ ಸಿಂಗಲ್ಸ್‌ ಫೈನಲ್ ಸ್ಕೋರ್ ಬೋರ್ಡ್‌ಗಳು. ಎರಡೂ ಕಡೆ ಮಹಿಳಾ-ಪುರುಷರ ಅಂತಿಮ ಪಂದ್ಯದ ವಿಜೇತರ ಹೆಸರು ಒಂದು ವರ್ಷ ಹಾಗೇ ಇರುತ್ತದೆ.

ಮಾಧ್ಯಮದವರಿಗೆ ವಿಂಬಲ್ಡನ್‌ನಲ್ಲಿ ವಿಶೇಷ ವ್ಯವಸ್ಥೆ ಇದೆ. ಅವರಿಗಾಗಿ ಪ್ರತ್ಯೇಕ ಕಟ್ಟಡವಿದೆ. ಜೊತೆಗೆ ಸುಸಜ್ಜಿತ ಪತ್ರಿಕಾಗೋಷ್ಠಿ ಭವನ ಇದೆ. ಸೆಂಟರ್‌ಕೋರ್ಟ್‌ನಲ್ಲಿ ವಿಂಬಲ್ಡನ್ ಫೈನಲ್‌ ಪಂದ್ಯಗಳ ವೇಳೆ ನಡೆದ ಹಲವು ರೋಚಕ ಸಂಗತಿಗಳನ್ನು ರಸವತ್ತಾಗಿ ವಿವರಿಸಿದ ಗೈಡ್ ಮುಂದೆ ನಮ್ಮನ್ನು ಕರೆದೊಯ್ದಿದ್ದು ಕ್ಲಬ್‌ ಮಹಡಿಗೆ. ಅಲ್ಲಿಂದ ನಮಗೆ ವಿಂಬಲ್ಡನ್ ಸಮುಚ್ಛಯದ ಮನಮೋಹಕ ನೋಟ ಲಭ್ಯ.

ಹಿಂದೆ ಮಳೆ ಬಂದಾಗ ಪಂದ್ಯಗಳು ರದ್ದಾಗುವುದು ಸಾಮಾನ್ಯವಾಗಿತ್ತು. ಒಮ್ಮೆ ಪುರುಷರ ಫೈನಲ್‌ ಪಂದ್ಯವೇ ನಿಂತು ಹೋಗಿತ್ತು. ಈಗ ಸೆಂಟರ್‌ಕೋರ್ಟ್ ಸೇರಿದಂತೆ ಹಲವು ಕೋರ್ಟ್‌ಗಳಲ್ಲಿ ಯಾಂತ್ರಿಕವಾಗಿ ಮೈದಾನಗಳನ್ನು ಛಾವಣಿಯಿಂದ ಮುಚ್ಚುವ ವ್ಯವಸ್ಥೆ ಇದೆ. ಹೀಗಾಗಿ ಮಳೆ ಸೂಚನೆ ಇದ್ದರೆ ಕೇವಲ 20 ನಿಮಿಷಗಳಲ್ಲಿ ಸ್ವಯಂ ಚಾಲಿತ ಛಾವಣಿ ಟೆನಿಸ್ ಮೈದಾನವನ್ನು ಮುಚ್ಚಿ ಪಂದ್ಯ ಯಶಸ್ವಿಯಾಗಿ ನಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಸ್ವಯಂಚಾಲಿತ ಛಾವಣಿಯ ಚಲನೆಯನ್ನೂ ನಮಗೆ ತೋರಿಸಿದರು.

ವಿಂಬಲ್ಡನ್ ವರ್ಷಕ್ಕೊಮ್ಮೆ ನಡೆದರೂ ವರ್ಷದುದ್ದಕ್ಕೂ ಸಮುಚ್ಛಯದಲ್ಲಿ ಟೆನ್ನಿಸ್ ಕಲರವ ಇದ್ದೇ ಇರುತ್ತದೆ. ಅಭ್ಯಾಸ ಪಂದ್ಯಗಳಿಗಾಗಿ ಅನೇಕ ಅಂಗಣಗಳು ಮೀಸಲಾಗಿವೆ. ಇದರಲ್ಲಿ ಒಳಾಂಗಣ ಕ್ರಿಡಾಂಗಣಗಳೂ ಇವೆ.

ಸೆಂಟರ್‌ಕೋರ್ಟ್ ಬದಿಯ ಓಣಿಯಲ್ಲಿ ಕಳೆದ 140 ವರ್ಷಗಳ ವಿಂಬಲ್ಡನ್ ಚರಿತ್ರೆಯನ್ನು ಛಾಯಾಚಿತ್ರಗಳ ಮೂಲಕ ಅನಾವರಣ ಮಾಡಲಾಗಿದೆ. ಇಲ್ಲಿ ಭಾರತೀಯರ ಚಿತ್ರಗಳೂ ಇವೆ. ರಾಮನಾಥನ್ ಕೃಷ್ಣನ್‌, ರಮೇಶ ಕೃಷ್ಣನ್, ಲಿಯಾಂಡರ್ ಪೇಸ್, ಮಹೇಶ ಭೂಪತಿ ಚಿತ್ರಗಳನ್ನು ನಾವು ನೋಡಿದೆವು.

ಹಸಿರ ಸಿರಿಯೊಳಗೆ ಹುದುಗಿ ಹೋಗಿರುವ ವಿಂಬಲ್ಡನ್ ಸಂಕೀರ್ಣದಲ್ಲಿರುವ ವಸ್ತು ಸಂಗ್ರಹಾಲಯದೊಳಗೆ ಸುತ್ತಾಡಿದಾಗ ಮನಸಿಗೆ ಹಿತವೆನಿಸುತ್ತದೆ. ಅಲ್ಲಿ ಚಾಂಪಿಯನ್ ಆಟಗಾರರ ಟೆನಿಸ್‌ ಪರಿಕರಗಳು, ವಿಜೇತ ಆಟಗಾರರು ಫೈನಲ್‌ನಲ್ಲಿ ಧರಿಸಿದ್ದ ಸಮವಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ನೋಡಬಹುದು.

ಚಾರಿತ್ರಿಕ ಸ್ಥಳ, ಸ್ಮಾರಕ, ಪ್ರೇಕ್ಷಣೀಯ ಸ್ಥಳಗಳಂತೆ ಕ್ರೀಡಾಂಗಣಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವ ಜಾಣ್ಮೆಗೆ ವಿಂಬಲ್ಡನ್‌ ಒಂದು ಸ್ಪಷ್ಟ ನಿದರ್ಶನವಾಗಿದೆ.

–ಕೋಲಾರ ಜಗನ್ನಾಥ ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT