ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕ್ರಾಂತಿ ಆಗಲಿ

Last Updated 17 ಜುಲೈ 2017, 5:08 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕ್ರಾಂತಿ ನಡೆಯಬೇಕಾಗಿದೆ. ಲಿಂಗಾಯತರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಕೈಗೊಳ್ಳುವುದು ಅಗತ್ಯವಾಗಿದ್ದು, ಇದಕ್ಕಾಗಿ ಜುಲೈ 19ರಂದು ಬೀದರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಇಲ್ಲಿನ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದ್ದಾರೆ.

‘ಧಾರ್ಮಿಕ ಕ್ರಾಂತಿಯಾಗದೆ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ. ಇವೆರಡೂ ಕ್ಷೇತ್ರಗಳಲ್ಲಿನ ಬದಲಾವಣೆಯಿಂದ ಮಾತ್ರ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ವಿಕಾಸ ಸುಲಭ ಆಗುತ್ತದೆ. ಈ ಕಾರಣಕ್ಕಾಗಿಯೇ ಬಸವಣ್ಣನವರು 12ನೇ ಶತಮಾನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದರು.

ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯಲು ಎಲ್ಲರೂ ಕ್ರಾಂತಿಯ ಮಾರ್ಗ ಅನುಸರಿಸಬೇಕಾಗಿದೆ. ಒಗ್ಗಟ್ಟಾಗುವ ಮೂಲಕ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು’ ಎಂದು ಹೇಳಿದ್ದಾರೆ.

‘ಬೌದ್ಧ, ಸಿಖ್, ಜೈನ್, ಪಾರ್ಶಿ ಧರ್ಮೀಯರು ಅಲ್ಪಸಂಖ್ಯಾತರು. ಆದರೂ, ಅವರಿಗೆ ಧರ್ಮದ ಮಾನ್ಯತೆ ನೀಡಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಲಿಂಗಾಯತರು ಬಹುಸಂಖ್ಯಾತರು. ಲಿಂಗಾಯತವು ಪ್ರತ್ಯೇಕ ಧರ್ಮ ಎಂದು ಮೊದಲಿನಿಂದಲೂ ನಂಬಲಾಗುತ್ತದೆ. ಸ್ವತಂತ್ರ ಧರ್ಮವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ.

ಧಾರ್ಮಿಕ ಆಚರಣೆ, ಸಾಮಾಜಿಕ ರೀತಿ ನೀತಿಗಳು ಅನ್ಯರಗಿಂತ ಭಿನ್ನವಾಗಿವೆ. ಮೂಢನಂಬಿಕೆ, ವೈದಿಕ ಆಚರಣೆಯನ್ನು ಬಲವಾಗಿ ವಿರೋಧಿಸಲಾಗಿದ್ದು, ವೈಜ್ಞಾನಿಕ ತಳಹದಿಯ, ಅರಿವಿನ ಆಧಾರದ ಸಮಾನತೆಯ ತತ್ವದ ಧರ್ಮ ಇದಾಗಿದೆ. ಇದಕ್ಕೆ ಮಾನ್ಯತೆ ದೊರಕಿಸಲು ಅನೇಕ ವರ್ಷಗಳಿಂದ ಹೋರಾಟ ಕೂಡ ನಡೆದಿದೆ. ಆದರೂ, ಈ ಕಾರ್ಯ ನೆರವೇರಿಲ್ಲ. ಸಂಬಂಧಿತರು ಸಮಾಜದ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಹೇಳಿದ್ದಾರೆ.

‘ಸಮಾಜದ ಜನರು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಸ್ಪರ್ಧೆಯಿಂದಾಗಿ ಬಡ ಕುಟುಂಬದ ಯುವಕರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕುತ್ತಿಲ್ಲ. ನೌಕರಿ ಸಿಗದೆ ನಿರುದ್ಯೋಗಿಗಳಾಗಿ ಅಲೆಯಬೇಕಾಗುತ್ತಿದೆ.

ಒಂದು ವೇಳೆ ಸ್ವತಂತ್ರ ಧರ್ಮವಾದರೆ ಎಲ್ಲ ಸೌಲಭ್ಯಗಳು ಸಿಗಬಲ್ಲವು. ಆದ್ದರಿಂದ ಜಾತಿ, ಒಳಪಂಗಡ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ  ಬೀದರ್‌ನ ನೆಹರು ಮೈದಾನದಲ್ಲಿ ನಡೆಯುವ  ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT