ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದಲ್ಲಿ ‘ಸಮರ್ಥ’ ಕನ್ನಡಿಗ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

‘ನಾನು ಯಾವತ್ತೂ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡವನಲ್ಲ. ಸಿಕ್ಕ ಅವಕಾಶಗಳಲ್ಲಿ ದಿಟ್ಟ ಆಟ ಆಡಬೇಕು. ಆ ಮೂಲಕ ಪ್ರತಿಭೆಯನ್ನು ಜಗಜ್ಜಾಹೀರು ಗೊಳಿಸಬೇಕು. ಇದೇ ನನ್ನ ಮೂಲಮಂತ್ರ. ಇದನ್ನು ಇವತ್ತಿಗೂ ಚಾಚೂ ತಪ್ಪದೆ ಪಾಲಿಸಿಕೊಂಡು ಸಾಗುತ್ತಿದ್ದೇನೆ...

ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗ ರವಿಕುಮಾರ್‌ ಸಮರ್ಥ್‌ ಅವರ ಅಂತರಾಳದ ನುಡಿಗಳಿವು. ಎಳವೆಯಲ್ಲಿಯೇ ಕ್ರಿಕೆಟ್‌ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಬಲಗೈ ಬ್ಯಾಟ್ಸ್‌ಮನ್‌ ಸಮರ್ಥ್‌, ಯಶಸ್ಸಿನ ಶಿಖರದ ಒಂದೊಂದೆ ಮೆಟ್ಟಿಲನ್ನು ಏರುತ್ತಿರುವ ಪ್ರತಿಭೆ.

ವಿವಿಧ ವಯೋಮಾನದ ಟೂರ್ನಿಗಳಲ್ಲಿ ಆಡಿ ಆಟದ ಪಾಠಗಳನ್ನು ಕಲಿತ ಅವರು ಹಂತ ಹಂತವಾಗಿ ಇದರಲ್ಲಿ ನೈಪುಣ್ಯ ಸಾಧಿಸುತ್ತಿದ್ದಾರೆ. 2011ರ ಕೆಎಸ್‌ಸಿಎ ಲೀಗ್‌ನಲ್ಲಿ ‘ಸಮರ್ಥ’ ಆಟ ಆಡಿದ್ದ ಬೆಂಗಳೂರಿನ ಪ್ರತಿಭೆ, ಅದೇ ವರ್ಷ 19 ವರ್ಷದೊಳಗಿನವರ ವಿನೂ ಮಂಕಡ್‌ ಮತ್ತು ಕೂಚ್‌ ಬೆಹಾರ್ ಟ್ರೋಫಿಗಳಲ್ಲಿ 1,200ಕ್ಕೂ ಅಧಿಕ ರನ್‌ ಬಾರಿಸಿ ಕ್ರಿಕೆಟ್‌ ಲೋಕ ತಮ್ಮತ್ತ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ದರು.

2013ರಲ್ಲಿ ನಡೆದಿದ್ದ ಶಫಿ ದಾರಾಶಾ ಟೂರ್ನಿ ಸಮರ್ಥ್‌ ಪಾಲಿಗೆ ಸ್ಮರಣೀಯ ವಾಗಿತ್ತು. ಆ ಟೂರ್ನಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ಪರ ಎಂಟು ಇನಿಂಗ್ಸ್‌ ಆಡಿದ್ದ ಅವರು ಒಟ್ಟು ಆರು ಶತಕಗಳನ್ನು ಸಿಡಿಸಿ ಮಿಂಚಿದ್ದರು.

ಇದು ಸಮರ್ಥ್‌ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತು. ಅದೇ ವರ್ಷ ಕರ್ನಾಟಕ ಸೀನಿಯರ್‌ ತಂಡಕ್ಕೂ ಆಯ್ಕೆಯಾಗಿದ್ದ ಅವರು ಡಿಸೆಂಬರ್‌ನಲ್ಲಿ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟಿದ್ದರು. ಆ ನಂತರ ರಣಜಿ ಟ್ರೋಫಿ, ಕರ್ನಾಟಕ ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಿ ಸೈ ಅನಿಸಿಕೊಂಡಿದ್ದ ಸಮರ್ಥ್‌, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಸರಣಿಗೆ ಭಾರತ ‘ಎ’ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದೀರಿ. ಹೇಗನಿಸುತ್ತಿದೆ?
ಮೊದಲ ಸಲ ಭಾರತ ‘ಎ’ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದು ಕಠಿಣ ಪರಿಶ್ರಮಕ್ಕೆ ದೊರೆತ ಫಲ. ಜೀವನದ ಸ್ಮರಣೀಯ ಕ್ಷಣ ಕೂಡ. ನಾನು ತಂಡಕ್ಕೆ ಆಯ್ಕೆಯಾದ ಸುದ್ದಿ ತಿಳಿದು ಅಪ್ಪ, ಅಮ್ಮ ಮತ್ತು ಮನೆಯವರೆಲ್ಲಾ ತುಂಬಾ ಸಂತಸಪಟ್ಟರು.

*ಸ್ಥಾನ ಸಿಗುವ ನಿರೀಕ್ಷೆ ಇತ್ತೆ?
ಮೊದಲು ತಂಡ ಪ್ರಕಟವಾದಾಗ ಅದರಲ್ಲಿ ಹೆಸರು ಇರಲಿಲ್ಲ. ಹೀಗಾಗಿ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿರ ಲಿಲ್ಲ. ಮೊದಲು ತಂಡದಲ್ಲಿದ್ದ ತಮಿಳು ನಾಡಿನ ಅಭಿನವ್‌ ಮುಕುಂದ್‌, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದರಿಂದ ಈ ಅವಕಾಶ ಒಲಿದಿದೆ.

*ನಿಮ್ಮ ಮುಂದಿರುವ ಸವಾಲುಗಳೇನು?
ಇದು ಆರಂಭವಷ್ಟೆ. ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ. ಈ ಅವಕಾಶ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಇದನ್ನು ಸದುಪಯೋಗಪಡಿಸಿಕೊಳ್ಳ ಬೇಕಾದ ಸವಾಲು ಈಗ ಎದುರಿಗಿದೆ.

* ರಾಹುಲ್‌ ದ್ರಾವಿಡ್‌ ಅವರು ತಂಡದ ಕೋಚ್‌ ಆಗಿದ್ದಾರೆ. ಅವರಿಂದ ಏನು ಕಲಿಯಬಹುದು ಅಂದು ಕೊಂಡಿದ್ದೀರಿ?‌
ದ್ರಾವಿಡ್‌ ಅವರು ಕ್ರಿಕೆಟ್‌ ಲೋಕದ ದಿಗ್ಗಜ ಆಟಗಾರ. ಅವರ ಆಟ ನೋಡಿ ಬೆಳೆದವನು ನಾನು. ಈಗ ಅವರ ಮಾರ್ಗದರ್ಶನದಲ್ಲಿ ಆಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದು ಸೌಭಾಗ್ಯ ಕೂಡ. ಭಾರತದ ಅನೇಕ ಯುವ ಕ್ರಿಕೆಟಿಗರಿಗೆ ಅವರು ದಾರಿ ದೀಪ ವಾಗಿದ್ದಾರೆ. ಅವರು ನೀಡುವ ಪ್ರತಿ ಸಲಹೆಯೂ ಅಮೂಲ್ಯವಾದುದು. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಪರಿಪಕ್ಷತೆ ಗಳಿಸುತ್ತೇನೆ ಎಂಬ ನಂಬಿಕೆ ಇದೆ.

*ಕರುಣ್‌ ನಾಯರ್‌ ಅವರ ನಾಯಕತ್ವದ ಬಗ್ಗೆ ಹೇಳಿ?
ಕರುಣ್‌ ಮತ್ತು ನಾನು ಸುಮಾರು ಹತ್ತು ವರ್ಷಗಳಿಂದಲೂ ವಿವಿಧ ಟೂರ್ನಿ ಗಳಲ್ಲಿ ಜೊತೆಯಾಗಿ ಆಡುತ್ತಿದ್ದೇವೆ. ಅವರು ಪ್ರತಿಭಾನ್ವಿತ ಆಟಗಾರ. ಈ ಹಿಂದೆ ಹಲವು ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಅವರ ಸಾರಥ್ಯದಲ್ಲಿ ಭಾರತ ತಂಡ ಗೆಲುವಿನ ಸಿಹಿ ಸವಿಯುವ ಭರವಸೆ ಇದೆ.

*ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಏನಾ ದರೂ ವಿಶೇಷ ಸಿದ್ಧತೆ ಮಾಡಿ ಕೊಳ್ಳುತ್ತಿದ್ದೀರಾ?
ಬೌಲರ್‌ಗಳ ಪಾಲಿನ ಸ್ವರ್ಗ ಎನಿಸಿರುವ ಹರಿಣಗಳ ನಾಡಿನ ಪಿಚ್‌ಗಳಲ್ಲಿ ಆಡುವುದು ನಿಜಕ್ಕೂ ದೊಡ್ಡ ಸವಾಲು. ಹೀಗಾಗಿ ಪ್ಲಾಸ್ಟಿಕ್‌ ಚೆಂಡಿನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದೇನೆ. ಬೌನ್ಸಿ ಪಿಚ್‌ಗಳಲ್ಲಿ ಎದುರಾಳಿ ತಂಡದ ವೇಗದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲು ಇದು ನೆರವಾಗಲಿದೆ.

*ಹೋದ ರಣಜಿ ಆವೃತ್ತಿಯಲ್ಲಿ ನೀವು ರಾಜ್ಯ ತಂಡದ ಪರ ಗರಿಷ್ಠ ರನ್‌ ಗಳಿಸಿದ್ದೀರಿ. ಇದರ ಬಗ್ಗೆ ಹೇಳಿ?
2015–16ರ ಆವೃತ್ತಿಯಲ್ಲಿ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿರಲಿಲ್ಲ. ಇದ ರಿಂದ ತುಂಬಾ ನಿರಾಸೆಯಾಗಿತ್ತು. ಆದ್ದರಿಂದ ಹೋದ ವರ್ಷ ಕಠಿಣ ಅಭ್ಯಾಸ ನಡೆಸಿದ್ದೆ. ಜೊತೆಗೆ ಬೇಗನೆ ವಿಕೆಟ್‌ ಒಪ್ಪಿಸದೆ ಹೆಚ್ಚು ಸಮಯ ಕ್ರೀಸ್‌ನಲ್ಲಿ ಇರಬೇಕು ಎಂದು ನಿರ್ಧರಿಸಿದ್ದೆ. ಹೀಗಾಗಿಯೇ 9 ಪಂದ್ಯಗಳಿಂದ 702ರನ್‌ ಕಲೆಹಾಕಲು ಸಾಧ್ಯವಾಯಿತು. ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ 235ರನ್‌ ಗಳಿಸಿದ್ದು ತುಂಬಾ ಸಂತಸ ನೀಡಿತು.

*ರಾಜ್ಯ ತಂಡದಲ್ಲಿರುವ ಹಿರಿಯ ಆಟಗಾರರಿಂದ ನೀವು ಕಲಿತಿದ್ದೇನು?
ವಿನಯ್‌ ಕುಮಾರ್‌, ರಾಬಿನ್‌ ಉತ್ತಪ್ಪ, ಸಿ.ಎಂ. ಗೌತಮ್‌, ಕರುಣ್‌ ಹೀಗೆ ಎಲ್ಲರಿಂದಲೂ ಹೊಸ ವಿಷಯಗಳನ್ನು ಕಲಿತಿದ್ದೇನೆ. ಎಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅಂಗಳದ ಒಳಗೆ ಮತ್ತು ಹೊರಗೆ ಹೇಗಿರಬೇಕು, ಒತ್ತಡದ ಸನ್ನಿವೇಶವನ್ನು ಹೇಗೆ ಮೀರಿ ನಿಲ್ಲಬೇಕು, ಅಂಗಳಕ್ಕಿಳಿಯುವಾಗ ಆಟಗಾರನ ಮನ ಸ್ಥಿತಿ ಹೇಗಿರಬೇಕು ಎಂಬುದನ್ನು ಅವರನ್ನು ನೋಡಿ ಅರಿತುಕೊಂಡಿದ್ದೇನೆ. ಹೀಗಾ ಗಿಯೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.

*ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲವಲ್ಲ?
ಕ್ರಿಕೆಟ್‌ ಲೋಕದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿರುವ ಲೀಗ್ ಐಪಿಎಲ್‌ . ಈ ಲೀಗ್‌ನಲ್ಲಿ ಆಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಹಾಗಂತ ಖಂಡಿತವಾಗಿಯೂ ಬೇಸರವಾಗಿಲ್ಲ. ಮುಂದಿನ ಬಾರಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯೂ ಇಲ್ಲ. ಮುಂಬರುವ ಟೂರ್ನಿಗಳಲ್ಲಿ ಗುಣಮಟ್ಟದ ಸಾಮರ್ಥ್ಯ ತೋರುವುದರತ್ತ ಮಾತ್ರ ಗಮನ ಹರಿಸುತ್ತೇನೆ. ಚೆನ್ನಾಗಿ ಆಡಿದರೆ ಅವಕಾಶ ತಾನಾಗಿಯೇ ಅರಸಿ ಬರುತ್ತದೆ ಎಂಬ ನಂಬಿಕೆ ನನ್ನದು.

*ರಾಜ್ಯ ತಂಡ ಮುಂದಿನ ಋತುವಿನಲ್ಲಿ ರಣಜಿ ಟ್ರೋಫಿ ಗೆಲ್ಲಬಹುದೇ?
ಖಂಡಿತವಾಗಿಯೂ. ನಮ್ಮದು ಶ್ರೇಷ್ಠ ತಂಡ. ಎಲ್ಲರೂ ವೈಯಕ್ತಿಕ ಸಾಧನೆಯನ್ನು ಬದಿಗೊತ್ತಿ ತಂಡದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಆಡುತ್ತಾರೆ. ಹಿರಿಯರು, ಕಿರಿಯರು ಎಂಬ ಭೇದ ಭಾವ ಯಾರಲ್ಲೂ ಇಲ್ಲ. ಈಗ ಪಿ.ವಿ. ಶಶಿಕಾಂತ್‌ ಸರ್‌ ಮುಖ್ಯ ಕೋಚ್‌ ಆಗಿದ್ದಾರೆ. ಜಿ.ಕೆ. ಅನಿಲ್‌ಕುಮಾರ್‌ ಸರ್‌ ಅವರು ಸಹಾಯಕ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಂಡ ಇನ್ನಷ್ಟು ಎತ್ತರಕ್ಕೆ ಏರುವ ಭರವಸೆ ಎಲ್ಲರಲ್ಲೂ ಇದೆ.

*ನಿಮ್ಮ ಕ್ರಿಕೆಟ್‌ ಬದುಕು ಆರಂಭವಾಗಿದ್ದು ಯಾವಾಗ?
ಎಳವೆಯಿಂದಲೇ ಕ್ರಿಕೆಟ್‌ ಬಗ್ಗೆ ವಿಶೇಷ ಪ್ರೀತಿ ಇತ್ತು. ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಬಿಷಪ್‌ ಕಾಟನ್‌ ಬಾಲಕರ ಶಾಲೆಯಲ್ಲಿ ಓದುತ್ತಿದ್ದಾಗ ರಾಮದಾಸ್‌ ಸರ್‌ ನನ್ನ ಪ್ರತಿಭೆ ಗುರುತಿಸಿ ಸಾಣೆ ಹಿಡಿದರು. ಬಳಿಕ 12, 14, 16, 19 ಹೀಗೆ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದೆ. ನಂತರ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ ಸೇರಿದೆ. ಇರ್ಫಾನ್‌ ಸೇಠ್‌ ಸರ್‌ ಅವರ ಮಾರ್ಗದರ್ಶನದಲ್ಲಿ ಹೊಸ ಕೌಶಲಗಳನ್ನು ಕಲಿತು ಆಟದಲ್ಲಿ ನೈಪುಣ್ಯ ಸಾಧಿಸಿದೆ.

*ಕುಟುಂಬದ ಬೆಂಬಲದ ಬಗ್ಗೆ ಹೇಳಿ?
ಅಪ್ಪ ರವಿಕುಮಾರ್‌ ಮತ್ತು ಅಮ್ಮ ನಾಗರತ್ನ ಅವರು ನನ್ನೆಲ್ಲಾ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ನನ್ನ ಶ್ರೇಯಸ್ಸಿನಲ್ಲಿ ಅವರ ಸಲಹೆ ಮತ್ತು ಸಹಕಾರ ತುಂಬಾ ಮಹತ್ವದ್ದು,

***

ಪರಿಚಯ
ಪೂರ್ಣ ಹೆಸರು: ರವಿಕುಮಾರ್‌ ಸಮರ್ಥ್‌
ಜನನ: ಜನವರಿ 22, 1993
ಸ್ಥಳ: ಮೈಸೂರು
ವಯಸ್ಸು: 24 ವರ್ಷ 171 ದಿನ
ಆಡಿದ ಪ್ರಮುಖ ತಂಡಗಳು: ಕರ್ನಾಟಕ, ಕೆಎಸ್‌ಸಿಎ ಕೋಲ್ಟ್ಸ್‌ ಇಲೆವನ್‌
ಬ್ಯಾಟಿಂಗ್‌ ಶೈಲಿ: ಬಲಗೈ
ಬೌಲಿಂಗ್‌ ಶೈಲಿ: ಆಫ್‌ ಬ್ರೇಕ್‌.

***
ಸಮರ್ಥ್‌ ಬ್ಯಾಟಿಂಗ್‌ ಸಾಧನೆ
ಮಾದರಿಪಂದ್ಯಇನಿಂಗ್ಸ್‌ನಾಟೌಟ್‌ ಒಟ್ಟು ರನ್‌ ಗರಿಷ್ಠ ಸರಾಸರಿ ಸ್ಟ್ರೈಕ್‌ರೇಟ್‌ ಶತಕ ಅರ್ಧಶತಕ
ಪ್ರಥಮ ದರ್ಜೆ 29 52 3 2,073 235 42.30 48.71 5 9
ಲೀಸ್ಟ್‌ ‘ಎ’ 10 8 – 168 71 21.00 65.11 – 1
ಟಿ–20 14 13 1 131 40 10.91 82.38 

***

ಪ್ರಮುಖ ಮಾಹಿತಿ
ಪ್ರಥಮ ದರ್ಜೆ ಪದಾರ್ಪಣೆ:
ಡಿಸೆಂಬರ್‌ 22–25, 2013, ಮುಂಬೈ ವಿರುದ್ಧ (ಬೆಂಗಳೂರು).
ಲೀಸ್ಟ್‌ ‘ಎ’ ಗೆ ಅಡಿ ಇಟ್ಟಿದ್ದು:
ನವೆಂಬರ್‌ 23, 2014, ಬಂಗಾಳ ವಿರುದ್ಧ (ಅಹಮದಾಬಾದ್‌).
ಮೊದಲ ಟಿ–20:
ಏಪ್ರಿಲ್‌ 3, 2014, ಕೇರಳ ವಿರುದ್ಧ (ವಿಶಾಖಪಟ್ಟಣ).

***
ಅಂಕಿ– ಅಂಶ
246 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಾರಿಸಿರುವ ಬೌಂಡರಿಗಳು
30 ಪ್ರಥಮ ದರ್ಜೆಯಲ್ಲಿ ಹಿಡಿದ ಕ್ಯಾಚ್‌ಗಳು
4 ಪ್ರಥಮ ದರ್ಜೆಯಲ್ಲಿ ಪಡೆದ ವಿಕೆಟ್‌ಗಳು
67ಕ್ಕೆ2 ಉತ್ತಮ ಬೌಲಿಂಗ್‌ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT