ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ತರಾಟೆ; ಅನ್ನದಾತರ ಮನವೊಲಿಕೆ

Last Updated 17 ಜುಲೈ 2017, 6:04 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ 5.60 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿ ಸುವ ಮಹತ್ವಾಂಕಾಂಕ್ಷೆಯ ಮುಳವಾಡ ಏತ ನೀರಾವರಿ ಯೋಜನೆಯನ್ನು, ನಿಗದಿತ ಅವಧಿಗೂ ಮುನ್ನವೇ ಲೋಕಾರ್ಪಣೆಗೊಳಿಸಲು ಜಲ ಸಂಪನ್ಮೂಲ ಇಲಾಖೆ ಸಮರೋಪಾದಿ ಯಲ್ಲಿ ಕಾಮಗಾರಿ ನಡೆಸಿದೆ.

2018ರ ಮಾರ್ಚ್‌ ಅಂತ್ಯದೊಳಗೆ ಯೋಜನೆ ವ್ಯಾಪ್ತಿಯ ಎಲ್ಲ 12 ಶಾಖಾ ಕಾಲುವೆಗಳ ಕಾಮಗಾರಿ ಪೂರ್ಣ ಗೊಳಿಸುವ ಗುರಿ ಹೊಂದಿದ್ದ ಕೆಬಿಜೆಎನ್‌ಎಲ್‌, ಇದೀಗ ಇದೇ ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ.

ಪ್ರಸಕ್ತ ಮಳೆಗಾಲದ ಅವಧಿಯಲ್ಲೇ ಈ ಕಾಲುವೆಗಳಿಗೆ ನೀರು ಹರಿಸಿ, ಇವು ಗಳ ಮೂಲಕ ಜಿಲ್ಲೆಯ 203 ಕೆರೆಗಳಿಗೆ ನೀರು ತುಂಬಿಸುವ ದೃಷ್ಟಿಯಿಂದ  ಪೂರಕ ಕಾಮಗಾರಿಗಳು ಬಿರುಸಿನಿಂದ ನಡೆದಿವೆ.

ಖಡಕ್‌ ಎಚ್ಚರಿಕೆ: ‘ಕಾಲುವೆ ಕಾಮಗಾರಿ ಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳು ಯಾವ್ಯಾವ ಗ್ರಾಮದಲ್ಲಿ ಅಡ್ಡಿಯಾಗಿವೆ ಎಂಬುದರ ಪಟ್ಟಿಯನ್ನು ನನಗೆ ನೀಡಿ. ಸ್ವತಃ ಒಂದೆರೆಡು ದಿನ ನಾನೇ ಕುಳಿತು ಆ ಊರುಗಳ ಮುಖಂಡರ ಜತೆ, ಸಂಬಂಧಿಸಿದ ರೈತರನ್ನು ಕರೆಸಿಕೊಂಡು ಮನವೊಲಿಸುವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

‘ವಿನಾ ಕಾರಣ ವಿಳಂಬ ಮಾಡಬೇಡಿ. ನಿಮ್ಮ ಕಾನೂನು ಪ್ರಕ್ರಿಯೆ ನಂತರ ಮಾಡಿಕೊಳ್ಳಿ. ಮುಂಬರುವ ಸೆಪ್ಟೆಂಬರ್‌ ಅಂತ್ಯದೊಳಗೆ ಕಾಲುವೆ ಕಾಮಗಾರಿ, ಹೆಡ್‌ವರ್ಕ್‌ ಕಾಮಗಾರಿ ಪೂರ್ಣಗೊಳ್ಳಬೇಕು. ಭೂಸ್ವಾಧೀನ ಸಮಸ್ಯೆ ನಾನೇ ಪರಿಹರಿಸುತ್ತೇನೆ’ ಎಂದರು.

‘ಪ್ರಾಯೋಗಿಕವಾಗಿ ಕಾಲುವೆಗಳಲ್ಲಿ ಈ ಮಳೆಗಾಲದಲ್ಲೇ ನೀರು ಹರಿಯ ಬೇಕು. ಇದು ನಮ್ಮ ಪ್ರತಿಷ್ಠೆಯ ವಿಷಯ. ಕಾಮಗಾರಿಯ ಗುಣಮಟ್ಟದಲ್ಲೂ ರಾಜಿಯಿಲ್ಲ. ಈ ಗಡುವಿನಲ್ಲಿ ಕೊಂಚ ಆಚೀಚೆಯಾಗಬಾರದು. ಸಂಬಂಧಿಸಿ ದವರ ಜತೆ ಕೂತು ಎಲ್ಲ ಅಡೆತಡೆ ನಿವಾರಿಸಿಕೊಳ್ಳಿ. ಇಲ್ಲದಿದ್ದರೇ ಪರಿಣಾಮ ಎದುರಿಸಿ’ ಎಂಬ ಗಂಭೀರ ಎಚ್ಚರಿಕೆ ಯನ್ನು  ಅವರು ಶನಿವಾರ ಕಾಮಗಾರಿ ವೀಕ್ಷಣೆ ಸಂದರ್ಭ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದರು.

ಮನವೊಲಿಕೆ: ಕಾಮಗಾರಿ ವೀಕ್ಷಣೆ ಸಂದರ್ಭ ದಾರಿ ನಡುವೆಯೇ ವಿವಿಧ ಗ್ರಾಮಗಳ ರೈತರು ಸ್ಥಳೀಯರೊಂದಿಗೆ ಸಚಿವರನ್ನು ಭೇಟಿಯಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿ ನೀಡಿದರು. ತಮ್ಮ ತಕರಾರು ತೆಗೆದರು. ರೈತರು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಸಚಿವ, ಸ್ವತಃ ಮನವೊಲಿಕೆಗೆ ಮುಂದಾದರು.

‘ನಾನು ಬೇರೆಯ ಜಿಲ್ಲೆಯವನಲ್ಲ. ವಿಜಯಪುರದವನೇ. ಎಂದಿಗೂ ನಿಮಗೆ ಅನ್ಯಾಯವಾಗಲು ಬಿಡಲ್ಲ. ನಿಮ್ಮ ಸಹಕಾರ ದೊಡ್ಡದು. ಅದಕ್ಕೆ ಪ್ರತ್ಯುಪಕಾರವಾಗಿ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸುವೆ’ ಎಂಬ ಕಿವಿಮಾತು ಹೇಳುವ ಮೂಲಕ ರೈತರನ್ನು ಸಮಾಧಾನಗೊಳಿಸಿದರು. ಸ್ಥಳದಲ್ಲೇ ಭೂಸ್ವಾಧೀನ ವಿಶೇಷ ಅಧಿಕಾರಿ, ಜಲಸಂಪನ್ಮೂಲ ಇಲಾಖೆಯ ವಿವಿಧ ಅಧಿಕಾರಿಗಳ ಜತೆ ಚರ್ಚಿಸಿ,  ಗಡುವು ನಿಗದಿ ಪಡಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT