ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ: ‘ಬೊಮ್ಮನಹಳ್ಳಿ ಬಂದ್’ ಸಂಪೂರ್ಣ ಯಶಸ್ವಿ

Last Updated 18 ಜುಲೈ 2017, 6:12 IST
ಅಕ್ಷರ ಗಾತ್ರ

ಹಾನಗಲ್: ಬೆಳೆವಿಮೆಯಿಂದ ವಂಚಿತಗೊಂಡ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಗಳ ರೈತರು ಸೋಮವಾರ ಕರೆ ನೀಡಿದ್ದ ‘ಬೊಮ್ಮನಹಳ್ಳಿ ಬಂದ್’ ಸಂಪೂರ್ಣ ಯಶಸ್ವಿಯಾಯಿತು. 2016–17ನೇ ಸಾಲಿನ ಬೆಳೆವಿಮೆ ಪರಿಹಾರದಿಂದ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳು ವಂಚಿತವಾಗಿ ಗೊಂಡಿದ್ದು, ಈ ಪೈಕಿ ಬೊಮ್ಮನಹಳ್ಳಿ ಹೋಬಳಿ ಭಾಗದ ಬೊಮ್ಮನಹಳ್ಳಿ, ಹುಲ್ಲತ್ತಿ, ಕೂಡಲ, ಬೆಳಗಾಲಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರು ಸೋಮವಾರ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದಲೇ ಬಸ್‌ ಸೇರಿದಂತೆ ವಾಹನ ಸಂಚಾರವನ್ನು ತಡೆಯ ಲಾಯಿತು. ಶಾಲಾ–ಕಾಲೇಜುಗಳು ಬಂದ್‌ ಆಗಿದ್ದವು. ಅಂಗಡಿ, ಮುಂಗಟ್ಟುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಬಂದ್‌ ಮುಚ್ಚಿಸಲಾಗಿತ್ತು. ಇದರಿಂದ ವ್ಯಾಪಾರ ತಟಸ್ಥಗೊಂಡು ಬೊಮ್ಮನಹಳ್ಳಿ ಗ್ರಾಮ ಸ್ತಬ್ಧವಾಗಿತ್ತು.

ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ನೇತೃತ್ವದಲ್ಲಿ ರೈತರು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಬಸ್‌ ನಿಲ್ದಾಣ ಎದುರಿನ ಮುಖ್ಯ ರಸ್ತೆಯ ಮೇಲೆ ಧರಣಿ ಕುಳಿತರು. ತಹಶೀಲ್ದಾರ್  ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಧರಣಿ ಸ್ಥಳಕ್ಕೆ ಬಂದು ತಹಶೀಲ್ದಾರ್‌ ಶಕುಂತಲಾ ಚೌಗಲಾ ಮನವಿ ಸ್ವೀಕರಿಸಿದರು.

‘ಯಾವುದೇ ನೀರಾವರಿ ಸೌಲಭ್ಯವಿಲ್ಲದ ಬೊಮ್ಮನಹಳ್ಳಿ ಹೋಬಳಿ ಕ್ಷೇತ್ರಕ್ಕೆ ವಿಮೆ ಕಂಪೆನಿ ಅನ್ಯಾಯ ಮಾಡಿದೆ. ಬೆಳೆಹಾನಿ ಪಡೆದ ಇದೇ ಬೆಳೆಗಳಿಗೆ ವಿಮೆ ಪರಿಹಾರ ಸಿಗದಿರುವುದು ವಿಪರ್ಯಾಸ. ಕಂದಾಯ ಅಧಿಕಾರಿಗಳ ಲೋಪದಿಂದ ರೈತರು ವಿಮೆ ಪರಿಹಾರದಿಂದ ವಂಚಿತರಾಗಿದ್ದಾರೆ. ಸತತ ಬರದಿಂದ ಕಂಗೆಟ್ಟ ರೈತರಿಗೆ ಶೀಘ್ರವಾಗಿ  ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಚೌಗಲಾ, ‘ವಿಮಾ ಕಂಪೆನಿಗೆ ಬೆಳೆ ಇಳುವರಿ ಮತ್ತು ಹಿಂದಿನ 5 ವರ್ಷಗಳ ಬೆಳೆಯ ಸರಾಸರಿ ಲೆಕ್ಕಾಚಾರವನ್ನು ಕೃಷಿ, ಕಂದಾಯ ಮತ್ತು ಆರ್‌ಡಿಪಿಆರ್‌ ಇಲಾಖೆ ಅಧಿಕಾರಿಗಳು ಸಲ್ಲಿಸುತ್ತಾರೆ. ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳ ರೈತರಿಗೆ ಬೆಳೆವಿಮೆಯಲ್ಲಿ ಅನ್ಯಾಯವಾಗಿದೆ. ಆದರೆ ಇದರಲ್ಲಿ ಅಧಿಕಾರಿಗಳ ಲೋಪ ಇಲ್ಲ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ವಿಮಾ ಕಂಪೆನಿಯೊಂದಿಗೆ ಚರ್ಚೆ ನಡೆದಿದೆ’ ಎಂದು ತಿಳಿಸಿದರು.

ರೈತರಾದ ಎಂ.ಎಸ್‌.ಪಾಟೀಲ, ಶಿವಕುಮಾರಸ್ವಾಮಿ ಹಿರೇಮಠ, ಹನು ಮಂತಪ್ಪ ಪೂಜಾರ, ಮಹೇಶ ಪವಾರ, ಶಿವಾನಂದ ಬಿಡೇದ, ಶಿವಪುತ್ರಪ್ಪ ಮನ್ನಂಗಿ, ಶ್ರೀಕಾಂತ ಯಲಿಗಾರ, ಕೊಟ್ರಪ್ಪ ಬನ್ನೂರ, ಚನ್ನಬಸಯ್ಯ ದೊಡ್ಡಕಂತಿಮಠ, ಕಾಂತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT