ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಆಯೋಗಕ್ಕೆ ಅನುಮೋದನೆ ನೀಡಿ

Last Updated 18 ಜುಲೈ 2017, 6:31 IST
ಅಕ್ಷರ ಗಾತ್ರ

ಇಂಗಳೇಶ್ವರ (ಬಸವನ ಬಾಗೇವಾಡಿ): ‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗದ ಜನರ ಮೇಲೆ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಾಜ್ಯಸಭೆಯಲ್ಲಿ ಅನುಮೋದಿಸುವಂತೆ ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿಕೊಳ್ಳಲಿ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಗ್ರಾಮದಲ್ಲಿ  ಬಿಜೆಪಿ ಹಮ್ಮಿಕೊಂಡಿದ್ದ ವಿಸ್ತಾರಕ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಉಳಿಗಾಲವಿಲ್ಲ ಎಂದು ಬಿಂಬಿಸಲಾಗಿತ್ತು.

ಆದರೆ ಕಳೆದ ಮೂರು ವರ್ಷದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರ ಮೇಲೆ ದಾಳಿಯಾದ ಉದಾಹರಣೆ ಗಳಿಲ್ಲ. ಕರ್ನಾಟಕದಲ್ಲಿ ಕಳೆದ ನಾಲ್ಕು  ವರ್ಷಗಳಿಂದ ಮೈಸೂರು, ಮಂಗಳೂರು, ಬೆಂಗಳೂರು ಹಾಗೂ ಕೇರಳದಲ್ಲಿ 24 ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಸಮಾಜ ದಲ್ಲಿ ಯಾರು ಅಶಾಂತಿಯನ್ನು ಮೂಡಿಸುತ್ತಿದ್ದಾರೆ ಎಂಬುದನ್ನು ಜನರು ಅರಿಯುತ್ತಿದ್ದಾರೆ’ ಎಂದು ಹೇಳಿದರು.

‘ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್‌ ಸಿಕ್ಕಲ್ಲಿ ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಬಿ.ಕೆ. ಕಲ್ಲೂರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಸಾಬು ಮಾಶಾಳ, ಕಲ್ಲಪ್ಪ ಮಟ್ಟಿ, ಸಂತೋಷ ನಾಯಕ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಮುತ್ತು ಕಿಣಗಿ, ಟಿ.ಸಿ. ಯಳಮೇಲಿ, ವಿ.ಎಂ.ಪರೆಣ್ಣನವರ, ಮಲ್ಲು ಶೇಬಗೊಂಡ, ರೇವಣಸಿದ್ದ ಮಣ್ಣೂರ, ವಿವೇಕಾನಂದ ಡಬ್ಬಿ  ಇದ್ದರು.  ಎಸ್.ಎ. ದೇಗಿನಾಳ ಸ್ವಾಗತಿಸಿದರು. ಶಂಕರ ಹದಿನೂರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT