ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನದಲ್ಲಿ 22 ಕೆರೆಗಳಿಗೆ ನೀರು ಸರಬರಾಜು

Last Updated 18 ಜುಲೈ 2017, 5:18 IST
ಅಕ್ಷರ ಗಾತ್ರ

ದಾವಣಗೆರೆ: ಇನ್ನು 10 ದಿನಗಳಲ್ಲಿ 22 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು. ತರಳಬಾಳು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜತೆ 22 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ರಾಜನಹಳ್ಳಿ ಜಾಕ್‌ವೆಲ್‌ಗೆ ಭಾನುವಾರ ಭೇಟಿ ನೀಡಿದ ನಂತರ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ 22 ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭದಲ್ಲೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು. ಇದರಿಂದ ಇಂದು ರೈತರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಕಳೆದ ವರ್ಷ ಸ್ವಂತ ಖರ್ಚಿನಲ್ಲಿ ಪಂಪ್‌ಸೆಟ್ ಅಳವಡಿಸಿ ನೀರು ಸರಬರಾಜು ಮಾಡಲಾಯಿತು. ಆದರೆ, ಮಳೆ ಇಲ್ಲದ ಕಾರಣ ನದಿಪಾತ್ರದಲ್ಲಿ ನೀರು ಸಿಗದೆ ಸಮಸ್ಯೆ ಉಂಟಾಯಿತು. ಈ ಬಾರಿಯೂ   ಮಳೆ ಸರಿಯಾದ ಸಮಯದಲ್ಲಿ ಆಗದಿ ರುವುದರಿಂದ ನೀರು ಸರಬರಾಜಿಗೆ ತೊಂದರೆ ಆಯಿತು’ ಎಂದರು.

ಇದೀಗ ಶಾಶ್ವತ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿ ನಿರ್ಮಾಣದ ವೇಳೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗಿದ್ದು, ಇನ್ನು 8ರಿಂದ 10ದಿನಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ನೀರು ಹರಿಸುವ ಮೊದಲು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎಲ್ ಅಂಡ್ ಟಿ ಕಂಪೆನಿಯೂ ನೀರು ಅಪವ್ಯಯವಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು, ಅಧಿಕಾರಿಗಳಿಗೆ ಸೂಚಿಸಿದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಚಿವರು ಇನ್ನು 10 ದಿನಗಳಲ್ಲಿ ನೀರು ಹರಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಕೆಲವರ ತಪ್ಪುಗಳಿಂದ ಸಮಸ್ಯೆ ಉದ್ಭವಿಸಿದೆ. ಇಂದು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ನಡೆದಿರುವುದು ಶ್ಲಾಘನೀಯ’ ಎಂದರು.

ಚನ್ನಗಿರಿಯ ಉಬ್ರಾಣಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಒಂದು ಕೆರೆ ತುಂಬಿದ ನಂತರ ಮತ್ತೊಂದು ಕೆರೆಗೆ ನೀರು ಹರಿಸಬೇಕಾಗಿದೆ. ಈ ಬಾರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವ ಕಾರಣ ಒಂದು ನದಿ ತುಂಬುವ ತನಕ ಕಾಯಬಾರದು. ಕೆರೆ ಕೋಡಿ ಬಳಿ ತಾತ್ಕಾಲಿಕ ತೂಬು ನಿರ್ಮಿಸಿ ಒಂದು ಕೆರೆ ಅರ್ಧ ತುಂಬಿದ ತಕ್ಷಣ ಮತ್ತೊಂದು ಕೆರೆಗೆ ನೀರು ಹರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್.ಬಸವಂತಪ್ಪ, ಮಾಜಿ ಸದಸ್ಯ ರಾದ ಬೇತೂರು ಕರಿಬಸಪ್ಪ, ನಾಗೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಂಗನಕಟ್ಟೆ ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ  ಪುಟ್ಟಸ್ವಾಮಿ, ಬೆಳ್ಳೂಡಿ ಬಸವರಾಜ್, ಗಡಿಗುಡಾಳ್ ಮಂಜುನಾಥ್, ಮಾಗಾನಹಳ್ಳಿ ಪರಶುರಾಂ, ಬೂದಾಳ್ ಬಾಬು, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪಾಟೀಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೊಟ್ರೇಶ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT