ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮದಿಂದ ರೂಪದರ್ಶಿಯಾಗಿ ಗೆದ್ದ ಜೂಹಿ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುತ್ತಿರುವ ಜೂಹಿ ಭಾರತಿ ಕಳೆದ ವರ್ಷದ ‘ಮಿಸ್‌ ಕರ್ನಾಟಕ’ ಸ್ಪರ್ಧೆಯ ವಿಜೇತೆ. ತಮ್ಮ ವೃತ್ತಿಕ್ಷೇತ್ರದ ಒಳಹೊರಗುಗಳ ಬಗ್ಗೆ ಅವರು ಮೆಟ್ರೊ ಜತೆ ಮಾತನಾಡಿದ್ದಾರೆ

* ಮಾಡೆಲಿಂಗ್‌ಗೆ ಬಂದದ್ದು ಹೇಗೆ?

ಮಾಡೆಲಿಂಗ್‌ ನನ್ನ ಇಷ್ಟದ ಕ್ಷೇತ್ರ. ಬಹಳ ದಿನದ ಕನಸೂ ಹೌದು. ಕಾಲೇಜು ಫೆಸ್ಟ್‌ಗಳಲ್ಲಿ ಭಾಗವಹಿಸುತ್ತಿದೆ. ಪಿಯುಸಿ ಮುಗಿಯುತ್ತಲೇ ಮಾಡೆಲಿಂಗ್‌ಗಾಗಿ ‘ಗ್ರೂಮಿಂಗ್’ ತರಬೇತಿ ಪಡೆದೆ. ನಂತರ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತಳಾದೆ.

l ಮಿಸ್ ಕರ್ನಾಟಕ ಆದ ಬಗೆ?

2016ರ ಅಕ್ಟೋಬರ್‌ನಲ್ಲಿ ‘ಮಿಸ್‌ ಕರ್ನಾಟಕ’ ಸ್ಪರ್ಧೆ ಗೆದ್ದೆ. ಸಿಲ್ವರ್‌ ಸ್ಟಾರ್‌ ಮಾಡೆಲಿಂಗ್ ಏಜೆನ್ಸಿಯಲ್ಲಿ ತರಬೇತಿ ಪಡೆದು ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನನಗಿಂತ ಹಿರಿಯ ಮಾಡೆಲ್‌ಗಳು ಭಾಗವಹಿಸಿದ್ದರು. ಆದರೆ ನನ್ನ ಶ್ರಮವೇ ನನ್ನನ್ನು ಗೆಲ್ಲುವಂತೆ ಮಾಡಿತು.

l ಸಿನಿಮಾದಲ್ಲಿ ಅವಕಾಶಗಳು ಬಂದಿವೆಯೇ?

ಹಿಂದಿ ಸಿನೆಮಾ ಒಂದಕ್ಕೆ ಸಹಿ ಮಾಡಿದ್ದೇನೆ. ಬಹುತಾರಾಗಣ ಇರುವ ಚಿತ್ರವದು. ದೊಡ್ಡ ಬ್ಯಾನರ್. ಸಿನಿಮಾದ ತಾರಾಗಣ, ತಾಂತ್ರಿಕ ಸಿಬ್ಬಂದಿಯ ಬಗ್ಗೆ ಈಗಲೇ ಹೇಳುವಂತಿಲ್ಲ. ಅದರ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ. ಪ್ರಸ್ತುತ ಸಿಲ್ವರ್‌ ಸ್ಟಾರ್‌ನಲ್ಲಿ ಏಜೆನ್ಸಿಯ ಮಾಡೆಲ್‌ಗಳಿಗೆ ತರಬೇತಿ ನೀಡುತ್ತಿದ್ದೇನೆ.

l ಬೆಂಗಳೂರಿನಲ್ಲಿ ಮಾಡೆಲಿಂಗ್‌ಗೆ ಪೂರಕ ವಾತಾವರಣ ಇದೆಯೇ?

ಖಂಡಿತಾ. ಮುಂಬೈ ಸಿನಿಮಾ ಸಿಟಿ ಆದರೆ ಬೆಂಗಳೂರು ಫ್ಯಾಷನ್‌ ಸಿಟಿ. ಮಾಡೆಲಿಂಗ್‌ ಕ್ಷೇತ್ರಕ್ಕೆ ಪ್ರವೇಶ ಪಡೆಯುವವರಿಗೆ ಅತ್ಯುತ್ತಮ ಅವಕಾಶಗಳು ಇಲ್ಲಿವೆ. ದೇಶದ ‘ಫ್ಯಾಷನ್ ಹಬ್’ ಆಗಿ ಗುರುತಿಸಿಕೊಂಡಿದೆ ಈ ನಗರ. ಸಾಕಷ್ಟು ಯಶಸ್ವಿ ಮಾಡೆಲ್‌ಗಳ ವೃತ್ತಿ ಬದುಕು ಪ್ರಾರಂಭವಾದದ್ದು ಇಲ್ಲಿಂದಲೇ.

l ವೈಯಕ್ತಿಕ ಬದುಕಿನ ಮೇಲೆ ವೃತ್ತಿಯ ಪರಿಣಾಮ ಬೀರುತ್ತದೆ ಅಂತಾರಲ್ಲ?

ಮಾಡೆಲಿಂಗ್‌ ಮಾತ್ರವೇ ಅಲ್ಲ, ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸರಿತೂಗಿಸಲು ಬಾರದಿದ್ದರೆ ಯಾವುದೇ ವೃತ್ತಿಯವರಿಗೂ ಎದುರಾಗುವ ಸಮಸ್ಯೆಯಿದು. ಕುಟುಂಬವನ್ನು ವಿಶ್ವಾಸಕ್ಕೆ

ತೆಗೆದುಕೊಂಡು ಅವರಿಗೆ ಮಾಡೆಲಿಂಗ್ ವೃತ್ತಿಯ ಬಗ್ಗೆ ಮನದಟ್ಟು ಮಾಡಿದರೆ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ಎರಡೂ ಸುಂದರವಾಗಿರುತ್ತದೆ.

l ಮಾಡೆಲ್‌ಗಳ ಯಶಸ್ಸು ಕ್ಷಣಿಕ ಅಂತೆ ಹೌದಾ?

ಅಲ್ಪತೃಪ್ತರಿಗೆ ಯಶಸ್ಸು ಕ್ಷಣಿಕವೇ. ಒಂದು ಸ್ಪರ್ಧೆ ಗೆದ್ದು ನನಗೆ ಇಷ್ಟೇ ಸಾಕು ಎಂದುಕೊಂಡರೆ ಅವರ ಬದುಕು ಅಷ್ಟಕ್ಕೆ ಮುಗಿದಂತೆ. ಮುಂದಿನ ವರ್ಷದಷ್ಟರಲ್ಲಿ ಅವರು ಮೂಲೆಗುಂಪಾಗುತ್ತಾರೆ ಅದಕ್ಕೆ ಕಾರಣ ಅವರ ನಿರ್ಲಕ್ಷ್ಯವೇ ಹೊರತು ಮಾಡೆಲಿಂಗ್ ಕ್ಷೇತ್ರ ಅಲ್ಲ. ಪ್ರತಿಭೆಯುಳ್ಳವರು, ನಿರಂತರ ಶ್ರಮ ಪಡುವವರಿಗೆ ಸದಾ ಯಶಸ್ಸು ಸಿಕ್ಕೇ ಸಿಗುತ್ತದೆ. ಬಹಳ ವರ್ಷಗಳಿಂದಲೂ ಟಾಪ್ ಮಾಡೆಲ್‌ಗಳ ಪಟ್ಟಿಯಲ್ಲಿ ನೆಲೆ ನಿಂತಿರುವ ಮಾಡೆಲ್‌ಗಳು ಸಾಕಷ್ಟು ಮಂದಿ ಇದ್ದಾರೆ.

l ಈ ಕ್ಷೇತ್ರದಲ್ಲಿ ನಿರಂತರ ಶ್ರಮ ಎಂಬುದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಕಠಿಣ ವ್ಯಾಯಾಮ, ತರಬೇತಿ, ಆಹಾರ ಪದ್ಧತಿಯಲ್ಲಿ ಶಿಸ್ತು, ಜೊತೆಗೆ ನಿರಂತರ ಕಲಿಕೆ. ಸಣ್ಣ–ಸಣ್ಣ ಜಾಹಿರಾತುಗಳ ಚಿತ್ರೀಕರಣವಾದರೂ ಸರಿ ಪಾಲ್ಗೊಳ್ಳಬೇಕು, ಕಲಿಯುವ ಮತ್ತು ಜನರ ಮುಂದೆ ಹೋಗುವ ಯಾವ ಅವಕಾಶವನ್ನೂ ಕೈ ಚೆಲ್ಲಬಾರದು, ಬೇಗನೇ ಜನಪ್ರಿಯತೆ ಗಳಿಸಬೇಕೆಂದು ಆತುರ ಪಡಬಾರದು, ಸಂಯಮ ಕಾಯ್ದುಕೊಳ್ಳಬೇಕು.

l ರೂಪದರ್ಶಿಯರಿಗೆ ಕಠಿಣ ಡಯಟ್ ಮಾಡಬೇಕಂತೆ ಹೌದಾ?

ಹೌದು. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹಣ ಗಳಿಸಬಹುದು. ಆದರೆ ಆ ಹಣವನ್ನು ತಿನ್ನುವುದಕ್ಕೆ ಬಳಸುವಂತಿಲ್ಲ. ಡಯಟ್ ಅನ್ನು ಜೀವನದ ಭಾಗ ಮಾಡಿಕೊಂಡರೆ ಮಾತ್ರ ಉತ್ತಮ ಮಾಡೆಲ್‌ ಆಗಲು ಸಾಧ್ಯ. ಹಾಗೆಂದು ಎಲ್ಲರ ಡಯಟ್ ಒಂದೇ ರೀತಿ ಇರುತ್ತದೆ ಎಂದುಕೊಳ್ಳುವಂತಿಲ್ಲ. ಪ್ರತಿಯೊಬ್ಬರ ಶಾರೀರಿಕ ಗುಣಕ್ಕೆ ಅನುಗುಣವಾದ ಡಯೆಟ್‌ಅನ್ನೇ ಪಾಲಿಸಬೇಕು. ಪೌಷ್ಟಿಕ ಆಹಾರ ತಜ್ಞರ ಸಲಹೆ ಪಡೆದು ಆಹಾರ ಸೇವನೆಯ ಚಾರ್ಟ್ ರೂಪಿಸಿಕೊಳ್ಳುವುದು ಉತ್ತಮ ಡಯಟ್‌ನ ಲಕ್ಷಣ. ನಾನು ಬೆಳಿಗ್ಗೆ ಓಟ್ಸ್ ತಿನ್ನುತ್ತೇನೆ. ರಾತ್ರಿಗೆ ಸಲಾಡ್. ಹಾಗೆಂದು ಎಲ್ಲರ ಆಹಾರಕ್ರಮ ಹೀಗೇ ಇರುತ್ತದೆ ಎಂದೇನಿಲ್ಲ. ಅವರ ದೇಹಕ್ಕೆ ಒಗ್ಗುವ ಡಯಟ್ ರೂಪಿಸಿಕೊಳ್ಳಬೇಕು ಮತ್ತು ಅದನ್ನು ನಿಷ್ಠೆಯಿಂದ ಅನುಸರಿಸಬೇಕು.

l ಬಿಳಿ ಚರ್ಮದವರು ಮಾತ್ರ ಮಾಡೆಲ್ ಆಗಲು ಸಾಧ್ಯ ಅಂತಾರೆ?

ಆ ರೀತಿ ಮಾತನಾಡುವವರಿಗೆ ಮಾಡೆಲಿಂಗ್‌ ಜಗತ್ತಿನ ಪರಿಚಯ ಇಲ್ಲವೆಂದೇ ಹೇಳಬೇಕು. ಸಾಕಷ್ಟು ಜನ ಕಂದು, ಕಪ್ಪು ವರ್ಣದವರಿದ್ದಾರೆ ಮತ್ತು ಅವರು ಯಶಸ್ಸನ್ನೂ ಗಳಿಸಿದ್ದಾರೆ. ಬೆಳ್ಳಗಿದ್ದ ಮಾತ್ರಕ್ಕೆ ಉತ್ತಮ ಮಾಡೆಲ್ ಆಗಲು ಸಾಧ್ಯವಿಲ್ಲ. ದೇಹದ ಆಕರ್ಷಣೆ, ಸ್ವಭಾವ, ಮುಖಭಾವ, ಪ್ರತಿಭೆ, ನಡಿಗೆ, ವ್ಯಕ್ತಿತ್ವ ಇವುಗಳಷ್ಟೆ ಮಾಡೆಲಿಂಗ್‌ ಬೇಕಾದವು. ಬಣ್ಣಕ್ಕೂ ಮಾಡೆಲಿಂಗ್‌ಗೂ ಸಂಬಂಧವಿಲ್ಲ. ನನ್ನ ಇಷ್ಟು ವರ್ಷದ ಅನುಭವದ ಪ್ರಕಾರ ಬಿಳಿ ಬಣ್ಣದವರಿಗಿಂತಲೂ ಕಂದು ಅಥವಾ ಕಪ್ಪು ಬಣ್ಣದ ಮಾಡೆಲ್‌ಗಳೇ ಹೆಚ್ಚು ಆಕರ್ಷಕವಾಗಿರುತ್ತಾರೆ‌.

l ಉಡುಪುಗಳ ಬಗ್ಗೆ ಮಾಡೆಲ್‌ಗಳಿಗೆ ಮಿತಿ ಇರಬೇಕಾ?

ನಾನು ಬಿಕಿನಿ ಹಾಕಲಾರೆ. ಇದು ನಾನು ಹೇರಿಕೊಂಡ ಸ್ವಯಂ ಮಿತಿ. ಆದರೆ ಎಲ್ಲರೂ ಹೀಗೆ ಇರಬೇಕು ಎನ್ನಲು ಸಾಧ್ಯವಿಲ್ಲ. ಅಂತಿಮವಾಗಿ ಯಾರಿಗೆ ಯಾವ ರೀತಿಯ ಬಟ್ಟೆ ಮನಸ್ಸಿಗೆ ಒಪ್ಪುತ್ತದೆಯೋ ಅದನ್ನು ಹಾಕಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT