ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವಿ ಹಾಕಿಕೊಂಡು ಮೋಸ ಮಾಡಬೇಡಿ’

ಧಾರ್ಮಿಕ ಮತ್ತು ಪರಮಾರ್ಥ ಸಾಧಕರಿಗಾಗಿ ಪುನಶ್ಚೇತನ ಕಾರ್ಯಾಗಾರ
Last Updated 18 ಜುಲೈ 2017, 6:41 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಮಠಾಧೀಶರು ಕಾವಿ ಹಾಕಿಕೊಂಡು ಮೋಸ ಮಾಡುವ ಕೆಲಸಕ್ಕೆ ಮುಂದಾಗಬಾರದು’ ಎಂದು ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸಮೀಪದ ಚಂದ್ರವನ ಆಶ್ರಮದಲ್ಲಿ ಸೋಮವಾರ ನಡೆದ ‘ಧಾರ್ಮಿಕ ಮತ್ತು ಪರಮಾರ್ಥ ಸಾಧಕರಿಗಾಗಿ ಪುನಶ್ಚೇತನ ಕಾರ್ಯಾಗಾರ’ದಲ್ಲಿ ಅವರು ‘ಸಮತೋಲನ ಸಾಧನೆ ಮತ್ತು ಸಂತೃಪ್ತಿಯ ಸಂಪಾದನೆ’ ಕುರಿತು ವಿಷಯ ಮಂಡಿಸಿದರು. ‘ಮಠಾಧೀಶ ಎಂದರೆ ಭರವಸೆಯ ವ್ಯಕ್ತಿ ಎಂದು ಸಮಾಜ ಭಾವಿಸಿದೆ. ಈ ಭಾವನೆ ಹುಸಿಯಾಗದಂತೆ ಎಚ್ಚರ ವಹಿಸಬೇಕು. ಮಠಾಧೀಶರು ವಿಜ್ಞಾನಿಯಂತೆ ಮಾತ್ರವಲ್ಲದೆ ತತ್ವಜ್ಞಾನಿಯಂತೆಯೂ ಆಲೋಚನೆ ಮಾಡಬೇಕು. ಮಠದ ಅಭಿವೃದ್ಧಿ, ಆಸ್ತಿ ಸಂಪಾದನೆಗಾಗಿ ಇರಬಾರದು. ಆದರ್ಶಕ್ಕಾಗಿ ಸ್ವಾಮೀಜಿಗಳು ಇರಬೇಕು. ತಮ್ಮ ಮೆದುಳಿಗೆ ದೂಳು ಹತ್ತದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸ್ವಾಮೀಜಿಗಳಲ್ಲಿ ಅಪರಿಮಿತ ಶ್ರದ್ಧೆ ಹಾಗೂ ನಿಷ್ಠೆ ಇರಬೇಕು. ಧ್ಯಾನಸಂಧಾನ ಮತ್ತು ಲಿಂಗಾನುಸಂಧಾನ ಮಾಡಬೇಕು. ತಮ್ಮ ಸ್ಥಾನಕ್ಕೆ ಗೌರವ ತರುವ ಕೆಲಸವನ್ನು ಮಾಡಬೇಕು. ದೇಹದ ಅಂಗಾಂಗಗಳು ಮತ್ತು ಅವುಗಳ ಕಾರ್ಯದ ಪರಿಚಯ ತಿಳಿದುಕೊಳ್ಳಬೇಕು. ಅಧಿಕ ಚಿಂತೆ ಮತ್ತು ಭಾವನೆಗಳನ್ನು ಅದುಮಿಡುವುದು ಸರಿಯಲ್ಲ. ಧ್ಯಾನ ಮತ್ತು ಶಿವಯೋಗದ ಮೂಲಕ ಹೃದಯದ ಭಾರ ಕಡಿಮೆ ಮಾಡಿಕೊಳ್ಳಬೇಕು. ಸೇವಿಸುವ ಆಹಾರ ಔಷಧವಾಗಬೇಕೇ ಹೊರತು ಔಷಧವೇ ಆಹಾರವಾಗಬಾರದು’ ಎಂದರು.

ಮಧುರೈನ ಉಪ್ಪಾರ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಮಠಾಧೀಶರು ಅರಿಷಡ್ವರ್ಗಗಳ ಮೇಲೆ ಹಿಡಿತ ಸಾಧಿಸಬೇಕು. ಸಮಾಜದ ಜತೆಗೆ ತಾವೂ ಪರಿವರ್ತನೆಯಾಗಬೇಕು. ಎಲ್ಲವನ್ನೂ ಬಲ್ಲೆ ಎಂಬ ಅಹಂಕಾರ ಇರಕೂಡದು. ಸಮಾಜ ಸ್ವಾಸ್ಥ್ಯಕ್ಕಾಗಿ ಶ್ರಮಿಸಬೇಕು’ ಎಂದರು.

ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಗೋಕಾಕ್‌ನ ಶೂನ್ಯ ಸಂಪಾದನ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿದರು. ‘ಆರೋಗ್ಯವಂತ ಜೀವನ; ಶ್ರೀಮಂತ ಜೀವನ’ ಕುರಿತು ಸಂವಾದ ನಡೆಯಿತು. 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT