ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀನಾಸಂ ಚಂದ್ರು’ ಹಲವು ಆಯಾಮದ ಪ್ರತಿಭೆ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಈತ ವೇದಿಕೆಯಲ್ಲಿ ಕುಣಿಯುತ್ತಿದ್ದರೆ ಎದುರಿಗೆ ಕುಳಿತವರ ಕಣ್ಣುಗಳಿಗೆ ಹಬ್ಬ. ಸ್ಟಂಟ್, ಜಿಮ್ನಾಸ್ಟಿಕ್, ಕಳರಿಪಯಟ್ಟು ಹಾಗೂ ಯೋಗ ಪ್ರದರ್ಶಿಸುತ್ತಿದ್ದರೆ ಮೈನವಿರೇಳುತ್ತದೆ. ನಟನೆ ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಕಿರುತೆರೆ­ಯಿಂದ ಹಿಡಿದು ಬೆಳ್ಳಿತೆರೆಯವರೆಗೆ ಸೈ ಎನಿಸಿಕೊಳ್ಳಲು ಮತ್ತೇನು ಬೇಕು ಎನ್ನುವಷ್ಟು ಪ್ರತಿಭೆ ಹೊಂದಿರುವವರು ನೀನಾಸಂ ಚಂದ್ರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ಚಂದ್ರು, ಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡಿರುವ ಯುವಕ. ಉತ್ತರ ಕರ್ನಾಟಕದ ಹುಡುಗನೊಬ್ಬ ಈ ಪರಿ ಬೆಳೆದು ಬಂದ ಹಾದಿ ಸೋಜಿಗವೆನಿಸುತ್ತದೆ. ವಿದ್ಯಾಭ್ಯಾಸದ ಜತೆಗೆ ನಾಟಕ, ನೃತ್ಯ ಹಾಗೂ ಯೋಗಾಭ್ಯಾಸವೂ ಅನೂಚಾನ ನಡೆಯಿತು. ಪರಿಚಯಸ್ಥರೊಬ್ಬರ ಸಲಹೆಯಂತೆ ಮೈಸೂರಿನ ರಂಗಾಯಣಕ್ಕೆ ಸೇರಿಕೊಂಡರು. ನಂತರದ ಪಯಣ ಹೆಗ್ಗೋಡಿನಲ್ಲಿರುವ ನೀನಾಸಂಗೆ.

ಹೊಸ ರೂಪ ಕೊಟ್ಟ ‘ನೀನಾಸಂ’:

ಶಾಲಾ–ಕಾಲೇಜು ಮತ್ತು ರಂಗಾಯಣದ ಮೂಲಕ ನಟನೆಯ ಬೆನ್ನು ಹತ್ತಿ ಬಂದ ಚಂದ್ರು ಪ್ರತಿಭೆಗೆ ನೀನಾಸಂ ಹೊಸರೂಪ ಸ್ವರೂಪ ಕೊಟ್ಟಿತು. ಅಭಿನಯವಷ್ಟೆ ಅಲ್ಲದೆ, ಬದುಕಿನ ಹಲವು ಪಾಠಗಳನ್ನು ಹೇಳಿಕೊಟ್ಟಿತು. ಕೃಷ್ಣಮೂರ್ತಿ ಕವತ್ತಾರ್ ಅವರ ಗರಡಿಯಲ್ಲಿ ಪಳಗಿ, ಅತ್ಯುತ್ತಮ ವಿದ್ಯಾರ್ಥಿ ಎಂಬ ಗೌರವಕ್ಕೂ ಅವರು ಪಾತ್ರವಾದರು. ನಂತರ ಚಂದ್ರು ಹೆಸರಿಗೆ ‘ನೀನಾಸಂ’ ಸೇರಿಕೊಂಡಿತು.

ಚಂದ್ರು ಅವರ ಪ್ರತಿಭೆಗೆ ಹಲವು ಆಯಾಮಗಳಿವೆ. ಕೇರಳದ ಸಾಹಸ ಕಲೆ ಕಳರಿಪಯಟ್ಟು ಅವುಗಳಲ್ಲಿ ಒಂದು. ‘ನೀನಾಸಂನಲ್ಲಿ ಎಲ್ಲ ಕಲೆಗಳನ್ನು ಹೇಳಿಕೊಡುವಂತೆ ಸ್ವಲ್ಪ ಮಟ್ಟಿಗೆ ಕಳರಿ ಪಯಟ್ಟು ಹೇಳಿ ಕೊಡುತ್ತಾರೆ. ಆಗ ನನ್ನ ಬಾಡಿ ಲಾಂಗ್ವೇಜ್ ಗಮನಿಸಿದ ಮಂಜುನಾಥ್ ಎಂಬ ಗುರುಗಳು, ‘ನೀನು ಕಳರಿಪಯಟ್ಟು ಕಲಿ. ಮುಂದೆ ಒಳ್ಳೆಯ ಭವಿಷ್ಯ ಸಿಗುತ್ತೆ’ ಎಂದು ಸಲಹೆ ನೀಡಿದ್ದಲ್ಲದೆ ಕೇರಳದ ಒಬ್ಬ ಗುರುವನ್ನೂ ಅವರೇ ಸೂಚಿಸಿದರು.

ತರಬೇತಿಗಾಗಿ ತಿಂಗಳಿಗೆ ₹20 ಸಾವಿರ ಕೊಡಬೇಕಿತ್ತು. ಆದರೆ, ನನ್ನ ಬಳಿ ದುಡ್ಡಿರಲಿಲ್ಲ. ಆಗ ಕಳರಿ ಗುರುಗಳು ತಮ್ಮ ಬಳಿ ಸಹಾಯಕನಾಗಿ ನನ್ನನ್ನು ಸೇರಿಸಿಕೊಂಡರು. ಅವರ ಬಳಿ ಸಹಾಯಕನಾಗಿದ್ದುಕೊಂಡೇ ಕಳರಿಪಯಟ್ಟು ಕಲಿತೆ’ ಎಂದು ಚಂದ್ರು ವಿವರಿಸುತ್ತಾರೆ.

ಕಿರುತೆರೆಯತ್ತ:

ಬೆಂಗಳೂರಿಗೆ ಬಂದ ಚಂದ್ರು ಅವಕಾಶಗಳಿಗಾಗಿ ನಿತ್ಯ ಅಲೆಯತೊಡಗಿದರು. ಭರವಸೆ ಸಿಕ್ಕಿತೇ ಹೊರತು, ಅವಕಾಶ ಸಿಗಲಿಲ್ಲ. ಪರಿಚಯಸ್ಥರ ಮೂಲಕ ‘ಗಾಳಿಪಟ’ ಎಂಬ ಧಾರವಾಹಿಯ ಚಿಕ್ಕ ಪಾತ್ರ ಸಿಕ್ಕಿದರೂ ಅಲ್ಪಕಾಲವಷ್ಟೇ. ಆಗ ನೃತ್ಯ ಕಲಿಕೆಯತ್ತ ಗಮನಹರಿಸಿದರು.

‘ನಟನೆಯಷ್ಟೆ ನೃತ್ಯವೂ ಅಚ್ಚುಮೆಚ್ಚಾಗಿದ್ದರಿಂದ ಡಾನ್ಸ್‌ನತ್ತ ಗಮನ ಹರಿಸಿದೆ. ಮುಖ್ಯವಾಗಿ ರಿಯಾಲಿಟಿ ಷೋಗಳತ್ತ ಗಮನ ನೀಡಿದೆ. ‘ನನ್ನ ಪುಟಾಣಿ ಪಂಟ್ರು’, ‘ಡಿ ಜೂನಿಯರ್ಸ್’, ‘ಸೈ’, ‘ಸ್ಟಾರ್ ಆಫ್ ಕರ್ನಾಟಕ’ ಸೇರಿದಂತೆ ಹಲವು ರಿಯಾಲಿಟಿ ಷೋಗಳಿಗೆ ಕೊರಿಯೊಗ್ರಫಿ ಮಾಡಿದೆ. ಆದರೆ ಕೆಲವರು ನನ್ನ ಪ್ರತಿಭೆಯನ್ನು ಬಳಸಿಕೊಂಡರೇ ವಿನಾ ನನ್ನ ಹೆಸರು ಪ್ರಸ್ತಾಪ ಮಾಡದೆ, ಕೆಲಸಕ್ಕೆ ಸರಿಯಾದ ವೇತನವನ್ನೂ ಕೊಡದೆ ನೋವು ಕೊಟ್ಟರು’ ಎಂದು ಮೆಲುಕು ಹಾಕುತ್ತಾರೆ ಚಂದ್ರು.

‘ಹಲವು ಪ್ರಾಜೆಕ್ಟ್‌ಗಳಿಗೆ ಮತ್ತು ಕಿರುಚಿತ್ರಗಳಿಗೆ ಡಬ್ಬಿಂಗ್ ಮಾಡಿದ್ದೇನೆ. ಕನಿಷ್ಠ ನೂರು ಆಡಿಷನ್‌ಗಳಿಗೆ ಹೋಗಿ ಬಂದಿದ್ದೇನೆ. ನಿಮ್ಮ ಪ್ರತಿಭೆ ಚೆನ್ನಾಗಿದೆ ಎಂದು ಬೆನ್ನು ತಟ್ಟಿದ ಕೆಲವರು ಕರೆ ಮಾಡಿ, ‘ನಿಮಗೆ ಒಂದು ಒಳ್ಳೆಯ ಪಾತ್ರ ಕೊಡ್ತೀವಿ. ಒಂದೆರಡು ಲಕ್ಷ ಇದ್ರೆ ಅಕೌಂಟ್‌ಗೆ ಹಾಕಿ’ ಎಂದರು. ಈಗಾಗಲೇ ಲಂಚ ಕೊಡಲಾಗದೆ ಕೈಗೆ ಬಂದಿದ್ದ ಪೊಲೀಸ್ ಕೆಲಸ ಬಿಟ್ಟಿದ್ದ ನನಗೆ ಇಲ್ಲೂ ಲಂಚ ಕೇಳುತ್ತಾರಲ್ಲ ಎಂದೆನಿಸಿತು. ಆಗ ಊರಿಗೆ ಹೋಗಿ ನನ್ನದೇ ಒಂದು ನೃತ್ಯ ಮತ್ತು ಅಭಿನಯ ಅಕಾಡೆಮಿ ಯಾಕೆ ಆರಂಭಿಸಬಾರದು ಎಂಬ ಯೋಚನೆ ಬಂತು. ತಕ್ಷಣ ಊರಿಗೆ ವಾಪಸಾದೆ. ಈ ನಿರ್ಧಾರ ನನ್ನ ಬದುಕಿಗೆ ಹೊಸ ತಿರುವು ನೀಡಿತು’ ಎಂದು ಆತ್ಮವಿಶ್ವಾಸದಿಂದ ನಗುತ್ತಾರೆ.

ಬೆಂಗಳೂರಿನಿಂದ ರಾಣೆಬೆನ್ನೂರಿಗೆ ವಾಪಸಾದ ಚಂದ್ರು ‘ಶಿವಂ’ ನೃತ್ಯ ಮತ್ತು ಅಭಿನಯದ ಶಾಲೆ ತೆರೆದರು. ಅಲ್ಲಿ ಈಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ನೃತ್ಯ ಮತ್ತು ನಟನೆಯ ಅಭಿನಯ ಕಲಿಯುತ್ತಿದ್ದಾರೆ. ‘ಶಿವಂ’ ಮೂಲಕ ಕಿರುಚಿತ್ರಗಳ ನಿರ್ಮಾಣದ ಸಿದ್ಧತೆ ಮಾಡಿಕೊಳ್ಳುತ್ತಿರುವ ಚಂದ್ರು ಈಗ ಕನ್ನಡ ಚಿತ್ರರಂಗದ ಡಾನ್ಸ್ ಯೂನಿಯನ್‌ನ ಸದಸ್ಯರೂ ಆಗಿದ್ದಾರೆ. ಸಿನಿಮಾಗಳಿಗೆ ನೃತ್ಯ ಕಲಾವಿದನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

‘ಕೆಲ ದಿನಗಳ ಹಿಂದೆಯಷ್ಟೆ, ‘ಜನಮನಗಣ’ ಎಂಬ ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದೇನೆ ನನ್ನ ಡಾನ್ಸ್ ಅಕಾಡೆಮಿ ಮೂಲಕ, ಹಳ್ಳಿಯಿಂದ ಹೈದರಾಬಾದ್‌ವರೆಗೆ ಷೋಗಳನ್ನು ಕೊಟ್ಟಿದ್ದೇನೆ’ ಎನ್ನುವ ಚಂದ್ರು, ತಮ್ಮ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT