ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆ ಭಾಗ್ಯ ಕಾಣದ ಕಲಾಮಂದಿರ

ಎರಡು ವರ್ಷ ಕಳೆದರೂ ಮುಗಿಯದ ಕಾಮಗಾರಿ, ಒಳಾಂಗಣ ಕಾಮಗಾರಿಗೆ ಅನುದಾನ ಕೊರತೆ
Last Updated 17 ಜುಲೈ 2017, 6:37 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಭಾಷೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಾಣ ವಾದ ಕಲಾಮಂದಿರಕ್ಕೆ ಹಿಡಿರುವ ಗ್ರಹಣ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ.

ನಗರದ ಜಿಲ್ಲಾಡಳಿತ ಭವನದ ಆವರಣಕ್ಕೆ ಅಂಟಿಕೊಂಡಂತೆ ವಿಶಾಲ ಪ್ರದೇಶದಲ್ಲಿ ಕಲಾಮಂದಿರದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಆದರೆ, ಅನುದಾನ ಬಿಡುಗಡೆ ವಿಳಂಬದ ಕಾರಣ ಅದರ ಒಳಾಂಗಣ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಇದರಿಂದ ಭಾಷೆ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಗಳಿಗೆ ಬಳಕೆಯಾಗಬೇಕಿರುವ ಭವ್ಯ ಕಟ್ಟಡ ವ್ಯರ್ಥವಾಗಿ ಉಳಿಯುವಂತಾಗಿದೆ. ನಿರ್ವಹಣೆಯಿಲ್ಲದೆ ಸುತ್ತಲೂ ಗಿಡಗಂಟಿಗಳು ಬೆಳೆದುಕೊಳ್ಳುತ್ತಿವೆ.

2010ರ ಜುಲೈನಲ್ಲಿ ಕಟ್ಟಡಕ್ಕೆ ಅನುಮತಿ ದೊರಕಿತ್ತು. ನಿವೇಶನ ಹಸ್ತಾಂತರಕ್ಕೇ ಎರಡೂವರೆ ವರ್ಷ ವಿಳಂಬವಾಗಿದ್ದರಿಂದ ಕಾಮಗಾರಿ ಆರಂಭವಾಗಿದ್ದು 2012ರ ಡಿಸೆಂಬರ್‌ನಲ್ಲಿ. 2015ರಲ್ಲಿ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡಿದೆ. ಇಲ್ಲಿಯವರೆಗೂ ಅದು ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.

ವಿಶಾಲ ಸಭಾಂಗಣ: ಕಲಾಮಂದಿರದಲ್ಲಿ ರಂಗ ಚಟುವಟಿಕೆಗಳು ನಡೆಯುವಷ್ಟು ವಿಶಾಲ ವೇದಿಕೆ ಇದೆ. ಎರಡು ಮಹಡಿಗಳಿದ್ದು, ಕೆಳಭಾಗದಲ್ಲಿ 375 ಮತ್ತು ಮೇಲ್ಭಾಗದಲ್ಲಿ 125 ಜನರು ಕೂರಬಹುದು. 5 ಕೊಠಡಿಗಳಿದ್ದು, ಸದ್ಯ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಇಲ್ಲಿಗೆ ಸ್ಥಳಾಂತರವಾಗಬೇಕಿದೆ. ಸಭಾ ಕೊಠಡಿ, ಗ್ರಂಥಾಲಯಕ್ಕಾಗಿ ಇಲ್ಲಿ ಜಾಗ ಕಲ್ಪಿಸಲಾಗಿದೆ.

ಆಗಿರುವುದು ಕಟ್ಟಡ ಮಾತ್ರ: ₹4 ಕೋಟಿ ವೆಚ್ಚದಲ್ಲಿ ಆರಂಭದಲ್ಲಿ ಯೋಜನೆ ಕೈಗೆತ್ತಿಕೊಂಡಾಗ, ಅದರಲ್ಲಿ ಕಟ್ಟಡ ನಿರ್ಮಾಣದ ಜತೆಗೆ ಒಳಾಂಗಣ ವಿನ್ಯಾಸದ ವೆಚ್ಚವೂ ಒಳಗೊಂಡಿತ್ತು.

ಆದರೆ, ಕೇವಲ ಕಟ್ಟಡ ನಿರ್ಮಾಣ ಕ್ಕಾಗಿಯೇ ಅನುದಾನ ವ್ಯಯ ವಾಗಿದೆ. ಯೋಜನೆಯ ಮೊತ್ತಕ್ಕಿಂತಲೂ ಹೆಚ್ಚು ವೆಚ್ಚವಾಗಿದೆ. ಇನ್ನೂ ₹3.50 ಲಕ್ಷ ಹೆಚ್ಚುವರಿ ನೀಡಬೇಕು ಎಂದು ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದಾರೆ. ಇಲಾಖೆ ₹3.10 ಲಕ್ಷ ನೀಡಲು ಮುಂದಾಗಿದೆ.

ಎರಡು ವರ್ಷವಾದರೂ ರಂಗಮಂದಿರಕ್ಕೆ ಅಗತ್ಯವಾದ ಅಕಾಸ್ಟಿಕ್, ಪಾಲ್ ಸೀಲಿಂಗ್, ಸ್ಟೇಜ್ ಲೈಟ್, ಪ್ರೊಜೆಕ್ಟರ್ ಸಿಸ್ಟಂ, ಆಸನಗಳ ಅಳವಡಿಕೆ, ಹೊರಭಾಗದಲ್ಲಿ ಪಾರ್ಕಿಂಗ್‌, ಕಟ್ಟಡದ ಸುತ್ತ ಕಾಂಪೌಂಡ್‌ ನಿರ್ಮಾಣ ಮುಂತಾದ ಕೆಲಸಗಳಿಗೆ ಹೆಚ್ಚುವರಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಆದರೆ, ಅಂದಾಜು ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಅನುಮೋದನೆ ಸಿಕ್ಕಿದೆ. 

ಅಧಿಕಾರಿಯೇ ಇಲ್ಲ: ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿಯಾಗಿ ಎರಡು ವರ್ಷವೇ ಕಳೆದಿದೆ. ಇದುವರೆಗೂ ಬೇರೆ ಅಧಿಕಾರಿ ನೇಮಕವಾಗಿಲ್ಲ. ಮುಖ್ಯ ಗ್ರಂಥಾಲಯ ಅಧಿಕಾರಿಯಾಗಿರುವ ಡಿ. ನಾಗವೇಣಿ ಅವರೇ ಇಲಾಖೆಯ ಸಹಾಯಕ ನಿರ್ದೇಶಕರ ಕೆಲಸವನ್ನು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ.

ಅಕ್ರಮ ಚಟುವಟಿಕೆಗಳ ಅಡ್ಡೆ: ಬಳಕೆ ಯಾಗದ ಕಲಾಮಂದಿರಕ್ಕೆ ಆವರಣ ಗೋಡೆ ಇಲ್ಲದಿರುವುದರಿಂದ ಸರಿಯಾದ ರಕ್ಷಣೆ ಇಲ್ಲದಂತಾಗಿದೆ. ಜಿಲ್ಲಾಡಳಿತ ಭವನದ ಕಾವಲುಗಾರರು ಇಲ್ಲಿ ಕಾವಲು ಕಾಯುವುದಿಲ್ಲ. ಹೀಗಾಗಿ ಕೆಲವರು ಅಕ್ರಮ ಚಟುವಟಿಕೆಗಳಿಗೆ ಕಲಾ ಮಂದಿರದ ಕಟ್ಟಡ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಹೆಸರುಗಳ ಬೇಡಿಕೆ: ಕಲಾಮಂದಿರಕ್ಕೆ ಯಾರ ಹೆಸರು ಇಡಬೇಕು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಜಿಲ್ಲೆಯ ವಿವಿಧ ಸಮುದಾಯಗಳು ತಮ್ಮ ನಾಯಕರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಭಗೀರಥ ಮಹರ್ಷಿ, ವಾಲ್ಮೀಕಿ, ಮದಕರಿನಾಯಕ, ಸರ್ವಜ್ಞ, ಟಿಪ್ಪು ಸುಲ್ತಾನ್‌, ನಟ ರಾಜ್‌ಕುಮಾರ್ ಮುಂತಾದ ಹೆಸರುಗಳು ಬೇಡಿಕೆಯಲ್ಲಿವೆ.

**

ಕಲಾಮಂದಿರದ ಒಳ ಭಾಗದಲ್ಲಿ ಅನೇಕ ಕೆಲಸಗಳು ಬಾಕಿ ಇವೆ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಡುಗಡೆಯಾದ ತಕ್ಷಣ ಪಿಡಬ್ಲ್ಯೂಡಿಯಿಂದ ಕಾಮಗಾರಿ.
–ಡಿ. ನಾಗವೇಣಿ,
ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT