ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಿಂದ ಬೆಂಗಳೂರಿಗೆ ಕಾರ್‌ ರ‍್ಯಾಲಿ

ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರದ ನಿರ್ಲಕ್ಷ್ಯ
Last Updated 17 ಜುಲೈ 2017, 6:32 IST
ಅಕ್ಷರ ಗಾತ್ರ

ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕೋಲಾರದಿಂದ ಬೆಂಗಳೂರಿನವರೆಗೆ ಭಾನುವಾರ ಕಾರು ರ‍್ಯಾಲಿ ನಡೆಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನೀಲೇಶ್‌ಗೌಡ ಮಾತನಾಡಿ, ‘ಬಯಲುಸೀಮೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗದೆ ರೈತರು ಕೃಷಿ ಹಾಗೂ ತೋಟಗಾರಿಕೆಯಿಂದ ದೂರು ಉಳಿದಿದ್ದಾರೆ. ಹೈನೋದ್ಯಮಕ್ಕೂ ಪೆಟ್ಟು ಬಿದ್ದಿದೆ’ ಎಂದು ಆತಂಕ ವ್ಯಕ್ತಪಡಿಸಿದರು. 

‘ಕಾಲ ಕಾಲಕ್ಕೆ ಉತ್ತಮ ಮಳೆಯಾಗಿದ್ದರೆ ರೈತರು ಸರ್ಕಾರದಿಂದ ಯಾವುದೇ ಸವಲತ್ತು ನಿರೀಕ್ಷಿಸುತ್ತಿರಲಿಲ್ಲ. ಸತತ ಬರದಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಹೇಳಿದರು.

ಸರ್ಕಾರಗಳೇ ನೇರ ಹೊಣೆ: ‘ಅಂತರ್ಜಲಮಟ್ಟ ಕುಸಿದಿದೆ. ಕೊಳವೆಬಾವಿ ಕೊರೆಸಲು ರೈತರಿಗೆ ಧೈರ್ಯ ಸಾಲುತ್ತಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ದೊರೆಯದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಅನಾಹುತಗಳಿಗೆಲ್ಲಾ ಸರ್ಕಾರಗಳೇ ನೇರ ಹೊಣೆ’ ಎಂದು ಆರೋಪಿಸಿದರು.

‘ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಈ ಹಿಂದೆ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಉನ್ನತ ಸ್ಥಾನದಲ್ಲಿದ್ದರು. ಅವರಿಗೆ ರೈತರ ಸಂಕಷ್ಟದ ಅರಿವು ಇದಿದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗುತ್ತಿದ್ದರು’ ಎಂದು ಹೇಳಿದರು.

‘ಸಂಸದರಿಗೆ ರೈತರ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ರೈತರ ಬಗ್ಗೆ  ಕಾಳಜಿಯಿಲ್ಲ’ ಎಂದು ಆರೋಪಿಸಿದರು.

‘ಎತ್ತಿನಹೊಳೆ, ಕೆಸಿ ವ್ಯಾಲಿ ಯೋಜನೆ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಜಿಲ್ಲಾ ಸಚಿವರು ಬರೀ ಭರವಸೆಯಲ್ಲಿಯೇ ಕಾಲ ತಳ್ಳುತ್ತಿದ್ದಾರೆ. ಯೋಜನೆ ಪ್ರಗತಿಯ ಬಗ್ಗೆ ರೈತರಿಗೆ ಮಾಹಿತಿಯೇ ಇಲ್ಲ’ ಎಂದರು.

‘ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ದಲ್ಲಿ ಸರ್ಕಾರದ ಪಿಂಡತರ್ಪಣಕ್ಕೆ ಪೂಜೆ ಸಲ್ಲಿಸಿ ಧರಣಿ ನಡೆಸಲಾಗುವದು. ನಂತರ ಕೆಂಗೇರಿ ಮೋರಿಯಲ್ಲಿ ಪಿಂಡ ವಿಸರ್ಜನೆ ಮಾಡಲಾಗುವುದು’ ಎಂದು ಅವರು ಹೇಳಿದರು.

ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ನಟರಾಜ್, ಉಪಾಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಗುರುಪ್ರಸಾದ್, ಸದಸ್ಯರಾದ ಡಾ.ನಾಗರಾಜ್, ಸುರೇಶ್, ವೆಂಕಟೇಶ್, ಮಂಜುನಾಥ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

**

ನಿದ್ದೆ ಹೋಗುತ್ತಿರುವ ಸರ್ಕಾರಗಳನ್ನು ಎಚ್ಚರಿಸಲು ಶಾಂತಿಯುತ ಹೋರಾಟಗಳಿಂದ ಸಾಧ್ಯವಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಬೇಕು.
–ನೀಲೇಶ್ ಗೌಡ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT