ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು ಕೊಂದರೆ 14 ವರ್ಷ ಜೈಲು, ವ್ಯಕ್ತಿಯನ್ನು ಹತ್ಯೆ ಮಾಡಿದರೆ 2 ವರ್ಷ ಜೈಲು ಶಿಕ್ಷೆ!

Last Updated 17 ಜುಲೈ 2017, 7:16 IST
ಅಕ್ಷರ ಗಾತ್ರ

ನವದೆಹಲಿ: ಹರ್ಯಾಣದ ಉದ್ಯಮಿಯೊಬ್ಬರ ಪುತ್ರ ಬಿಎಂಡಬ್ಲ್ಯು ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಾರು ಚಾಲನೆ ಮಾಡಿದ್ದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಬಿಎಂಡಬ್ಲ್ಯು ಕಾರು ಚಲಾಯಿಸಿ ಬೈಕ್ ಸವಾರ ಸಾವಿಗೆ ಕಾರಣವಾದ 30ರ ಹರೆಯದ ಉತ್ಸವ್ ಭಾಸಿನ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಧೀಶರು, ಮೃತರ ಕುಟುಂಬಕ್ಕೆ ₹10 ಲಕ್ಷ ಮತ್ತು ಗಾಯಾಳು ವ್ಯಕ್ತಿಯ ಕುಟುಂಬಕ್ಕೆ  ₹2 ಲಕ್ಷ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.

ಅಪರಾಧಿಗೆ ಶಿಕ್ಷೆ ವಿಧಿಸಿದ ನಂತರ ಮಾತನಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಕುಮಾರ್, ನಮ್ಮ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹಸುವನ್ನು ಕೊಂದವರಿಗೆ 5, 7 ಅಥವಾ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ ಬೇಕಾಬಿಟ್ಟಿ ವಾಹನ ಓಡಿಸಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣರಾದವರಿಗೆ ಕೇವಲ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

2008 ಸೆಪ್ಟೆಂಬರ್ 11ರಂದು ರಾತ್ರಿ ಬಿಬಿಎ ವಿದ್ಯಾರ್ಥಿಯಾಗಿದ್ದ ಭಾಸಿನ್, ದಕ್ಷಿಣ ದೆಹಲಿಯಲ್ಲಿ ಬಿಎಂಡಬ್ಲ್ಯು ಕಾರನ್ನು ಬೇಕಾಬಿಟ್ಟಿ ಚಲಾಯಿಸಿದ ಬೈಕ್ ಸವಾರ ಅನುಜ್ ಚೌಹಾಣ್ ಸಾವಿಗೆ ಕಾರಣರಾಗಿದ್ದರು. ಈ ಅಪಘಾತದಲ್ಲಿ ಅನುಜ್ ಅವರ ಸ್ನೇಹಿತ ಮೃಗಾಂಕ್ ಶ್ರೀವಾತ್ಸವ ಗಾಯಗೊಂಡಿದ್ದರು.
ಅಪಘಾತ ಸಂಭವಿಸಿದ ನಂತರ ಭಾಸಿನ್ ಚಂಡೀಗಢಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ಐಎಸ್‍ಬಿಟಿ ಕಶ್ಮಿರ್ ಗೇಟ್‍ನಲ್ಲಿ ಆತನನ್ನು ಬಂಧಿಸಲಾಗಿತ್ತು.
ಮೇ ತಿಂಗಳಲ್ಲಿಯೇ ನ್ಯಾಯಾಲಯ ಈ ಪ್ರಕರಣದ ತೀರ್ಪು ವಿಧಿಸಿದ್ದರೂ, ಕಳೆದ ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಭಾಸಿನ್ ಅವರಿಗೆ ಶಾಸನಬದ್ಧ ಜಾಮೀನು ನೀಡಿರುವ ನ್ಯಾಯಾಲಯ ಹೈಕೋರ್ಟ್‍ನಲ್ಲಿ ಮನವಿ ಸಲ್ಲಿಸುವ ಅವಕಾಶವನ್ನೂ ಭಾಸಿನ್‍ಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT