ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಸಿಟಿ: ಕಲಾಗ್ಯಾಲರಿಗೆ ಮನ್ನಣೆ ಸಿಗಲಿ

Last Updated 17 ಜುಲೈ 2017, 6:31 IST
ಅಕ್ಷರ ಗಾತ್ರ

ಬೆಳಗಾವಿ: ಕಲಾಗ್ಯಾಲರಿ ಇಲ್ಲದಿರುವ ನಗರವೆಂದೂ ನಗರವಲ್ಲ, ಊರೂ ಅಲ್ಲ ಎಂದು ಹಿರಿಯ ಕಲಾವಿದ ಚಂದ್ರಕಾಂತ ಕುಸನೂರ ಹೇಳಿದರು.ಇಲ್ಲಿನ ಗೋವಾವೇಸ್‌ ಸಮೀಪದ ಮಹಾವೀರ ಭವನದ ಜೈನ ಯುವಕ ಮಂಡಳ ಕಲಾ ಗ್ಯಾಲರಿಯಲ್ಲಿ ಕಲಾವಿದ ದಂಪತಿ ದಿಲೀಪಕುಮಾರ ಕಾಳೆ ಹಾಗೂ ಮಾಧುರಿ ಪಿ. ದೊಡ್ಡಮನಿ ಅವರು ಭಾನುವಾರದಿಂದ ಆಯೋಜಿಸಿರುವ ‘ರೇಡಿಯಂಟ್‌ ಮೆಟಾಫರ್‌’ ಚಿತ್ರಕಲಾ ಕೃತಿಗಳ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಕನಿಷ್ಠ ಮೂರಾದರೂ ಗ್ಯಾಲರಿಗಳಿರಬೇಕಾಗಿತ್ತು. 35 ವರ್ಷದಿಂದಲೂ ಈ ಕುರಿತು ಆಗ್ರಹ ಪಡಿಸುತ್ತಲೇ ಬಂದಿದ್ದೇವೆ. ಆದರೆ, ಈವರೆಗೂ ಈಡೇರಿಲ್ಲ. ಈಗ ಜಾರಿ ಯಾಗಿರುವ ಸ್ಮಾರ್ಟ್‌ ಸಿಟಿ ಯೋಜನೆ ಯಲ್ಲಾದೂ ಈ ಕೆಲಸವಾಗಬೇಕು. ಸರ್ಕಾರದಿಂದಲೇ ಗ್ಯಾಲರಿ ನಿರ್ಮಿಸುವು ದರಿಂದ ಕಲಾವಿದರ ಪರದಾಟ ತಪ್ಪುತ್ತದೆ. ಕಲಾಕೃತಿಗಳನ್ನು ಪ್ರದರ್ಶಿಸುವುದಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ತಿಳಿಸಿದರು.

ಲಯ ಕಂಡುಕೊಳ್ಳಬೇಕು:  ‘ಸಾಹಿತಿಗಳು, ಕವಿಗಳು, ಚಿತ್ರಕಲಾವಿದರು, ಸಂಗೀತಗಾರರು ಇದ್ದರೆ ಮಾತ್ರ ನಗರ ಸುಂದರವಾಗಿರುತ್ತದೆ. ಶ್ರೀಮಂತರು ಇರುವುದು ಮುಖ್ಯವಲ್ಲ; ಸಾಂಸ್ಕೃತಿಕ ಶ್ರೀಮಂತಿಕೆ ಇರುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

‘ಹಾಡುಗಾರರಂತೆಯೇ ಚಿತ್ರಕಲಾವಿದರಿಗೂ ಲಯ ಇರಬೇಕು. ಲಯ ಸಿಕ್ಕಿತೆಂದರೆ ಬಣ್ಣಗಳೊಂದಿಗಿನ ಆಟ ಚೆನ್ನಾಗಿರುತ್ತದೆ. ಪ್ರತಿ ಕಲಾವಿದನೂ ತನ್ನದೇ ಆದ ಲಯ ಕಂಡುಕೊಳ್ಳಬೇಕು. ನೋಡಿದ ಚಿತ್ರಗಳನ್ನೆಲ್ಲಾ ಬಿಡಿಸದರೆ ಅದು ಚಿತ್ರವಾಗುವುದಿಲ್ಲ; ವಿನ್ಯಾಸವಷ್ಟೇ ಆಗುತ್ತದೆ. ಪ್ರತಿ ಚಿತ್ರದಲ್ಲಿಯೂ ಸೃಜಲಶೀಲತೆ, ಸ್ವಂತಿಕೆ ಇರಬೇಕು. ಬಹಳಷ್ಟು ಕಲಾವಿದರು ಹೊಸ ಪ್ರಯೋಗ ಮಾಡುವುದಕ್ಕೆ ಹೆದರುತ್ತಾರೆ. ಯಾರು ಏನೆಂದುಕೊಳ್ಳುತ್ತಾರೋ ಎಂದು ಭಯಪಡುತ್ತಾರೆ. ಈ ಭಾವನೆಯನ್ನು ಬಿಟ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ‘ಕಲಾಕೃತಿಗಳನ್ನು ನೋಡಿದಾಕ್ಷಣಕ್ಕೆ ಅದನ್ನು ರಚಿಸಿದ ಕಲಾವಿದರ ಮನಸ್ಥಿತಿಯನ್ನು ಅರಿಯುವುದಕ್ಕೆ ನಮ್ಮಂಥ ಸಾಮಾನ್ಯರಿಂದ ಸಾಧ್ಯವಾಗುವುದಿಲ್ಲ. 102 ಪ್ರದರ್ಶನವನ್ನು ನೀಡಿರುವ ದಿಲೀಪಕುಮಾರ ಕಾಳೆ ಸಾಮಾನ್ಯ ಕಲಾವಿದರಲ್ಲ. ಉತ್ತಮ ಕಲಾಕೃತಿಗಳನ್ನು ರಚಿಸುವ ಕಲೆ ಅವರಿಗೆ ಸಿದ್ಧಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಚಿತ್ರಕಲಾವಿದರು, ಜನಪದ, ಸಂಗೀತ, ನೃತ್ಯ ಕಲಾವಿದರು ಇಲಾಖೆ ಯಿಂದ ಹಲವು ಯೋಜನೆಗಳ ಸೌಲಭ್ಯ ಪಡೆದಿದ್ದಾರೆ. ಸಂಸ್ಕೃತಿ ಬೆಳೆಸುವ ಕಾರ್ಯಕ್ಕೆ ಇಲಾಖೆಯು ಸದಾ ಬೆನ್ನೆಲುಬಾಗಿರುತ್ತದೆ’ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ರಾಜು ದೇವ ಋಷಿ ಮಾತನಾಡಿ, ‘ಜಿಲ್ಲೆಯಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ಕೆಲಸವನ್ನು ಅಕಾಡೆಮಿಯಿಂದ ಮಾಡಿದ್ದೇವೆ. ಈ ಕಾರ್ಯಕ್ಕೆ ಕಲಾವಿದ ದಿಲೀಪಕುಮಾರ ಕಾಳೆ ಹಾಗೂ ಇತರರು ಸಂಪೂರ್ಣ ಸಹಕಾರ ನೀಡಿದ್ದಾರೆ. ವಿವಿಧೆಡೆ ನಡೆದ ಕಲಾ ಶಿಬಿರದಲ್ಲಿ ಪಾಲ್ಗೊಂಡ ಕೀರ್ತಿ ಕಾಳೆ ಅವರದು’ ಎಂದು ತಿಳಿಸಿದರು.

ರೇಡಿಯಾಲಜಿಸ್ಟ್‌ ಡಾ.ರಮೇಶ್‌ ಪಟ್ಟಣಶೆಟ್ಟಿ, ಕಲಾವಿದರಾದ ದಿಲೀಪ ಕುಮಾರ ಕಾಳೆ ಹಾಗೂ ಮಾಧುರಿ ದೊಡ್ಡಮನಿ ಇದ್ದರು. ಪ್ರದರ್ಶನವು 20ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT