ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹೇರೂರ ಕೆ. ರಸ್ತೆ: ಜನರ ಆಕ್ರೋಶ

Last Updated 17 ಜುಲೈ 2017, 5:18 IST
ಅಕ್ಷರ ಗಾತ್ರ

ಕಾಳಗಿ: ‘ಇಲ್ಲಿಂದ 10ಕಿ.ಮೀ ದೂರದಲ್ಲಿರುವ ಚಿಂಚೋಳಿ ಎಚ್. – ಹೇರೂರ ಕೆ. ನಡುವಿನ 12ಕಿ.ಮೀ ಜಿಲ್ಲಾ ಮುಖ್ಯರಸ್ತೆ ದುರಸ್ತಿಗೆ ಕಾದುಕುಳಿತು ಅನೇಕ ವರ್ಷಗಳಾದರೂ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ್ ಈ ಕಡೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಶಿನಾಥ ಶೆಳ್ಳಗಿ ಆರೋಪಿಸಿದ್ದಾರೆ.

ಕಾಳಗಿಯಿಂದ ಆಳಂದ, ಹುಮನಾಬಾದ್ ಮತ್ತು ಬೀದರ್ ಹೋಗಲು ಇರುವ ಕಾಳಗಿ–ಚಿಂಚೋಳಿ ಎಚ್.– ಹೇರೂರ– ನಾಗೂರ–ಮಹಾಗಾಂವ್ ಕ್ರಾಸ್ ನಡುವಿನ ಈ ಸಂಪರ್ಕ ರಸ್ತೆ, ಚಿಂಚೋಳಿ ಎಚ್.–ಹೇರೂರ ಮಧ್ಯೆ ಸಂಪೂರ್ಣ ಕಿತ್ತುಹೋಗಿ ಹಾಳಾಗಿದೆ. ರಸ್ತೆಯ ಎಲ್ಲೆಂದರಲ್ಲಿ ಜಲ್ಲಿಕಲ್ಲು ತೇಲಿಕೊಂಡು ತಗ್ಗುಗುಂಡಿ ಬಿದ್ದು ಡಾಂಬರ್ ಕಳಚಿಹೋಗಿದೆ. ರಸ್ತೆ ಪಕ್ಕದ ಚಿಂಚೋಳಿ ಎಚ್., ಬಣಮಗಿ, ಕಲ್ಲಹಿಪ್ಪರ್ಗಿ, ಶೆಳ್ಳಗಿ ಊರಿನ ಸಮೀಪದಲ್ಲಿ ಬೋರವೆಲ್ ನೀರು, ನಲ್ಲಿ ನೀರು, ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಜನ, ಜಾನುವಾರು ಓಡಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.

‘ದಿನಕ್ಕೆ ಮೂರು ಸಲ ಓಡಾಡುವ ಕಲಬುರ್ಗಿ–ಹುಳಗೇರಾ ಏಕೈಕ ಬಸ್ಸಿನ ಸಂಚಾರವನ್ನು ಈ ರಸ್ತೆಯ ಸ್ಥಿತಿ ಕಂಡು ಈಗ ಸ್ಥಗಿತಗೊಳಿಸುವುದಾಗಿ ಬಸ್‌ ಘಟಕದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸುತ್ತಲಿನ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಲಬುರ್ಗಿ, ಮಹಾಗಾಂವ ಕ್ರಾಸ್ ಮತ್ತು ಕಾಳಗಿಗೆ ಹೋಗಿಬರಲು ಇರುವ ಇದೊಂದೇ ಬಸ್ಸು, ರಸ್ತೆ ದುರಸ್ತಿ ನೆಪದಲ್ಲಿ ಸ್ಥಗಿತಗೊಂಡರೆ ಈ ಭಾಗದವರು ಕಷ್ಟ ಪಡಬೇಕಾಗುತ್ತದೆ’ ಎಂದು ಗ್ರಾ.ಪಂ ಸದಸ್ಯ ನೀಲೇಶ ತೀರ್ಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ್‌ ಅವರಿಗೆ ಈ ರಸ್ತೆಯ ಕುರಿತು ಸಂಪೂರ್ಣ ಮನವರಿಕೆ ಮಾಡಿಕೊಡಲಾಗಿದೆ. ಆದಾಗ್ಯೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ. ಈಗಲಂತೂ ರಸ್ತೆ ಸಂಪೂರ್ಣ ಹಾಳಾಗಿ ಬಿಟ್ಟಿದೆ. ಇನ್ನಾದರೂ ಈ ರಸ್ತೆ ದುರಸ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಂಡು ರಸ್ತೆ ಸರಿಪಡಿಸಿ ಜನತೆಗೆ ಅನುಕೂಲ      ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT