ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರಕ್ಕೆ ಒತ್ತಾಯ

Last Updated 18 ಜುಲೈ 2017, 5:33 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮುಗನೂರ ಗ್ರಾಮದಲ್ಲಿ ಭಾನುವರ ನಡೆದ ಮೂವರ ಭೀಕರ ಕೊಲೆ ಪ್ರಕರಣವನ್ನು ಖಂಡಿಸಿ ಸೋಮವಾರ ಕೋಲಿ ಸಮಾಜದ ಜನರು ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದರು. ‘ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಚಿಂಚೋಳಿ ಕ್ರಾಸ್ ಬಳಿ ಸೇಡಂ–ಕಲಬುರ್ಗಿ ರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಕೋಲಿ ಸಮಾಜದ 500ಕ್ಕೂ ಹೆಚ್ಚು ಜನರು, ಜನಪ್ರತಿನಿಧಿಗಳು ಹಾಗೂ ಮುಖಂಡರು  ಪ್ರತಿಭಟನೆಯಲ್ಲಿ ಭಾಗವಹಿಸಿ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಕೋಲಿ ಸಮಾಜದ ರಾಜ್ಯ ಗೌರವ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ‘ಮುಗ್ದ ಮನಸ್ಸಿನ ಕೋಲಿ ಸಮಾಜದ ಕುಟುಂಬದ ಮೇಲೆ ದಾರುಣವಾಗಿ ಹಲ್ಲೆ ಮಾಡಿ ಒಂದೇ ಕುಟುಂಬದ ಮೂವರನ್ನು ಕೊಲೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೋಲಿ ಸಮಾಜದವರ ಮೇಲೆ ಹಿಂದಿನಿಂದಲೂ ಸಹ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಈ ಕೊಲೆ ಇಡೀ ಕೋಲಿ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾಗುವಳಿ ಮಾಡಿ ಬಿತ್ತನೆ ಮಾಡುತ್ತಿರುವ ಜಮೀನಿಗೆ ಭದ್ರತೆ ಒದಗಿಸಿ ಕಾನೂನು ಪ್ರಕಾರ ಭೂವಿವಾದ ಇತ್ಯರ್ಥಪಡಿಸಬೇಕು. ಆರೋಪಿ ಕುಟುಂಬದವರನ್ನು ಗ್ರಾಮದಿಂದ ಗಡಿಪಾರು ಮಾಡಬೇಕು. ಈ ಕ್ರಮಗಳನ್ನು ಸರ್ಕಾರ ಆದಷ್ಟು ಶೀಘ್ರದಲ್ಲಿಯೇ ತೆಗೆದುಕೊಳ್ಳದೆ ಇದ್ದಲ್ಲಿ ಕಲಬುರ್ಗಿಯಲ್ಲಿ 10 ಸಾವಿರಕ್ಕೂ ಅಧಿಕ ಜನ ಸೇರಿಸಿ ಪ್ರತಿಭಟನೆ ಮಾಡಲಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಮಾತನಾಡಿ, ‘ಜಿಲ್ಲೆಯಲ್ಲಿ ಇದೊಂದು ಅತ್ಯಂತ ಭೀಕರ ಪ್ರಕರಣವಾಗಿದೆ. ಒಂದೇ ಕುಟುಂಬದ ಆರು ಸದಸ್ಯರ ಮೇಲೆ ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ಮಾಡಿ ಕೊಲೆ ಮಾಡಿರುವುದು; ಮೂವರ ಸಾವಿಗೆ ಕಾರಣವಾಗಿರುವುದು ಆಘಾತಕಾರಿ.

ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಜಾಗ್ರತೆಯಿಂದ ಕೆಲಸ ಮಾಡಿದೆ. ಕೊಲೆಗೆ ಸಂಬಂಧಿಸಿದ ನಾಲ್ಕು ಆರೋಪಿಗಳನ್ನು ಸೋಮವಾರ ಬೆಳಗಿನ ಜಾವ ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಕಣ್ಮರೆಯಾಗಿದ್ದು, ಬಂಧಿಸುವ ನಿಟ್ಟಿನಲ್ಲಿ ಜಾಲ ಬೀಸಲಾಗಿದೆ’ ಎಂದರು.

ತನಿಖೆ: ‘ತಾಲ್ಲೂಕಿನ ಮುಗನೂರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಮಾಡಲಾಗುತ್ತದೆ. ಯಾವುದೇ ರೀತಿಯ ರಾಜಕೀಯ ಒತ್ತಡ ಹಾಗೂ ವಿವಿಧ ಹೇಳಿಕೆಗಳಿಗೆ ಬಗ್ಗದೆ ತನಿಖೆಯನ್ನು ಮಾಡಲಾಗುತ್ತದೆ.

ಕಂದಾಯ ಇಲಾಖೆಯ ಸಹ ಜಮೀನು ವಿವಾದದ ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಿನ 15 ದಿನಗಳಲ್ಲಿ ಜಮೀನು ವಿವಾದ ಬಗೆಹರಿಸಬೇಕು. ತನಿಖೆಯ ದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಮುಗನೂರು ಹಾಗೂ ತಾಲ್ಲೂಕಿನ ಜನತೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಭರವಸೆ: ‘ಮೃತಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರವನ್ನು ಕೊಡುತ್ತೇನೆ ಎಂದು ಲಿಖಿತ ಬರವಣಿಗೆ ಕೊಡಿ’ ಎಂದು  ಪ್ರತಿಭಟನಾಕಾರರು ಪಟ್ಟು ಹಿಡಿದಾಗ  ಶಶಿಕುಮಾರ ಅವರು ಜಿಲ್ಲಾಧಿಕಾರಿ ಉಜ್ವಲಕುಮಾರ ಅವರಿಗೆ ದೂರವಾಣಿ ಕರೆ ಮಾಡಿದರು.

‘ಎರಡು ದಿನದಲ್ಲಿ ಮುಗನೂರು ಗ್ರಾಮಕ್ಕೆ ಭೇಟಿ ಕೊಡುತ್ತೇನೆ. ಮೃತಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ’ ಎಂಬ ಡಿಸಿ ಭರವಸೆ ನೀಡಿದಾಗ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ರಸ್ತೆ ತಡೆ ನಡೆಸಿ ಪ್ರತಿಭಟನೆ: ಕೋಲಿ ಸಮಾಜದ ಮುಖಂಡರು ರಾಜ್ಯ ಹೆದ್ದಾರಿ–10 ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಚಿಂಚೋಳಿ, ಕೋಡಂಗಲ್ ಹಾಗೂ ಕಲಬುರ್ಗಿ ಕಡೆ ಸಂಚರಿಸುವ ಪ್ರಯಾಣಿಕರು ಪರದಾಡಿದರು.

ರಾಜ್ಯ ಹೆದ್ದಾರಿಯ ಮೇಲೆ ಸರತಿಯಲ್ಲಿ ವಾಹನಗಳ ಸಾಲು ಕಂಡಿತು. ಕೋಲಿ ಸಮಾಜದ ಜನರು ರಸ್ತೆ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಕರಣವನ್ನು ಖಂಡಿಸಿ, ಘೋಷಣೆ ಕೂಗಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಕೋಲಿ ಸಮಾಜ ಕಲಬುರ್ಗಿ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಯಾದಗಿರಿ ಜಿಲ್ಲಾಧ್ಯಕ್ಷ ಉಮೇಶ ಮದ್ನಾಳ, ಭೀಮಣ್ಣ ಸಾಲಿ, ಶೋಭಾ ಬಾಣಿ, ಸಿದ್ದು ಬನಾನಾರ್, ನಾಗಪ್ಪ ಕೊಳ್ಳಿ, ಕಾಶಿನಾಥ ನಿಡಗುಂದಾ, ರಾಜಗೋಪಾಲರೆಡ್ಡಿ, ಶರಣಪ್ಪ ತಳವಾರ, ಮುಕ್ರಂಖಾನ್, ಶರಣಪ್ಪ ಎಳ್ಳಿ, ಭೀಮರಾವ ಅಳ್ಳೊಳ್ಳಿ, ಜಗನ್ನಾಥ ಪಾಟೀಲ, ಮಹಾದೇವಿ ಗೋಣಿ, ಅರ್ಜುನ ಚೆನ್ನಕ್ಕಿ, ಮಲ್ಲಿಕಾರ್ಜುನ ಗುಡ್ಡದ, ಸೋಮಶೇಖರ ಬಿಬ್ಬಳ್ಳಿ, ಅಶೋಕ ದಂಡೋತಿ, ಭೀಮರಾಯ ಕೋಡ್ಲಾ, ಕರೆಪ್ಪ ಪಿಲ್ಲಿ, ಲಕ್ಷ್ಮಣ ಆವಂಟಿ, ಶ್ರೀನಾಥ ಪಿಲ್ಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT