ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಸರ್ಕಾರದ ಸಾಧನೆ ಸಹಿಸದ ಬಿಜೆಪಿ’

ಸುಳ್ಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಆರೋಪ
Last Updated 17 ಜುಲೈ 2017, 7:15 IST
ಅಕ್ಷರ ಗಾತ್ರ

ಸುಳ್ಯ: ರಾಜ್ಯ ಸರ್ಕಾರ ಜನಪರ ಯೋಜನೆಗಳಿಂದ ಗುರುತಿಸಿಕೊಂಡಿದ್ದು, ಇದನ್ನು ಸಹಿಸದ ಬಿಜೆಪಿ ಅಧಿಕಾರಕ್ಕಾಗಿ ಸಂಘರ್ಷದ ಮೂಲಕ ಚುನಾವಣೆಗೆ ಮುಂದಾಗಿದೆ. ಬಿಜೆಪಿ ಕನಸು ಎಂದೂ ನನಸಾಗಲು ಸಾಧ್ಯವಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗ ಉಸ್ತುವಾರಿ ಪಿ.ಸಿ. ವಿಷ್ಣುನಾಥ್ ಹೇಳಿದರು.

ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಸುಳ್ಯ ಕ್ಷೇತ್ರವನ್ನು ಈ ಬಾರಿ ಗೆಲ್ಲುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಈ ಜಿಲ್ಲೆ ಪ್ರಮುಖ ಕಾರಣವಾಗಿತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸಲಿದೆ’ ಎಂದು ವೀಕ್ಷಕ ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ಸಮಿತಿ ಪುನರ್ ರಚನೆ: ಚುನಾವಣೆಗಾಗಿಯೇ ಕಾಂಗ್ರೆಸ್‌ನಲ್ಲಿ ಬದಲಾವಣೆ ಮಾಡಲಾಗುತ್ತಿದ್ದು,  ಇದೇ 30ರೊಳಗೆ ಬೂತ್ ಕಮಿಟಿಗಳ ಪುನರ್ ರಚನೆ ಆಗಬೇಕು. ತಿಂಗಳಿಗೊಮ್ಮೆ ಬ್ಲಾಕ್ ಕಾಂಗ್ರೆಸ್ ಸಭೆ ನಡೆಸಬೇಕು. ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕೋಮು ಗಲಭೆಯಲ್ಲ: ರೈ

ಜಿಲ್ಲೆಯಲ್ಲಿ ನಡೆಯುತ್ತಿರುವುದು ಕೋಮು ಗಲಭೆಯಲ್ಲ. ಎರಡು  ಸಂಘಟನೆಗಳ ನಿಯೋಜಿತ ಕೃತ್ಯ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸರ್ವ ಕ್ರಮ ಕೈಗೊಂಡಿದ್ದು, ರಾಜ್ಯ ಸರ್ಕಾರದ ಕೆಲಸ ಕಾರ್ಯಗಳನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಈ ಮೂಲಕ ಅವರು ಅಧಿಕಾರದ ಅವಕಾಶಕ್ಕೆ ಮುಂದಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

‘ನನ್ನನ್ನು ಬೆಂಗಳೂರಿನಿಂದ ಎರಡು ಬಾರಿ ಮಾತ್ರ ಬಂಟ್ವಾಳಕ್ಕೆ ಬಂದು ಹೋಗುತ್ತಾರೆ ಎಂದು ಡಿ.ವಿ.ಸದಾನಂದ ಗೌಡರು ಟೀಕಿಸಿದ್ದಾರೆ. ಅವರು ಸುಳ್ಯದವರಾಗಿ ಸುಳ್ಯಕ್ಕೆ ಬರುವುದಕ್ಕಿಂತ ಮೂರು ಪಟ್ಟು ಹೆಚ್ಚು ನಾನು ಬಂದಿದ್ದೇನೆ. ಅಲ್ಲದೆ ಅವರ ಅಭಿವೃದ್ಧಿ ಕೆಲಸಗಳಿಂದ ಜಾಸ್ತಿ ನಾನು ಅಭಿವೃದ್ಧಿ ಮಾಡಿದ್ದೇನೆ. ಮತೀಯ ಶಕ್ತಿಗಳನ್ನು ಪ್ರಚೋದಿಸಿ ಅಧಿಕಾರ ಹಿಡಿಯುವುದು ಮಾತ್ರ ಬಿಜೆಪಿ ನಾಯಕರಿಗೆ ಗೊತ್ತಿದೆ. ಇದಕ್ಕೆ ಈ ಜಿಲ್ಲೆಯ ಜನ ಅವಕಾಶ ನೀಡುವುದಿಲ್ಲ’ ಎಂದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಪ್ರಸ್ತಾವನೆಗೈದರು. ಹಿರಿಯ ಕಾಂಗ್ರೆಸ್ಸಿಗರಾದ ಐ.ಕುಂಞಿಪಳ್ಳಿ, ಪಡ್ಡಂಬೈಲು ವೆಂಕಟ್ರಮಣ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿವ್ಯಪ್ರಭಾ ಚಿಲ್ತಡ್ಕ, ಕೆಪಿಸಿಸಿ ಮಾಜಿ ಸದಸ್ಯ ಡಾ. ರಘು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ ವೇದಿಕೆಯಲ್ಲಿದ್ದರು.

**

ಸಂಘ ಪರಿವಾರವೇ ಕಾರಣ: ಗುಂಡೂರಾವ್‌

ಕೆಪಿಸಿಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ‘ಶೋಭಾ ಕರಂದ್ಲಾಜೆ ಅವರ ಮಾತಿಗೆ ಲಂಗು ಲಗಾಮು ಇಲ್ಲ. ಅವರು ಬಾಯಿಗೆ ಬಂದ ಹಾಗೇ ಮಾತನಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು. ಈಗ ಕೆಟ್ಟ ಕಾರಣಗಳಿಗಾಗಿ ಜಿಲ್ಲೆ ಸುದ್ದಿ ಆಗುತ್ತಿದೆ. ಇದಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರವೇ ಕಾರಣ. ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ನೋಡುತ್ತಿದ್ದಾರೆ.

ಭಯ ಹುಟ್ಟಿಸುವವರು ಭಯೋತ್ಪಾದಕರು. ಯಡಿಯೂರಪ್ಪನವರು, ನಳಿನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಅವರು ಈ ಕೆಲಸ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT