ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿವಿ’ಗೆ ಹೆಚ್ಚುತ್ತಿರುವ ಬೇಡಿಕೆ

ವೈರಾಣು ಜ್ವರ ಹೆಚ್ಚುತ್ತಿರುವ ಭೀತಿ, ‘ಹಣ್ಣಿನ ಮದ್ದಿ’ಗೆ ಜನರ ಒಲವು
Last Updated 18 ಜುಲೈ 2017, 7:18 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗಿ ಭೀತಿ, ಕಿವಿ ಹಣ್ಣು ಮತ್ತು ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿದೆ.

ಕೆಲವು ತಿಂಗಳಿನಿಂದ ಡೆಂಗಿ, ಚಿಕೂನ್‌ಗುನ್ಯಾ ಮತ್ತು ಇತರೆ ಸೋಂಕು ಸಂಬಂಧಿತ ಜ್ವರದ ಹಾವಳಿ ಹೆಚ್ಚಾಗಿದೆ. ವೈದ್ಯರು ಕಿವಿ ಹಣ್ಣು, ಪಪ್ಪಾಯಿ ಸೇವಿಸುವಂತೆ ರೋಗಿಗಳಿಗೆ ಸಲಹೆ ನೀಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭರ್ಜರಿ ಬೇಡಿಕೆ ಉಂಟಾಗಿದೆ.

ಡೆಂಗಿ ಹಾಗೂ ಇತರೆ ಸೋಂಕು ಸಂಬಂಧಿತ ಜ್ವರದಿಂದ ರೋಗಿಯ ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್ಸ್‌ ಹೆಚ್ಚಳಕ್ಕೆ ಕಿವಿ ಹಣ್ಣು ಮತ್ತು ಪಪ್ಪಾಯಿ ಉಪಯುಕ್ತ ಎಂದು ಜನರು ಇದರ ಮೊರೆ ಹೋಗಿದ್ದಾರೆ.

ಮಾರುಕಟ್ಟೆಯಲ್ಲಿ ಕಿವಿ ಹಾಗೂ ಪಪ್ಪಾಯಿ ಹಣ್ಣುಗಳಿಗೆ ಕಳೆದೆರಡು ತಿಂಗಳಿನಿಂದ ಬೇಡಿಕೆ ಹೆಚ್ಚಾಗಿದೆ. ವಿವಿಧೆಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಹಣ್ಣಿನ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.


ಒಂದು ಬಾಕ್ಸ್‌ನಲ್ಲಿ 3 ಕಿವಿಹಣ್ಣುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ. ಬಾಕ್ಸ್ ಒಂದಕ್ಕೆ ₹ 80ರಿಂದ 90 ಧಾರಣೆಯಿದೆ. ಪಪ್ಪಾಯಿ ಒಂದು ಕೆಜಿಗೆ ₹ 20ರಿಂದ 30ಧಾರಣೆಯಿದೆ.

‘ಬೇರೆ ಹಣ್ಣುಗಳಿಗಿಂತ ಕಿವಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಬೆಲೆ  ಹೆಚ್ಚಿದ್ದರೂ ಗ್ರಾಹಕರು ಖರೀದಿಸುತ್ತಿದ್ದಾರೆ. ದಿನಕ್ಕೆ 10ರಿಂದ 15 ಬಾಕ್ಸ್‌ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇನೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

‘ಈ ಮೊಟ್ಟೆಯಾಕಾರದ, ಖಾಕಿ ಬಣ್ಣದ ಹಣ್ಣು ನ್ಯೂಜಿಲೆಂಡ್‌ನದ್ದು. ಇದರಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಇದರ ಸೇವನೆಯಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ, ಈ ಹಣ್ಣನ್ನು ಬಳಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ’ ಎಂದು ಕಿವಿ, ಗಂಟಲು, ಮೂಗು ತಜ್ಞ ಡಾ.ಎ.ಆರ್. ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೃದ್ರೋಗ, ರಕ್ತದೊತ್ತಡ ಹಾಗೂ ಡೆಂಗಿ ರೋಗಗಳಿಗೆ ಕಿವಿ ಹಣ್ಣು ಹಾಗೂ ಪಪ್ಪಾಯಿ ರಾಮಬಾಣ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಆದರೆ, ದೇಹದಲ್ಲಿ ವೇಗವಾಗಿ ರೋಗ ನಿರೋ ಧಕ ಶಕ್ತಿ ಹೆಚ್ಚಿಸಲು ಬೇರೆ ಹಣ್ಣಿಗಿಂತ ಈ ಹಣ್ಣು ಹೆಚ್ಚು ಪರಿಣಾಮಕಾರಿ’ ಎಂದು ಮಾಹಿತಿ ನೀಡಿದರು.

**

ಕಿವಿಹಣ್ಣಿನಿಂದಾಗಿ ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ ಹೆಚ್ಚುತ್ತದೆ ಎಂಬುದಕ್ಕೆ ಇದುವರೆಗೂ ಯಾವುದೇ ಅಧ್ಯಯನವಾಗಿಲ್ಲ. ಆದರೂ, ಇದರ ಸೇವನೆ ತಪ್ಪೇನಿಲ್ಲ
-ಡಾ.ಎ.ಆರ್.ಬಾಬು, ಕಿವಿ, ಗಂಟಲು, ಮೂಗು ತಜ್ಞ

**

ಎರಡು ತಿಂಗಳಿನಿಂದ ಈಚೆಗೆ ಕಿವಿ ಹಣ್ಣಿಗೆ ಭರ್ಜರಿ ಬೇಡಿಕೆ ಬಂದಿದೆ. ಪ್ರತಿನಿತ್ಯ 2ರಿಂದ 3ಕೆ.ಜಿ ಹಣ್ಣು ಮಾರಾಟವಾಗುತ್ತಿದೆ.
-ರಾಚಪ್ಪ, ಹಣ್ಣಿನ ವ್ಯಾಪಾರಿ

*

-ಎಸ್. ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT