ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬಾಹಿರ ಚಟುವಟಿಕೆ ತಡೆಗೆ ಗಸ್ತುಪಡೆ

Last Updated 18 ಜುಲೈ 2017, 4:56 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಪೊಲೀಸರು ಮತ್ತು ನಾಗರಿಕರ ಸಂಬಂಧ ಜನಸ್ನೇಹಿಯಾಗಿದ್ದರೆ ಮಾತ್ರ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ’ ಎಂದು  ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಮುತ್ತುರಾಜ್‌ ಅಭಿಪ್ರಾಯಪಟ್ಟರು. ಪೊಲೀಸ್‌ ಇಲಾಖೆ ವತಿಯಿಂದ ಇಲ್ಲಿನ ಮಾಧವ ಮಂಗಲ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಧಾರಿತ ಗಸ್ತು ವ್ಯವಸ್ಥೆ ನಾಗರಿಕ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಲು ಪೊಲೀಸ್‌ ವ್ಯವಸ್ಥೆ ಸನ್ನದ್ಧವಾಗಿದ್ದು  ತಾಲ್ಲೂಕು ವ್ಯಾಪ್ತಿಯಲ್ಲಿ 66 ಬೀಟ್‌ ಪೊಲೀಸರನ್ನು ನೇಮಕ ಮಾಡಲಾಗಿದೆ. ಗ್ರಾಮಸ್ಥರು ಈ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

‘ಪ್ರತಿ ಹಳ್ಳಿಗೆ ಗಸ್ತುಪಡೆ ವ್ಯವಸ್ಥೆಯಲ್ಲಿ 50 ಜನ ನಾಗರಿಕರ ಶಾಂತಿ, ಸೌಹಾರ್ದ ಸಮಿತಿ ರಚಿಸಲಾಗುವುದು. ಇದರಿಂದ ಹಳ್ಳಿಗಳಲ್ಲಿನ ಅನೇಕ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಲು ಸಾಧ್ಯವಿದೆ. ಈ ಹಿಂದೆ 13 ಮಂದಿ ಪೊಲೀಸರನ್ನು ಮಾತ್ರ ಗಸ್ತು ವ್ಯವಸ್ಥೆಯಲ್ಲಿ ತೊಡಗಿಸಲಾಗಿತ್ತು. ಈಗ 66 ಮಂದಿ ಪೊಲೀಸರನ್ನು ಗಸ್ತು ವ್ಯವಸ್ಥೆಗೆ ನಿಯೋಜನೆ ಮಾಡಲಾಗಿದೆ. ಇದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ’ ಎಂದು ಅವರು ಹೇಳಿದರು.

‘ಗಾಂಜಾ ಮಾಫಿಯಾ, ಅಕ್ರಮ ಮದ್ಯ ಮಾರಾಟ, ಕಳವು, ಗೂಂಡಾಗಿರಿ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಹೊಸ ಗಸ್ತುಪಡೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಸ್ಥಳೀಯವಾಗಿ ನಡೆಯುವ ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದು
ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಕಾ.ಸು. ಲಕ್ಷ್ಮೀಶ್‌, ಆರಗ ಗ್ರಾಮ ಪಂಚಾಯ್ತಿ ಸದಸ್ಯ ಜಗದೀಶ್‌, ಕೋಣಂದೂರು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಂ. ಮೋಹನ್‌, ಅರಳಸುರಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಪ್ಪ ಅವರು ಅನೇಕ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ 15 ವಾರ್ಡ್‌ಗಳಲ್ಲಿ 16ಮಂದಿ ಪೊಲೀಸ ರನ್ನು, ಗ್ರಾಮಾಂತರ ಪ್ರದೇಶದಲ್ಲಿ 51ಮಂದಿ ಪೊಲೀಸರನ್ನು ಗಸ್ತು ವ್ಯವಸ್ಥೆಗಾಗಿ ನೇಮಕ ಮಾಡಲಾಗಿದೆ ಎಂದು ಸಿಪಿಐ ಸುರೇಶ್‌ ಕುಮಾರ್‌ ಸಭೆಗೆ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಳಕೆರೆ ದಿವಾಕರ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ ಉಪಸ್ಥಿತರಿದ್ದರು. ವಾಗ್ದೇವಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪಿಎಸ್‌ಐ ಭರತ್‌ ಕುಮಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT