ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌ಗೆ ಗುಣಮಟ್ಟ ಶ್ರೇಷ್ಠತಾ ಪ್ರಶಸ್ತಿಯ ಗರಿ

Last Updated 18 ಜುಲೈ 2017, 5:01 IST
ಅಕ್ಷರ ಗಾತ್ರ

ಶಿವಮೊಗ್ಗ: ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮತ್ತು ವಿತರಣೆಗಾಗಿ ರಾಷ್ಟ್ರೀಯ ಹಾಲು ಉತ್ಪಾದನಾ ಮಂಡಳಿ ನೀಡುವ 2016–17ನೇ ಸಾಲಿನ ‘ಗುಣಮಟ್ಟ ಶ್ರೇಷ್ಠತಾ ಪ್ರಶಸ್ತಿ’ಗೆ  ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿಮುಲ್‌) ಭಾಜನವಾಗಿದೆ.

ರಾಜ್ಯದ 4 ಹಾಲು ಒಕ್ಕೂಟಗಳು ಹಾಗೂ 2 ಉತ್ಪಾದನಾ ಘಟಕಗಳು ಈ  ಬಾರಿ ಮಂಡಳಿ ನೀಡುವ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. ಶಿವಮೊಗ್ಗ, ಬೆಂಗಳೂರು, ಮಂಡ್ಯ, ಕೋಲಾರ ಹಾಲು ಉತ್ಪಾದಕರ ಒಕ್ಕೂಟಗಳು ಹಾಗೂ ಚನ್ನರಾಯಪ್ಪಣ ಹಾಲಿನ ಪುಡಿ ತಯಾರಿಕಾ ಘಟಕ, ಯಲಹಂಕ ಮದರ್ ಡೈರಿಗೆ ಪ್ರಶಸ್ತಿ ಲಭಿಸಿವೆ.

20ಕ್ಕೆ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ: ದೇಶದ ವಿವಿಧ ರಾಜ್ಯಗಳಿಂದ ಪ್ರಶಸ್ತಿಗಾಗಿ 53 ಅರ್ಜಿಗಳು ಸಲ್ಲಿಕೆಯಾಗಿ ದ್ದವು. ಅಂತಿಮ ಸುತ್ತಿನಲ್ಲಿ ದೇಶದ 13 ಒಕ್ಕೂಟ ಹಾಗೂ ಘಟಕಗಳಿಗೆ ಪ್ರಶಸ್ತಿ ನೀಡಲಾಗಿದೆ. ಅವುಗಳಲ್ಲಿ ರಾಜ್ಯಕ್ಕೇ 6 ಪ್ರಶಸ್ತಿ ಸಂದಿರುವುದು ರಾಜ್ಯದ ಕ್ಷೀರ ಸಾಧನೆಯ ಮೈಲುಗಲ್ಲು. ಜುಲೈ 20ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್‌ ಸಿಂಗ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮೂರು ವರ್ಷ ಲೋಗೊಬಳಕೆ: ಗುಣಮಟ್ಟ ಶ್ರೇಷ್ಠತಾ ಪ್ರಶಸ್ತಿಗೆ ಆಯ್ಕೆಯಾಗಿರುವ ಹಾಲು ಉತ್ಪಾದನಾ ಘಟಕಗಳು ತಮ್ಮ ಉತ್ಪನ್ನಗಳ ಮೇಲೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ಹಾಲು ಉತ್ಪಾದನಾ ಮಂಡಳಿ ಲೋಗೊ ಬಳಸಬಹುದು.

2ನೇ ಬಾರಿ ಪ್ರಶಸ್ತಿ: ಶಿಮುಲ್‌ಗೆ ಇದು ಎರಡನೇ ಪ್ರಮುಖ ಪ್ರಶಸ್ತಿ. 2010–11ನೇ ಸಾಲಿನಲ್ಲಿ ಹೆಚ್ಚು ಹಾಲು ಉತ್ಪಾದನೆಗೆ ರೈತರಿಗೆ ಪ್ರೋತ್ಸಾಹ ನೀಡುವ ಮೂಲಕ ‘ರಾಷ್ಟ್ರೀಯ ಉಳಿತಾಯ ಸಾಮರ್ಥ್ಯ’ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

‘1991ರಲ್ಲಿ ಸ್ಥಾಪನೆಯಾದ ಶಿಮುಲ್ 27 ವರ್ಷಗಳಾದರೂ ಹೊಸ ತಂತ್ರಜ್ಞಾನದ ಒಕ್ಕೂಟಗಳಿಗಿಂತಲೂ ಉತ್ತಮ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಿದೆ. ಹಾಗಾಗಿ, ಹೊಸ ಘಟಕ, ಒಕ್ಕೂಟಗಳ ಜತೆಗೆ ಪೈಪೋಟಿ ನಡೆಸಿ, ಪ್ರಶಸ್ತಿ ಪಡೆದಿದೆ. ರೈತರಿಂದ ಖರೀದಿಸುವ ಹಾಗೂ ಸಂಸ್ಕರಣೆ ಹಂತದಲ್ಲೇ ಶೇ 70ರಷ್ಟು ಅಂಕ ಗಳಿಸಿದ್ದ ಕಾರಣ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು’ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಟಿ.ಜಿ.ಗೋಪಾಲ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘2010–11ನೇ ಸಾಲಿನಲ್ಲಿ ಪ್ರಶಸ್ತಿ ಬಂದಾಗಲೂ ಗೋಪಾಲ್‌ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈಗ ಮತ್ತೆ ಅವರ ಅವಧಿಯಲ್ಲೇ ಪ್ರಶಸ್ತಿ ಬಂದಿದೆ’ ಎಂದು ಘಟಕದ ಎಂಜಿನಿಯರ್ ಡಿ.ವಿ.ಮಲ್ಲಿಕಾರ್ಜುನ್ ಸಂತಸ ಹಂಚಿಕೊಂಡರು.

4 ಲಕ್ಷ ಲೀಟರ್ ಹಾಲು ಉತ್ಪಾದನೆ
ಶಿಮುಲ್‌ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ. ಪ್ರತಿ ದಿನ ರೈತರಿಂದ 4 ಲಕ್ಷ ಲೀಟರ್‌ ಹಾಲು ಖರೀದಿಸಿ, ಸಂಸ್ಕರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 61,403 ಹಾಲು ಉತ್ಪಾದಕರು ಹಾಲು ಮಾರಾಟ ಮಾಡುತ್ತಾರೆ. ಹಾಲು ಸಂಗ್ರಹಿಸಲು  63 ಹಾಲು ಸಂಗ್ರಹ ಕೇಂದ್ರ (ಬಲ್ಕ್‌ ಮಿಲ್ಕ್ ಸೆಂಟರ್)ಗಳಿವೆ. ಮಾಚೇನಹಳ್ಳಿ ಬಳಿ ಇರುವ ಮೂಲ ಘಟಕದಲ್ಲೇ ಪ್ರತಿ ದಿನ ಸರಾಸರಿ 2.5 ಲಕ್ಷ ಲೀಟರ್‌ ಹಾಲು ಸಂಸ್ಕರಿಸಲಾಗುತ್ತದೆ.

* * 

ಶಿಮುಲ್‌ ಸಹ ಹೊಸತಂತ್ರಜ್ಞಾನದತ್ತ ಹೆಜ್ಜೆಹಾಕುತ್ತಿದೆ. ಒಕ್ಕೂಟದ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ರಫ್ತು ಮಾಡುವ ಆಲೋಚನೆ ಇದೆ.
–ಟಿ.ಜಿ.ಗೋಪಾಲ್‌
ವ್ಯವಸ್ಥಾಪಕ ನಿರ್ದೇಶಕ, ಶಿಮುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT