ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳ ಕೊರತೆ: ಶೈಕ್ಷಣಿಕ ಪ್ರಗತಿಗೆ ಹಿನ್ನಡೆ

ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಓದುವ ಭಾಗ್ಯ
Last Updated 18 ಜುಲೈ 2017, 6:21 IST
ಅಕ್ಷರ ಗಾತ್ರ

ಗುಡಿಬಂಡೆ: ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಇದುವರೆಗೆ ಪಠ್ಯಪುಸ್ತಕಗಳು ಇಲ್ಲದೆ ತಾಲ್ಲೂಕಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೊಂದರೆ ಅನುಭವಿಸಬೇಕಾಗಿದೆ.

ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪಠ್ಯಪುಸ್ತಕಗಳನ್ನು ಪೂರೈಸುತ್ತಿದೆ. ಶಿಕ್ಷಣ ಇಲಾಖೆ ಪ್ರಕಾರ ಈಗಾಗಲೇ ಶೇ 96ರಷ್ಟು ಪಠ್ಯಪುಸ್ತಕಗಳ ಪೂರೈಕೆ ಆಗಿದೆ. ಆದರೆ ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸಿಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿಯೇ ಪುಸ್ತಕ ಲಭ್ಯವಾಗುತ್ತಿಲ್ಲ. ಇದರಿಂದ ಓದಿನಲ್ಲಿ ಹಿಂದುಳಿಯುವಂತಾಗಿದೆ ಎಂಬುದು ಪಾಲಕರ ಅಳಲು. ಶಿಕ್ಷಕರು ಪ್ರತಿನಿತ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ವಾಪಸ್ ಬರುವುದೇ ಕೆಲಸವಾಗಿದೆ.

2763 ಪುಸ್ತಕಗಳ ಕೊರತೆ: ಕನ್ನಡ ಮಾಧ್ಯಮದ 6ನೇ ತರಗತಿಯ ಸಮಾಜ ವಿಜ್ಞಾನ-ಭಾಗ –1ರ 518 ಪುಸ್ತಕಗಳು, 7ನೇ ತರಗತಿಯಲ್ಲಿ ಕನ್ನಡ ಮಾಧ್ಯಮದ  ವಿಜ್ಞಾನ-ಭಾಗ 2ರ 600 ಪುಸ್ತಕಗಳು, ಇಂಗ್ಲಿಷ್ ಮಾಧ್ಯಮದ ದೈಹಿಕ ಶಿಕ್ಷಣದ 50 ಪುಸ್ತಕಗಳ ಅಗತ್ಯವಿದೆ.

8ನೇ ತರಗತಿಯ ಗಣಿತ ಭಾಗ2ರ 150 ಪುಸ್ತಕಗಳ ಕೊರತೆ ಇದೆ. ಅಲ್ಲದೆ, ಇಂಗ್ಲಿಷ್ ಮಾಧ್ಯಮದ ವಿಜ್ಞಾನ ಭಾಗ2ರ 150, ಕನ್ನಡ ಮಾಧ್ಯಮದ 9ನೇ ತರಗತಿಯ ಗಣಿತ ಭಾಗ2ರ 535, ಇಂಗ್ಲಿಷ್ ಮಾಧ್ಯಮದ ಗಣಿತ ಭಾಗ2ರ 165, ಕನ್ನಡ ಮಾಧ್ಯಮದ ದೈಹಿಕ ಶಿಕ್ಷಣ 535 ಪುಸ್ತಕಗಳು ಕಡಿಮೆ ಇವೆ. 10ನೇ ತರಗತಿಯ ಇಂಗ್ಲಿಷ್ ವಿಷಯ ಭಾಗ1ರ 60 ಪುಸ್ತಕಗಳ ಕೊರತೆಯಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ತಾಲ್ಲೂಕಿನ ಶಿಕ್ಷಕರು ಹೇಳುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷಕ ಅಗತ್ಯವಿರುವ ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಫೆಬ್ರವರಿಯಲ್ಲಿಯೇ ಸಲ್ಲಿಸಬೇಕು. ಆಗ ಎಷ್ಟು ಬೇಡಿಕೆ ಸಲ್ಲಿಸಲಾಗಿತ್ತೋ ಅಷ್ಟೂ ಪುಸ್ತಕಗಳು ಪೂರೈಕೆಯಾಗಿದೆ. ಆದರೆ ಜೂನ್‌ ನಲ್ಲಿ ಶಾಲೆಗಳು ಆರಂಭವಾಗುವ ಸಮಯದಲ್ಲಿ ಹೆಚ್ಚಿನ ದಾಖಲಾತಿ ಆಗುತ್ತವೆ. ಎಷ್ಟು ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಿದ್ದಾರೋ ಅಷ್ಟು ಪುಸ್ತಕಗಳಿಗೆ ಮತ್ತೊಮ್ಮೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಹೆಚ್ಚುವರಿ ಪಠ್ಯಪುಸ್ತಕಗಳು ಇನ್ನು ಸರಬರಾಜಾಗಿಲ್ಲ. ಇದರಿಂದ ಕೆಲವೆಡೆ ಕೊರತೆ ಇದ್ದು, ಪೂರೈಕೆಗೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮಂಜುನಾಥ್ ಹೇಳಿದರು.

ಕಡ್ಡಾಯ ಶಿಕ್ಷಣ ಜಾರಿಯಾದ ನಂತರ ವಿದ್ಯಾರ್ಥಿಗಳು ಯಾವ ಸಂದರ್ಭದಲ್ಲಿ ಬಂದರೂ ಅವರನ್ನು ದಾಖಲು ಮಾಡಿಕೊಳ್ಳಬೇಕು. ಆದರೆ, ಅವರಿಗೆ ಅಗತ್ಯವಾಗಿ ಬೇಕಾದಂತಹ ಪುಸ್ತಕಗಳ ವಿತರಣೆಯನ್ನು ಸರ್ಕಾರವೇ ವಹಿಸಿಕೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಪುಸ್ತಕಗಳು ಲಭ್ಯವಿಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಮರ್ಪಕ ಮಾಹಿತಿಯಾಗಲಿ, ಸ್ಪಂದನೆಯಾಗಲಿ ಸಿಗುತ್ತಿಲ್ಲ. ಯಾವಾಗ ಪುಸ್ತಕ ಸಿಗುತ್ತದೆ ಎಂಬ ಮಾಹಿತಿಯೂ ದೊರೆಯುವುದಿಲ್ಲ. ಯಾವ ಪುಸ್ತಕಗಳು ಲಭ್ಯ ಇವೆ ಎಂಬ ಪಟ್ಟಿ ಇರುತ್ತದೆ. ಅದಕ್ಕೆ ತಕ್ಕಂತೆ ಡಿಡಿ ತರುವುದರೊಳಗೆ ಉಗ್ರಾಣದಲ್ಲಿ ಪುಸ್ತಕ ಖಾಲಿಯಾಗಿರುತ್ತದೆ. ಆಗ ಮತ್ತೊಂದು ಡಿಡಿ ತರಲು ಹೇಳುತ್ತಾರೆ. ಚಿಕ್ಕ ಪುಟ್ಟ ಶಾಲೆಗಳು ಅಗತ್ಯ ಪುಸ್ತಕಗಳನ್ನು ಪಡೆಯುವುದರ ಒಳಗೆ ಓಡಾಟಕ್ಕೆ ಹೆಚ್ಚಿನ ಖರ್ಚು ಮಾಡಬೇಕಿದೆ ಎಂದು ಕೆಲ ಶಾಲೆಗಳ ಮುಖ್ಯಸ್ಥರು ಆರೋಪಿಸುವರು.

**

ಫೆಬ್ರುವರಿಯಲ್ಲಿಯೇ ಪುಸ್ತಕಗಳ ಬೇಡಿಕೆಯ ಮಾಹಿತಿ ಕಳುಹಿಸಿದ್ದು, ಈ ವರ್ಷ ಹಾಜರಾತಿ ಹೆಚ್ಚಾಗಿದ್ದರಿಂದ ಕೊರತೆಯಾಗಿದೆ. ಸಮಸ್ಯೆ ಶೀಘ್ರ ಬಗೆಹರಿಯಲಿದೆ.
-ಮಂಜುನಾಥ್
ಸಮನ್ವಯಾಧಿಕಾರಿ, ಗುಡಿಬಂಡೆ

*

-ಗುಡಿಬಂಡೆ ಬಿ. ಮಂಜುನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT