ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕರ ತಂಡದಲ್ಲಿ ಬಾಲಕಿಯರಿಗೂ ಅವಕಾಶ!

Last Updated 17 ಜುಲೈ 2017, 6:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಬೇಕು, ಆಡಲು ಹೆಚ್ಚು ಪಂದ್ಯಗಳು ಸಿಗಬೇಕು ಎನ್ನುವ ಆಸೆ ಹೊಂದಿರುವ ಬಾಲಕಿಯರಿಗೆ ಈಗ ಉತ್ತಮ ಅವಕಾಶ ಲಭಿಸಿದೆ.
ಮಹಿಳಾ ಕ್ರಿಕೆಟ್‌ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯ ಹೊಸ ಪ್ರಯೋಗಕ್ಕೆ ಮುಂದಾಗಿದೆ. 14 ಮತ್ತು 16 ವರ್ಷದ ಒಳಗಿನವರ ಅಂತರಶಾಲಾ ಬಾಲಕರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಬಾಲಕಿಯರಿಗೂ ಅವಕಾಶ ನೀಡಿದೆ.

ಧಾರವಾಡ ವಲಯದಲ್ಲಿ ಮಹಿಳಾ ಕ್ರಿಕೆಟ್‌ ಅಷ್ಟೇನೂ ಪ್ರಗತಿ ಹೊಂದಿಲ್ಲ. ಆದರೆ ಕ್ರಿಕೆಟ್‌ ಆಡಬೇಕು ಎನ್ನುವ ಆಸೆ ಹೊಂದಿರುವವರು ಸಾಕಷ್ಟು ಜನರಿದ್ದಾರೆ. ಅವರಿಗೆ ಅವಕಾಶ ನೀಡಬೇಕು, ರಾಜ್ಯ ತಂಡದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳ ಸಂಖ್ಯೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಕೆಎಸ್‌ಸಿಎ ಈ ನಿರ್ಧಾರ ಕೈಗೊಂಡಿದೆ.

‘ಬಾಲಕರು, ಪುರುಷರು ಕ್ರಿಕೆಟ್‌ ಅಭ್ಯಾಸ ಮಾಡುವಾಗ ಬಾಲಕಿಯರೂ ಬಂದು ಅಭ್ಯಾಸ ಮಾಡುತ್ತಾರೆ. ಕೆಲ ಬಾಲಕಿಯರಷ್ಟೇ ಆಸಕ್ತಿ ಹೊಂದಿರುವ ಕಾರಣ ಹೆಚ್ಚು ಅವಕಾಶಗಳೇ ಸಿಗುವುದಿಲ್ಲ. ಆದ್ದರಿಂದ ಬಾಲಕರ ತಂಡದಲ್ಲಿ ಆಡಲು ಬಾಲಕಿಯರಿಗೂ ಅವಕಾಶ ನೀಡಿದ್ದೇವೆ’ ಎಂದು ಕೆಎಸ್‌ಸಿಎ ಶಾಲಾ ಟೂರ್ನಿ ಸಮಿತಿಯ ಮುಖ್ಯಸ್ಥ ವಸಂತ ಮುರ್ಡೇಶ್ವರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇತ್ತೀಚೆಗೆ ನಡೆದ ಕೆಎಸ್‌ಸಿಎ ಮಾಸಿಕ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆದಿತ್ತು. ಶಾಲಾ ಸಮಿತಿ ಮಾಡಿದ ಶಿಫಾರಸನ್ನು ವಲಯ ಸಮಿತಿ ಒಪ್ಪಿಕೊಂಡಿದೆ. ಬಾಲಕಿಯರು ಆಸಕ್ತಿ ವಹಿಸಿದರೆ ಮುಂದೆ ಅವರಿಗಾಗಿಯೇ ಪ್ರತ್ಯೇಕ ಟೂರ್ನಿ ಆಯೋಜಿಸಬಹುದು’ ಎಂದು ಕೆಎಸ್‌ಸಿಎ ವಲಯ ನಿಮಂತ್ರಕ ಬಾಬಾ ಭೂಸದ ಹೇಳಿದರು.

ಸಂಖ್ಯೆಯ ಮಿತಿಯಿಲ್ಲ: ವಯೋಮಿತಿಯೊಳಗಿನ ಟೂರ್ನಿಯಲ್ಲಿ ಆಡುವ ಶಾಲಾ ಬಾಲಕರ ತಂಡದ ಜೊತೆ ಅದೇ ಶಾಲೆಯ ಬಾಲಕಿಯರಷ್ಟೇ ಪಾಲ್ಗೊಳ್ಳಬೇಕು. ಒಂದು ತಂಡದಲ್ಲಿ ಗರಿಷ್ಠ ಎಷ್ಟು ಬಾಲಕಿಯರು ಇರಬಹುದು ಎನ್ನುವುದು ಸಭೆಯಲ್ಲಿ ನಿರ್ಧಾರವಾಗಿಲ್ಲ. ಧಾರವಾಡ ವಲಯದ ಗದಗ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಡೆಯುವ ಶಾಲಾ ಟೂರ್ನಿಗಳ ಬಾಲಕರ ತಂಡಗಳಲ್ಲಿ ಬಾಲಕಿಯರು ಪಾಲ್ಗೊಳ್ಳಬಹುದು.

‘ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಭರವಸೆ’
‘ಕ್ರಿಕೆಟ್ ಆಡಲು ಆಸಕ್ತಿ ಹೊಂದಿರುವ ಅನೇಕ ಬಾಲಕಿಯರು ಈ ಭಾಗದಲ್ಲಿದ್ದಾರೆ. ಅವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಈಗ ಬಾಲಕರ ತಂಡದಲ್ಲಿ ಆಡಲು ಅವಕಾಶ ಕೊಟ್ಟಿದ್ದು ಉತ್ತಮ ಬೆಳವಣಿಗೆ.  ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡುವ ಆಸೆ ಹೊಂದಿರುವ ಆಟಗಾರ್ತಿಯರಿಗೆ ಇದು ಉತ್ತಮ ಅವಕಾಶ’ ಎಂದು ಮಹಿಳೆಯರ  ಚಾಲೆಂಜರ್‌್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಇಂಡಿಯಾ ಗ್ರೀನ್ ತಂಡದ ಪರ ಆಡಿದ್ದ ಹುಬ್ಬಳ್ಳಿಯ ಪುಷ್ಪಾ ಕಿರೇಸೂರ ಹೇಳಿದರು.

ಈಗ ರೈಲ್ವೈ ಉದ್ಯೋಗಿಯಾಗಿರುವ ಪುಷ್ಪಾ 2011ರಲ್ಲಿ ಕೊಚ್ಚಿಯಲ್ಲಿ ನಡೆದ ದಕ್ಷಿಣ ವಲಯದ 16 ವರ್ಷದ ಒಳಗಿನವರ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 19 ವರ್ಷದ ಒಳಗಿನವರ ತಂಡದಲ್ಲಿಯೂ ಆಡಿದ್ದರು.

‘ತರಬೇತಿ ಬೇಕು’
ಬಾಲಕರಷ್ಟು ಬಾಲಕಿಯರು ದೈಹಿಕವಾಗಿ ಬಲಿಷ್ಠವಾಗಿ­ರುವುದಿಲ್ಲ. ಆದ್ದರಿಂದ ಮೊದಲು ಇವರ ನಡುವೆ ಸೌಹಾರ್ದ ಪಂದ್ಯಗಳನ್ನು ಆಡಿಸಬೇಕು. ಫಿಟ್‌ನೆಸ್‌ ಕುರಿತು ತರಬೇತಿ ನೀಡಬೇಕು. ಆಗ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಬಾಲಕಿಯರಿಗೂ ಧೈರ್ಯ ಬರುತ್ತದೆ. ಈ ರೀತಿಯ ಪ್ರಯೋಗ ಮಾಡಿದರೆ ಮಹಿಳಾ ಕ್ರಿಕೆಟ್‌ ಯಶಸ್ಸು ಕಾಣುತ್ತದೆ.
ವಿಲಾಸ ಬೇಂದ್ರೆ
ಅಧ್ಯಕ್ಷ, ವಿಲಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ

* * 

ಕ್ರಿಕೆಟ್‌ ಆಡಲು ತುಂಬಾ ಇಷ್ಟ. ಆದರೆ ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. ಶಾಲಾ ಟೂರ್ನಿಯಲ್ಲಿ ಅವಕಾಶ ಲಭಿಸಿದ್ದರಿಂದ ಖುಷಿಯಾಗಿದೆ
ಖುಷಿ ಬಾಂಡೇಕರ
ವಿದ್ಯಾರ್ಥಿನಿ, ಸೇಂಟ್‌ ಮೈಕೆಲ್‌ ಶಾಲೆ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT