ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು ದಾಟಲು ಉಸಿರು ಬಿಗಿಹಿಡೀಬೇಕು!

Last Updated 17 ಜುಲೈ 2017, 6:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದಲ್ಲಿ ಪಿ.ಬಿ. ರಸ್ತೆ ಹೊರತುಪಡಿಸಿದರೆ ಹೆಚ್ಚು ವಾಹನ ಸಂಚಾರವಿರುವುದು ಹೊಸೂರು–ಉಣಕಲ್‌ ಮಾರ್ಗದಲ್ಲಿ. ಆದರೆ, ಹೊಸೂರು ವೃತ್ತದಿಂದ, ಶಕುಂತಲಾ ಆಸ್ಪತ್ರೆಯವರೆಗಿನ ರಸ್ತೆ­ಯಲ್ಲಿ ಆರು ಉಬ್ಬುಗಳನ್ನು ಹಾಕ­ಲಾಗಿದೆ. ಈ ಉಬ್ಬುಗಳನ್ನು ಸುರಕ್ಷಿತ­ವಾಗಿ ದಾಟಬೇಕಾದ ಸವಾಲಿನೊಂದಿಗೆ ಸಂಚರಿಸುತ್ತಾರೆ ವಾಹನ ಸವಾರರು.

‘ಕೆಲವೇ ಅಡಿಗಳ ಅಂತರದಲ್ಲಿ ಹಲವು ರಸ್ತೆ ಉಬ್ಬುಗಳು ಎದುರಾಗು­ತ್ತವೆ. ಅಲ್ಲದೆ, ಇಡೀ ರಸ್ತೆಯೇ ಉಬ್ಬು–ತೆಗ್ಗುಗಳಿಂದ ಕೂಡಿದೆ. ರಸ್ತೆ ಉಬ್ಬು ದಾಟಿದ ಕೂಡಲೇ ಗುಂಡಿಗಳು ಎದುರಾಗುತ್ತವೆ. ಈ ಮಾರ್ಗದಲ್ಲಿ ಸಂಚರಿಸಬೇಕೆಂದರೆ ದೊಡ್ಡ ಸಾಹಸ ಮಾಡಿದಂತಾಗುತ್ತದೆ’ ಎಂದು ವಾಹನ ಸವಾರ ಗವಿಕುಮಾರ್‌ ಕಾತರಕಿ ಹೇಳುತ್ತಾರೆ.

‘ಈ ಮಾರ್ಗದಲ್ಲಿ ಶಕುಂತಲಾ ಮತ್ತು ಬಾಲಾಜಿ ಎಂಬ ಎರಡು ಆಸ್ಪತ್ರೆ­ಗಳು ಇವೆ. ಸಾಕಷ್ಟು ಆಂಬುಲನ್ಸ್‌ಗಳೂ ಓಡಾಡುತ್ತವೆ. ಆದರೆ, ಈ ರಸ್ತೆಉಬ್ಬು­ಗಳಿಂದ ತುಂಬಾ ತೊಂದರೆಯಾಗಿದೆ. ಆಂಬುಲನ್ಸ್‌ಗಳು ವೇಗವಾಗಿ ಹೋದಾಗ ಅಪಾಯವಾಗುವ ಸಾಧ್ಯ­ತೆಯೇ ಹೆಚ್ಚಾಗಿದೆ’ ಎಂದು ಇಲ್ಲಿನ ನಿವಾಸಿ ಕಾಸಿಂಸಾಬ್‌ ಬುರಡಿ ಹೇಳಿದರು.

ಸಂಚಾರ ದಟ್ಟಣೆಯ ಬಿಸಿ: ಪಿ.ಬಿ. ರಸ್ತೆಯಲ್ಲಿ ಯಾವುದಾದರೂ ದುರಸ್ತಿ­ಕಾರ್ಯ ನಡೆಯುತ್ತಿದ್ದರೆ, ಎಲ್ಲ ವಾಹನ­ಗಳು ಇದೇ ಮಾರ್ಗದಲ್ಲಿ ಸಂಚರಿಸು­ತ್ತವೆ. ಬಸ್ಸು, ಲಾರಿ, ಟ್ರಕ್‌ಗಳು ಈ ಮಾರ್ಗ­ದಲ್ಲಿ ಬಂದಾಗ, ರಸ್ತೆ ಉಬ್ಬು ದಾಟಲು ಹತ್ತರಿಂದ ಹದಿನೈದು ನಿಮಿಷ­ಗಳಾಗುತ್ತವೆ. ಈ ವೇಳೆ ಸಂಚಾರ­ದಟ್ಟಣೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಈ ರಸ್ತೆಯಲ್ಲಿ ಈಗ ಕೋರ್ಟ್‌ ಕಟ್ಟಡ ನಿರ್ಮಾಣವಾಗಿದೆ. ಅಲ್ಲಿ ಚಟುವಟಿಕೆಗಳು ಸಂಪೂರ್ಣವಾಗಿ ಆರಂಭಗೊಂಡ ನಂತರ, ಈ ಮಾರ್ಗದಲ್ಲಿ ವಾಹನಗಳ ಸಂಚಾರ ಇನ್ನೂ ಹೆಚ್ಚಾಗುತ್ತದೆ. ಶೀಘ್ರದಲ್ಲಿ ಈ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು’ ಎಂದು ಕಲ್ಲಪ್ಪ ಲಕ್ಷ್ಮಣ ಹುಡೇದ ಒತ್ತಾಯಿಸುತ್ತಾರೆ.

ಮಕ್ಕಳು ರೋಗಿಗಳಾಗಬೇಕೆ? ‘ಬಡ ಕುಟುಂಬಗಳೇ ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿವೆ. ಮನೆ ಚಿಕ್ಕದಾಗಿ­ರುವುದರಿಂದ ಮಕ್ಕಳು ಹೊರಗಡೆಯೇ ಹೆಚ್ಚು ಆಟವಾಡುತ್ತಾರೆ. ಮನೆ ಎದುರಿಗೇ ರಸ್ತೆ ಇರುವುದರಿಂದ ಸಹಜವಾಗಿ ರಸ್ತೆಗೆ ಬಂದುಬಿಡುತ್ತವೆ. ಆಂಬುಲನ್ಸ್‌ಗಳು ಹಾಗೂ ವಾಹನಗಳು ವೇಗವಾಗಿ ಸಂಚರಿಸಲು ರಸ್ತೆ ಉಬ್ಬು ತೆಗೆಸಬೇಕು ಎಂದರೆ ಹೇಗೆ ? ಆಂಬುಲನ್ಸ್‌ಗಳಲ್ಲಿರುವ ರೋಗಿಗಳನ್ನು ಉಳಿಸಲು, ಅಪಘಾತಕ್ಕೀಡಾಗಿ ಮಕ್ಕಳು ರೋಗಿಗಳಾಗಬೇಕೆ’ ಎಂದು ಇಲ್ಲಿನ ನಿವಾಸಿ ಬಸವರಾಜ ದೊಡ್ಡಮನಿ ಪ್ರಶ್ನಿಸುತ್ತಾರೆ.

‘ವಾಹನಕ್ಕೆ ಸಿಲುಕಿ ಹುಡುಗಿ­ಯೊ­ಬ್ಬಳ ಕಾಲು ಮುರಿದಿದೆ. ಆರು ಉಬ್ಬು­ಗಳು ಮಾತ್ರವಲ್ಲ, ಈ ರಸ್ತೆಯುದ್ದಕ್ಕೂ ಹತ್ತು ಅಡಿಗೆ ಒಂದರಂತೆ ರಸ್ತೆ ಉಬ್ಬು ಹಾಕಿದರೂ ತೊಂದರೆಯಿಲ್ಲ’ ಎಂದು ಅವರು ಹೇಳಿದರು.

‘ರಸ್ತೆ ಉಬ್ಬುಗಳಿಂದ ಹಲವರು ಬಿದ್ದಿದ್ದಾರೆ ಎನ್ನುವುದು ನಿಜ. ಆದರೆ, ಅದಕ್ಕೆ ಅವರು ವೇಗವಾಗಿ ವಾಹನ ಚಲಾಯಿಸಿದ್ದೇ ಕಾರಣವಾಗಿತ್ತು’ ಎಂದು ಬಸವರಾಜ ಹೇಳಿದರು.
‘ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ­ವರಿಗೆ ಕಷ್ಟ ಗೊತ್ತಾಗುತ್ತದೆ. ರಸ್ತೆಗಳಿ­ರುವುದು ವಾಹನ ಸಂಚರಿಸುವುದಕ್ಕೆ ಹೊರತು, ಮಕ್ಕಳು ಆಡುವುದಕ್ಕಲ್ಲ’ ಎಂದು ವಾಹನ ಸವಾರ ರವಿರಾಜ್‌ ಕುಲಕರ್ಣಿ ಹೇಳಿದರು.

‘ಮನವಿ ಮಾಡಿದರೂ ತೆಗೆಸಿಲ್ಲ’
‘ಹೌದು. ಹೊಸೂರು–ಉಣಕಲ್‌ ರಸ್ತೆಯಲ್ಲಿ, ಹೊಸೂರು ವೃತ್ತದಿಂದ, ಶಕುಂತಲಾ ಆಸ್ಪತ್ರೆಯವರೆಗೆ ಹಲವು ರಸ್ತೆ ಉಬ್ಬುಗಳಿದ್ದು, ತುಂಬಾ ಅವೈಜ್ಞಾನಿಕವಾಗಿವೆ. ಈ ಉಬ್ಬುಗಳನ್ನು ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ, ವಲಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ವಾರ್ಡ್‌ ಸಂಖ್ಯೆ 45ರ ಸದಸ್ಯ ಮೋಹನ ಹಿರೇಮನಿ.

‘ಸಾರ್ವಜನಿಕರು ಹಲವು ಬಾರಿ ನನಗೆ ದೂರು ನೀಡಿದ್ದಾರೆ. ಹೆಚ್ಚು ಉಬ್ಬುಗಳಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಹೇಳಿದ್ದಾರೆ. ಈ ಬಗ್ಗೆ ನಾನು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ, ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ದೂರು ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಈ ಉಬ್ಬುಗಳನ್ನು ತೆರವುಗೊಳಿಸಲು ಮತ್ತೆ ಒತ್ತಾಯಿಸುತ್ತೇನೆ’ ಎಂದು ಅವರು ತಿಳಿಸಿದರು.

ತುಂಬಾ ಎತ್ತರವಾಗಿವೆ
ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ರಸ್ತೆ ಉಬ್ಬುಗಳು ತುಂಬಾ ಎತ್ತರವಾಗಿವೆ. ಬಹಳಷ್ಟು ಜನ ಉರುಳಿ ಬಿದ್ದಿದ್ದಾರೆ. ರಾತ್ರಿ ವೇಳೆ ಏನೂ ಕಾಣುವುದಿಲ್ಲ. ಎಲ್ಲ ಉಬ್ಬುಗಳನ್ನು ತೆರವುಗೊಳಿಸಬೇಕು
ರಾಮು ಮೂಲಿಮನಿ, ವಾಹನ ಸವಾರ 

ವೇಗವಾಗಿ ಬಂದರೆ ಅಪಾಯ
ಬೈಕ್‌ ಸವಾರರು ನಿಧಾನವಾಗಿ ಬಂದರೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಆದರೆ, ವೇಗವಾಗಿ ವಾಹನ ಚಲಾಯಿಸಿದರೆ ಬೀಳುವ ಸಾಧ್ಯತೆ ಹೆಚ್ಚು. ಮನೆಯವರೇ ಹೇಳಿ ಉಬ್ಬುಗಳನ್ನು ಹಾಕಿಸಿದ್ದಾರೆ
ಬೀಬಿಜಾನ್‌ ಬುರಡಿ, ಸ್ಥಳೀಯ ನಿವಾಸಿ

ಬಣ್ಣ– ರೇಡಿಯಂ ಹಚ್ಚಬೇಕು
ಈ ರಸ್ತೆಯಲ್ಲಿ ಉಬ್ಬುಗಳಿವೆ ಎಂಬುದು ರಾತ್ರಿಯ ವೇಳೆ ಗೊತ್ತಾಗುವುದೇ ಇಲ್ಲ. ಬಣ್ಣ ಅಥವಾ ರೇಡಿಯಂ ಹಚ್ಚಿದರೆ ಅನುಕೂಲವಾಗುತ್ತದೆ. ಅಪಘಾತಗಳು ಆಗುವುದೂ ತಪ್ಪುತ್ತದೆ
ಕಲ್ಲಪ್ಪ ಹುಡೇದ, ವಾಹನ ಸವಾರ

ಇನ್ನೂ ಹೆಚ್ಚು ಉಬ್ಬುಗಳಾಗಬೇಕು
ಹೊಸೂರು–ಉಣಕಲ್‌ ರಸ್ತೆಯ ಈ ಭಾಗ ಕೊಳಚೆ ಪ್ರದೇಶ. ಸಣ್ಣ ಮಕ್ಕಳು ಆಡುವಾಗ ರಸ್ತೆಗೆ ಓಡಿಬಿಡುತ್ತಾರೆ. ಇಲ್ಲಿ ಇನ್ನೂ ಹೆಚ್ಚು ರಸ್ತೆ ಉಬ್ಬುಗಳನ್ನು ನಿರ್ಮಿಸಿದರೆ ಉತ್ತಮ
ಬಸವರಾಜ ದೊಡ್ಡಮನಿ, ಸ್ಥಳೀಯ ನಿವಾಸಿ

ಸಂಚಾರ ದಟ್ಟಣೆ ಹೆಚ್ಚು
ರಸ್ತೆ ಉಬ್ಬುಗಳು ಇರುವುದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತವೆ. ಆದರೆ, ಇಲ್ಲಿ ಹೆಚ್ಚು ವಾಹನಗಳು ಸಂಚಾರ ಮಾಡುವುದರಿಂದ ಸಂಚಾರದಟ್ಟಣೆ ಹೆಚ್ಚುತ್ತದೆ, ಸಮಯ ವ್ಯರ್ಥವಾಗುತ್ತದೆ
ಶ್ರೀಧರ್‌ ಪೌಲೂರಿ, ವಾಹನ ಸವಾರ

ಬೆನ್ನು ನೋವು ಹೆಚ್ಚಾಗಿದೆ
ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತೇನೆ. ರಸ್ತೆ ಉಬ್ಬುಗಳು ಹೆಚ್ಚಾಗಿರುವುದರಿಂದ ಬೆನ್ನು ನೋವು ಬರುತ್ತಿದೆ. ಅಲ್ಲದೆ, ವೇಗವಾಗಿ ಬಂದರೆ ಸ್ಕಿಡ್‌ ಆಗಿ ಬೀಳುವ ಅಪಾಯವೂ ಇದೆ
ಜಗನ್ನಾಥ ಅಳವಂಡಿ, ವಾಹನ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT