ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಕುಳಿರ್ಗಾಳಿಗೆ ಮಿಂದೆದ್ದ ಭಕ್ತರು

ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿ ವರ್ಧಂತಿ ಮಹೋತ್ಸವದ ಸಂಭ್ರಮ
Last Updated 17 ಜುಲೈ 2017, 7:05 IST
ಅಕ್ಷರ ಗಾತ್ರ

ಮೈಸೂರು: ‘ನೋಡವಳಂದಾವಾ ಮೊಗ್ಗಿನ ಮಾಲೆ ಚಂದಾವಾ...’ ಎಂಬ ಜನಪದ ಹಾಡು ಭಾನುವಾರ ಚಾಮುಂಡಿಬೆಟ್ಟದಲ್ಲಿ ಕೇಳಿ ಬರುತ್ತಿತ್ತು.

ಮೆಲ್ಲಗೆ ತೀಡುತ್ತಿದ್ದ ಕುಳಿರ್ಗಾಳಿಗೆ ಮೈಯೊಡ್ಡಿದ್ದ ಸಾವಿರಾರು ಭಕ್ತರು ಚಾಮುಂಡೇಶ್ವರಿಯ ವರ್ಧಂತಿ ಉತ್ಸವ ಅಂಗವಾಗಿ ನಡೆದ ಚಿನ್ನದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಜಯಘೋಷ ಹಾಕಿದರು.

ಅರಮನೆ ವಾದ್ಯತಂಡದವರು ‘ಕಾಯೋ ಶ್ರೀಗೌರಿ’ ಹಾಡನ್ನು ಸಂಗೀತ ದಲ್ಲಿ ಅಭಿವ್ಯಕ್ತಿಸುತ್ತಿದ್ದರೆ, ಇನ್ನಿತರ ವಾದ್ಯ ತಂಡದವರು ‘ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೆ’ ಶ್ಲೋಕವನ್ನು ಭಜಿಸಿದರು.

ಇವೆಲ್ಲದರ ನಡುವೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉತ್ಸವಕ್ಕೆ ಚಾಲನೆ ನೀಡುವ ಮೂಲಕ ಸೇರಿದ್ದ ಜನರ ಜಯಘೋಷ ತಾರಕಕ್ಕೇರಿಸಿದರು.

ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿದ ಉತ್ಸವ ಮೂರ್ತಿಯ ಚಿನ್ನದ ಪಲ್ಲಕ್ಕಿ ಮೆರವಣಿಗೆ ದೇಗುಲದ ಒಂದು ಸುತ್ತು ಹಾಕಿತು. ಹೂ, ಹಣ್ಣು, ಜವನ ಎಸೆ ಯುವ ಮೂಲಕ ಭಕ್ತಿಭಾವ ಮೆರೆದರು.

ಇದಕ್ಕೂ ಮುನ್ನ ನಸುಕಿನಿಂದಲೇ ಚಾಮುಂಡಿಬೆಟ್ಟದ ಪಾದದಿಂದ ನೂರಾರು ಭಕ್ತಾದಿಗಳು ಮೆಟ್ಟಿಲು ಹತ್ತುವ ಮೂಲಕ ಗುಡಿಗೆ ಬಂದರು. ಹಲವು ಮಂದಿ ಪ್ರತಿ ಮೆಟ್ಟಿಲುಗಳಿಗೂ ಅರಿಸಿನ, ಕುಂಕುಮ ಹಚ್ಚುವ ಮೂಲಕ ಹರಕೆ ತೀರಿಸಿದರು. ಮತ್ತೆ ಕೆಲವರು ಅಲ್ಲಲ್ಲಿ ರಂಗೋಲಿ ಹಾಕುವ ಮೂಲಕ ತಮ್ಮ ಮನದಿಚ್ಛೆಯನ್ನು ನೆರವೇರಿಸಿ ಕೊಂಡರು. ಮೆಟ್ಟಿಲುಗಳು ಅರಿಸಿನ, ಕುಂಕುಮಗಳಿಂದ ತುಂಬಿ ಹೋಗಿದ್ದವು. ಆಗಾಗ್ಗೆ ಒಮ್ಮೊಮ್ಮೆ ಬಾನಂಗಲದಿಂದ ಜಾರಿ ಬೀಳುತ್ತಿದ್ದ ಮಳೆಹನಿಗಳು ಭಕ್ತರ ದಣಿವನ್ನು ಆರಿಸಿದವು.

ನಸುಕಿನ 5.30ಕ್ಕೆ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದ ಪುರೋಹಿತರ ತಂಡವು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿತು. ಮೊದಲಿಗೆ ಎಣ್ಣೆ, ಅರಿಸಿನ ಬಳಸಿ ಅಭಿಷೇಕ ಮಾಡಲಾಯಿತು. ನಂತರ, ಮಹಾನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶಾಲ್ಯನ್ನ ಅಭಿಷೇಕಗಳು ನಡೆದವು.

ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ ನಂತರ ಚಿನ್ನದ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು. ತರುವಾಯ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.

ರಾತ್ರಿ ದರ್ಬಾರ್ ಉತ್ಸವ: ರಾತ್ರಿ 8 ಗಂಟೆ ನಂತರ ದರ್ಬಾರ್ ಉತ್ಸವ ನಡೆಯಿತು. ರುದ್ರಾಕ್ಷಿ ಮಂಟಪದಲ್ಲಿ ಉತ್ಸವ ಮೂರ್ತಿಯನ್ನಿರಿಸಿ ಫಲಪೂಜೆ ನಡೆಸಲಾ ಯಿತು.  ಮಂಟಪೋತ್ಸವ ದೊಂದಿಗೆ ವರ್ಧಂತಿ ಉತ್ಸವಕ್ಕೆ ತೆರೆ ಬಿದ್ದಿತು.

ವಿಶೇಷ ಅಲಂಕಾರ: ವಿವಿಧ ಪುಷ್ಪಗಳಿಂದ ಗರ್ಭಗುಡಿ, ಸುಖನಾಸಿ, ನವರಂಗಗಳನ್ನು ಅಲಂಕರಿಸಲಾಗಿತ್ತು. ಎಲೆಯಲ್ಲಿ ಹೂಗಳ ಮಧ್ಯೆ ಗಿಣಿಗಳ ಆಕಾರದ ವಿನ್ಯಾಸವನ್ನು ಮಾಡಲಾಗಿತ್ತು. ನೋಡುಗರಿಗೆ ನಿಜವಾದ ಗಿಳಿಗಳು ಬಂದಿವೆಯೇನೋ ಎಂಬ ಭ್ರಮೆಯನ್ನು ಉಂಟು ಮಾಡುತ್ತಿತ್ತು.

**

ಮಳೆ, ಬೆಳೆ ಚೆನ್ನಾಗಿ ಆಗಲೆಂದು ಚಾಮುಂಡೇಶ್ವರಿ ತಾಯಿಗೆ ಪೂಜೆ ಮಾಡಲಾಗಿದೆ. ಇದು ಚಾಮುಂಡೇಶ್ವರಿ ತಾಯಿ ಹುಟ್ಟಿದ ದಿನ ಎಂದು ನಂಬಲಾಗಿದೆ.
-ಶಶಿಶೇಖರ ದೀಕ್ಷಿತ್, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT