ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ ಮೆಟ್ರೊ, ನಮ್ಮ ಮೆಟ್ರೊ...

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ದಿನನಿತ್ಯ ಮೆಟ್ರೊದಲ್ಲಿ ಪ್ರಯಾಣಿಸುವ ಭಾಗ್ಯ ನನಗಿಲ್ಲ. ಯಾಕೆಂದರೆ ನನ್ನ ಕಾಲೇಜಿನ ಬಳಿ ಮೆಟ್ರೊ ರೈಲು ಬರುವುದಿಲ್ಲ. ವಾರಾಂತ್ಯದಲ್ಲಿ ಮೆಟ್ರೋ ಪ್ರಯಾಣ ಮಾಡುವುದು ಬಿಗಿಯಾದ ನರನಾಡಿಗಳನ್ನು ಸಡಿಲಗೊಳಿಸಲು ನಾ ಕಂಡುಕೊಂಡಿರುವ ಉಪಾಯ.

ಆದಿತ್ಯವಾರ ಬೆಳಗ್ಗಿಂದಲೇ ‘ಮಂಡೆ ಮಾರ್ನಿಂಗ್ ಬ್ಲೂಸ್’ ಶುರುವಾಗುವ ನನ್ನಂಥವರಿಗೆ ಈ ಮೆಟ್ರೊ ಬಹಳ ಪ್ರಯೋಜನಕಾರಿ. ಸುಮಾರು ಸಂಜೆ ಏಳರ ಮೇಲೆ ಮೆಟ್ರೊ ನಿಲ್ದಾಣಕ್ಕೆ ಹೋಗುವೆ. ಪರಿವಾರ ಸಮೇತ ಜನ ಜಾತ್ರೆ. ಮಕ್ಕಳು, ಹೆಂಡತಿ, ಅಜ್ಜ, ಅಜ್ಜಿ, ತಮ್ಮ, ಅವನ ಹೆಂಡತಿ, ಅಥವಾ ಗೆಳೆಯರು ಹೀಗೆ ಸುಮಾರು ಜನ ರೈಲು ಹತ್ತುವುದಕ್ಕೆ ಕಾಯುತ್ತಿರುತ್ತಾರೆ. ಅವರನ್ನು ನೋಡುವುದೇ ಮೋಜು. ಕೆಲವರು ಮದುವೆ ಮನೆಗೆ ಹೋಗುವಂತೆ ಮೈ ತುಂಬಾ ಒಡವೆ, ಒಳ್ಳೆ ಸೀರೆ ತೊಟ್ಟಿದ್ದಾರೆ, ಇನ್ನು ಕೆಲವರು, ಎರ್ರಾಬಿರ್ರಿ ತೊಟ್ಟ ವಸ್ತ್ರ, ಬಿರಿ ಹೊಯ್ದ ಕೂದಲು. ಕೆಲವರನ್ನು ನೋಡಲು ಎರಡು ಕಣ್ಣು ಸಾಲದು. ಕೆಲವರನ್ನು ನೋಡಲೇ ಆಗದು!

ಮೊನ್ನೆ ಭಾನುವಾರ ಕಂಡ ಜೋಡಿ ಒಂಥರಾ ಖುಷಿ ನೀಡಿತು. ಸೂಟು ಧರಿಸಿದ ವ್ಯಕ್ತಿ ಮಧ್ಯ ವಯಸ್ಸಿನವರು ನೀಟಾಗಿ ಬಾಚಿದ ಕ್ರಾಪು. ಪೊಲೀಸ್‌ನಂತೆ ಕಾಣುತ್ತಿದ್ದರು. ಅವರ ಜತೆಗಿದ್ದ ಹೆಣ್ಣುಮಗಳು ಬಿಗಿಯಾದ ಮಾಸಿದ ಹಳದಿ ಟಾಪ್‌, ಮಂಡಿ ಬಳಿ ಹರಿದ ಜೀನ್ಸ್, ಕೆದರಿದ ತಲೆ, ಕಣ್ಣಿಗೆ ಕಾಡಿಗೆ, ಮುಖ ಚೆoದವಿದ್ದರೂ ಈ ಅವತಾರದಲ್ಲಿ ವಿಲಕ್ಷಣವಾಗಿ ಕಾಣುತ್ತಿದ್ದರು. ಅವರು ಹತ್ತಿದ ತಕ್ಷಣವೇ ಇನ್ನೊಂದು ಪರಿವಾರ ಅವರತ್ತಲೇ ಬಂತು. ಈ ಜೋಡಿಯನ್ನು ಮಾತಾಡಿಸುವ ಅವರ ಪರಿ ನೋಡಿ, ಸೂಟುಧಾರಿಯು ಬಾಸ್ ಹಾಗೂ ಆ ಪರಿವಾರದ ಹೆಣ್ಣುಮಗಳು ಅವರ ಕಿರಿಯ ಸಹೋದ್ಯೋಗಿ ಎಂದು ಭಾವಿಸಿದೆ. ನನ್ನ ಕಣ್ಣು, ಕಿವಿ, ಗಮನವೆಲ್ಲಾ ಅವರತ್ತಲೇ ಎಂದು ಹೇಳಬೇಕಾಗಿಲ್ಲ.

ಇನ್ನೆರಡು ನಿಮಿಷದಲ್ಲಿ ಇಡೀ ಪರಿವಾರ ಇಳಿಯಿತು. ಇಲ್ಲಿ ಶುರುವಾಯಿತು ಮಾತಿನ ಚಕಮಕಿ. ‘ನಿನಗೆ ಹೇಳಿಲ್ಲವಾ ನಾನು, ಚೂಡಿದಾರ್ ಹಾಕಿಕೊಂಡು ಬಾ ಅಂತ. ಆಕೆ ನೋಡು ಎಷ್ಟು ಲಕ್ಷಣವಾಗಿ ಬಂದಿದ್ದರು’.

ಇಷ್ಟು ಹೇಳಿದ ಗಂಡನಿಗೆ ನಡೆಯಿತು ಸಹಸ್ರನಾಮಾರ್ಚನೆ. ಆತನ ಹಳ್ಳಿ ಗಮಾರನ ಬುದ್ಧಿ, ಪಟ್ಟಣದ ಹೆಂಡತಿಯನ್ನು ಮೆಚ್ಚಲು ಬಾರದ ಒರಟುತನ, ಜೂನಿಯರ್ ಆಗಿರುವವಳನ್ನು ಮೆಚ್ಚುವ ಹಾಗೂ ಅವಳ ಜತೆ ಹೆಂಡತಿಯನ್ನು ಹೋಲಿಸುವ ದುರ್ಗುಣ... ಉಫ್‌... ನನ್ನ ನಿಲ್ದಾಣ ಬಂದಿದ್ದನ್ನೂ ಮರೆತು ಅವರ ಜಗಳ ಆಲಿಸುತ್ತಾ ನಿಂತೆ.

ಪಿಸು ಮಾತಿನಲ್ಲಿ ಜಗಳವಾಡಬಹುದೆಂದು ನನಗೆ ತಿಳಿದಿದ್ದು ಅಂದೇ! ಅವರೊಟ್ಟಿಗೆ ಮುಂದಿನ ಸ್ಟಾಪಲ್ಲಿ ಇಳಿದು ಬೆವರೊರೆಸಿಕೊಂಡೆ. ತಮಾಷೆಯೆಂದರೆ ನನ್ನ ಬಿಟ್ಟು ಇನ್ಯಾರಿಗೂ ಅವರ ಮಾತು ಕೇಳಿಸಿಲ್ಲ. ಏಕೆಂದರೆ ಎಲ್ಲರ ಕಿವಿಯಲ್ಲೂ ಇಯರ್ ಫೋನು! ಅಥವಾ ಗಮನವೆಲ್ಲಾ ಮೊಬೈಲಿನತ್ತ. ವಾಪಸ್ಸು ಬರುವಾಗ ಇನ್ನೊಂದು ಜೋಡಿಯ ಬಳಿ ಸರಿದು ನಿಂತೆ... ಕಿವಿ ನಿಮಿರಿಸಿಕೊಂಡು!!

ಸಹನಾ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT