ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬಿತ್ತನೆ ಪ್ರಗತಿ; ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಕೊರತೆ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕೆಲ ಭಾಗಗಳನ್ನು ಹೊರತುಪಡಿಸಿ, ದೇಶದ ಎಲ್ಲೆಡೆ ಭತ್ತ ಸೇರಿದಂತೆ ಮುಂಗಾರು ಬೆಳೆಗಳ ಬಿತ್ತನೆ ಪ್ರಮಾಣದ ಪ್ರಗತಿಯು ನಿರೀಕ್ಷಿತ ಮಟ್ಟದಲ್ಲಿ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

‘ಪ್ರವಾಹ ಪರಿಸ್ಥಿತಿ ಇರುವ ಒಡಿಶಾ ಮತ್ತು ಅಸ್ಸಾಂಗಳಲ್ಲಿ ಇದುವರೆಗೂ ಬೆಳೆ ನಷ್ಟವಾದ ವರದಿಗಳು ಬಂದಿಲ್ಲ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲ ಭಾಗ ಹೊರತುಪಡಿಸಿ ಉಳಿದಂತೆ ದೇಶದ ಎಲ್ಲೆಡೆ ಮುಂಗಾರು ಬಿತ್ತನೆಯು ನಿರೀಕ್ಷೆಯಂತೆ ಪ್ರಗತಿಯಲ್ಲಿದೆ’ ಎಂದು ಕೃಷಿ ಕಾರ್ಯದರ್ಶಿ  ಶೋಭನ್‌ ಕೆ. ಪಟ್ಟನಾಯಕ್‌ ಹೇಳಿದ್ದಾರೆ.

ನೈರುತ್ಯ ಮಳೆ ಮಾರುತ ಆರಂಭವಾಗುತ್ತಿದ್ದಂತೆ 2017–18ನೇ ಸಾಲಿನ ಮುಂಗಾರು ಬಿತ್ತನೆಗೆ ಚಾಲನೆ ಸಿಗುತ್ತದೆ.  ಜುಲೈ ತಿಂಗಳಲ್ಲಿ ಈ ಚಟುವಟಿಕೆ ತೀವ್ರಗೊಳ್ಳುತ್ತದೆ. ಭತ್ತ ಬಿತ್ತನೆಯ ಪ್ರಮಾಣವು ಈ ಬಾರಿ ಹಿಂದಿನ ವರ್ಷಕ್ಕಿಂತ ಹೆಚ್ಚಿಗೆ ಇದೆ.

‘ಹಣದ ಬೆಳೆಗಳಾದ ಹತ್ತಿ ಮತ್ತು ಕಬ್ಬು ಬಿತ್ತನೆ ಪ್ರಮಾಣವೂ  ಈ ಬಾರಿ ಹೆಚ್ಚಾಗಿದೆ. ಆದರೆ, ಸೋಯಾಬಿನ್‌ ಮತ್ತು ತೊಗರಿ ಬೇಳೆಯ ಬಿತ್ತನೆ ಪ್ರಮಾಣ  ಕಡಿಮೆಯಾಗಿದೆ. ಇದಕ್ಕೆ ಕಳವಳ ಪಡಬೇಕಾಗಿಲ್ಲ. ಒಟ್ಟಾರೆ ಬಿತ್ತನೆ  ಉತ್ತಮ ಮಟ್ಟದಲ್ಲಿ ಇದೆ. ಉತ್ತಮ ಫಸಲು ಬರುವ ನಿರೀಕ್ಷೆ ಇದೆ’ ಎಂದು ಪಟ್ಟನಾಯಕ್‌ ಹೇಳಿದ್ದಾರೆ.

‘ಕರ್ನಾಟಕದಲ್ಲಿ ಈ ಬಿತ್ತನೆಯ ಪ್ರಮುಖ ಕಾಲಘಟ್ಟದಲ್ಲಿ ರೈತರು ಮಳೆಯನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹವೂ ತುಂಬ ಕಡಿಮೆ ಮಟ್ಟದಲ್ಲಿ ಇದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.

ಈ ಬಾರಿ ದೇಶದಾದ್ಯಂತ ವಾಡಿಕೆಯ ಮಳೆಯಾಗುವ ನಿರೀಕ್ಷೆ ಇರುವುದರಿಂದ ಕೃಷಿ ಉತ್ಪಾದನೆಯು ಗರಿಷ್ಠ ಪ್ರಮಾಣದಲ್ಲಿ ಇರಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ.

ಸಮೃದ್ಧ ಫಸಲಿನಿಂದಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಗಳು ಕುಸಿದರೆ ರೈತರಿಗೆ ನಷ್ಟವಾಗುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT