ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಳೆಕೊಪ್ಪದಲ್ಲಿ ಮೊಗೆದಷ್ಟು ಸಮಸ್ಯೆ

Last Updated 18 ಜುಲೈ 2017, 6:01 IST
ಅಕ್ಷರ ಗಾತ್ರ

ಕುಕನೂರು:  ಹೋಬಳಿ ವ್ಯಾಪ್ತಿಯ ಮಾಳೆಕೊಪ್ಪ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ  ಜನರನ್ನು ಹೈರಾಣಾಗಿಸಿದೆ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಇದೆ.  ಕುಡಿಯಲು ಹಳ್ಳದ ಒರತೆ ನೀರೇ ಗತಿ ಎನ್ನುವಂತಾಗಿದೆ.‘ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ ನಿರ್ಮಾಣವಾಗಿದೆ’ ಎಂಬುವುದು ಗ್ರಾಮಸ್ಥರ ದೂರು.

ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನಗಳನ್ನು ಗ್ರಾಮಸ್ಥರು ಅವಲಂಬಿಸಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಟ್ಟಣಕ್ಕೆ ತೆರಳಲು ಹರಸಾಹಸ ಪಡುವಂತಾಗಿದೆ.  ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಹಳೆಯದಾಗಿದ್ದು, ಯಾವುದೇ ಸಂದರ್ಭದಲ್ಲಿ ಬೀಳಬಹುದಾಗಿದೆ.

‘ಗ್ರಾಮದಲ್ಲಿ ಚರಂಡಿಗಳಿಲ್ಲದೆ ರಸ್ತೆ ಮೇಲೆ ನೀರು ನಿಂತು  ದುರ್ವಾಸನೆ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಕಾಟ  ಹೆಚ್ಚಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ’ ಎಂದು ಗ್ರಾಮಸ್ಥ  ಆನಂದ ಚೌವಾಣ್‌ ಹೇಳಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ  ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಯುವಕ ಮಾರುತಿ ಬಾರಕೇರ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಳ್ಳದ ಒರತೆಯಲ್ಲಿ ನೀರು ತಂದು ಕುಡಿಯಬೇಕು’ ಎಂದು ಮಹಿಳೆಯರು ಅಳಲು ತೋಡಿಕೊಂಡರು. ಉದ್ಯೋಗ ಖಾತ್ರಿ ಯೋಜನೆ ಅಡಿ ಮಂಜೂರಾದ ಹಣ ಸಮರ್ಪಕವಾಗಿ ಉಪಯೋಗವಾಗಿಲ್ಲ. ಯಂತ್ರಗಳ ಮೂಲಕ ಕೆಲಸ ನಿರ್ವಹಿಸಿ ಗುತ್ತಿಗೆದಾರರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗ್ರಾಮದ ಯುವಕರಾದ ಬಸವರಾಜ, ಮೌನೇಶ, ನಾಗನಗೌಡ, ಶಂಕ್ರರೆಡ್ಡೇಪ್ಪ ಒತ್ತಾಯಿಸಿದರು. 

* * 

ಗ್ರಾಮ ಸಮಸ್ಯೆಗಳ ಆಗರವಾಗಿದೆ. ಕುಡಿಯುವ ನೀರು, ಚರಂಡಿ ಮತ್ತು ಬಸ್‌ ಸಂಚಾರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು
ಮೌನೇಶ ಬಡಿಗೇರ
ಗ್ರಾಮಸ್ಥ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT