ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜಗಾವಿ: ಹೊಂಡ ನಿರ್ಮಾಣಕ್ಕೆ ನಿರ್ಧಾರ

Last Updated 18 ಜುಲೈ 2017, 6:59 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಜಗಾವಿಯ ಕಪಿಲೇಶ್ವರ ಮಂದಿರ ಸಮೀಪ ಗಣೇಶಮೂರ್ತಿಗಳ ವಿಸರ್ಜನೆಗೆ ಹೊಂಡ ನಿರ್ಮಿಸಲು ನಗರಪಾಲಿಕೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆ ಅನುಮೋದನೆ ನೀಡಿತು. ಮೇಯರ್‌ ಸಂಜೋತಾ ಬಾಂದೇ ಕರ ಅಧ್ಯಕ್ಷತೆಯಲ್ಲಿ ಚರ್ಚಿಸಿದ ಸದಸ್ಯರು, ಗಣೇಶಚತುರ್ಥಿಗೆ ಹೊಂಡ ಸಿದ್ಧ ಪಡಿಸಬೇಕು ಎಂದು ತಾಕೀತು ಮಾಡಿದರು.

‘ಹೊಸ ಹೊಂಡ ನಿರ್ಮಿಸಲು ವಿರೋಧವಿಲ್ಲ. ಆದರೆ, ಹೊಂಡಗಳನ್ನು ಗಣೇಶ ವಿಸರ್ಜನೆಗಷ್ಟೇ ಸೀಮಿತಗೊಳಿಸುವ ಬದಲಿಗೆ ವರ್ಷವಿಡೀ ಬಳಕೆಯಾಗುವಂತೆ ಯೋಜನೆ ರೂಪಿಸಬೇಕು. ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಡಳಿತ ಪಕ್ಷದ ಸದಸ್ಯರಾದ ರತನ್‌ ಮಾಸೇಕರ ಮತ್ತು ಕಿರಣ್‌ ಸಾಯಿನಾಕ ಒತ್ತಾಯಿಸಿದರು.

ದನಿಗೂಡಿಸಿದ ಹಿರಿಯ ಸದಸ್ಯ ರಮೇಶ ಸೊಂಟಕ್ಕಿ, ‘ಗಣೇಶ ಹಬ್ಬ ಸಮೀಪಿಸಿದ ಈ ಸಂದರ್ಭದಲ್ಲಿ ಹೊಸ ಹೊಂಡ ನಿರ್ಮಿಸುವ ಪ್ರಸ್ತಾವ ಮುಂದಿಟ್ಟಿರುವುದು ಸರಿಯಲ್ಲ. ಆರು ತಿಂಗಳು ಮೊದಲೇ ವಿಷಯ ತರಬೇಕಿತ್ತು. ತರಾತುರಿಯಲ್ಲಿ ಹೊಂಡ ನಿರ್ಮಿಸಿದರೆ ಗುಣಮಟ್ಟ ಇರುತ್ತದೆಯೇ, ನಗರದಾದ್ಯಂತ ಎಷ್ಟು ಹೊಂಡಗಳ ಅಗತ್ಯವಿದೆ ಎನ್ನುವ ಕುರಿತು ಒಮ್ಮೆಲೇ ಪ್ರಸ್ತಾವ ಸಲ್ಲಿಸಲಾಗುವುದಿಲ್ಲವೇಕೆ’ ಎಂದು ಕೇಳಿದರು.

ಉತ್ತರದ ಕಡೆಗಣನೆ: ಮಾಜಿ ಮೇಯರ್‌ ಸರಿತಾ ಪಾಟೀಲ ಮಾತನಾಡಿ, ‘ಗಣೇಶಮೂರ್ತಿಗಳ ವಿಸರ್ಜನೆಗೆ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಉತ್ತರ ಮತಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಹನುಮಾನನಗರ, ಕಂಗ್ರಾಳಿ, ಸದಾಶಿವ ನಗರ, ಹಿಂಡಲಗಾ ಕಡೆ ಹೊಂಡಗಳನ್ನು ಮಾಡಬೇಕು. ಇದರಿಂದ ದೂರದಲ್ಲಿರುವವರೂ ಕಪಿಲೇಶ್ವರ ಮಂದಿರದ ಕಡೆಗೆ ಮೂರ್ತಿಗಳನ್ನು ತರುವುದನ್ನು ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

‘ನಗರದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸಲು ಅಗತ್ಯವಾದ ಮಣ್ಣು ದೊರೆಯುವಂತೆಯೂ ನೋಡಿಕೊಳ್ಳಬೇಕು’ ಎಂದರು.

ಪ್ರತಿಕ್ರಿಯಿಸಿದ ಮೇಯರ್‌, ‘ಈ ವಿಷಯ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗಣೇಶ ಮಂಡಳಿಗಳ ಪ್ರತಿನಿಧಿಗಳ ಸಭೆಯನ್ನು ಶೀಘ್ರವೇ ಕರೆಯಲಾಗುವುದು. ಉತ್ತರ ಮತಕ್ಷೇತ್ರದಲ್ಲಿಯೂ ಹೊಂಡಗಳನ್ನು ನಿರ್ಮಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಗುಂಡಿ– ಜನರ ಆಕ್ರೋಶ: ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚದಿರುವ ಸಂಬಂಧ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ಬೆಳಗಾವಿಯಲ್ಲಿ ತಗ್ಗುಗಳಿವೆಯೋ, ತಗ್ಗಿನಲ್ಲಿಯೇ ಬೆಳಗಾವಿ ಇದೆಯೋ ಎಂದು ಕೇಳುವಂಥ ಸ್ಥಿತಿ ಬಂದಿದೆ. ಗುಂಡಿಗಳಿಗೆ ಮಣ್ಣು ಹಾಕಿದರೆ ರಾಡಿ ಆಗುತ್ತದೆ. ವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಬೇಕು’ ಎಂದು ಸದಸ್ಯೆ ಸರಳಾ ಹೆರೇಕರ ಆಗ್ರಹಿಸಿದರು.

ಸದಸ್ಯೆ ಪುಷ್ಪಾ ಪರ್ವತರಾವ, ‘ಗಣೇಶ ಹಬ್ಬ ಸಮೀಪದಲ್ಲಿದೆ. ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಗುಂಡಿಗಳು ಉಂಟಾದವು. ಇದರಿಂದಾಗಿ ಜನರು ಜನಪ್ರತಿನಿಧಿಗಳಾದ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಸರಿಯಾಗಿ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೇಕೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಸದಸ್ಯ ದಿನೇಶ್‌ ನಾಶಿಪುಡಿ ದನಿಗೂಡಿಸಿದರು. ಮುಖ್ಯ ಎಂಜಿನಿಯರ್‌ ಆರ್.ಎಸ್‌. ನಾಯಕ, ‘ಗುಂಡಿಗಳನ್ನು ಪೇವರ್ಸ್‌ ಅಥವಾ ಕಾಂಕ್ರೀಟ್‌ನಿಂದ ಮುಚ್ಚಲಾಗುವುದು’ ಎಂದು ತಿಳಿಸಿದರು. ಉಪಮೇಯರ್‌ ನಾಗೇಶ್‌ ಮಂಡೋಳ್ಕರ್‌, ಆಯುಕ್ತ ಶಶಿಧರ ಕುರೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT