ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣಕ್ಕೆ ಬಿಮ್‌ ತಂತ್ರಜ್ಞಾನ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಕಟ್ಟಡ ನಿರ್ಮಿಸುವುದು ಹಲವು ಪ್ರಯಾಸಗಳಿಂದ ಕೂಡಿದ ಕೆಲಸ. ಇಷ್ಟು ದಿನ ಸಾಂಪ್ರದಾಯಿಕ ವಿಧಾನಗಳ ಮೂಲಕ ಕಟ್ಟಡಗಳನ್ನ ನಿರ್ಮಿಸಲಾಗುತ್ತಿತ್ತು ಆದರೆ, ಈಚೆಗೆ ಕಟ್ಟಡ ನಿರ್ಮಾಣ ಕ್ಷೇತ್ರ ನಿತ್ಯ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

ಹೊಸ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಈ ಕೆಲಸ ಸುಲಭವಾಗುತ್ತಿದೆ. ಒಂದು ದಿನದಲ್ಲಿ ಮನೆ ನಿರ್ಮಿಸಲು ನೆರವಾಗುವ 3ಡಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೆಫ್‌(KEF) ಕಟ್ಟಡ ನಿರ್ಮಾಣ ಸಂಸ್ಥೆಯು ಸುಧಾರಿತ ಬಿಮ್‌ (BIM) ತಂತ್ರಜ್ಞಾನವನ್ನು ಬಳಸುತ್ತಿದೆ.

ಕಟ್ಟಡ ನಿರ್ಮಾಣ ಎಂದ ಕೂಡಲೇ ನೆಲ ಅಗೆಯುವುದು, ಬುನಾದಿ ಹಾಕುವುದು, ಇಟ್ಟಿಗೆ ಜೋಡಿಸುವುದು, ನೂರಾರು ಕೂಲಿಗಳ ಶ್ರಮ ನೆನಪಿಗೆ ಬರುತ್ತದೆ.‌ ಆದರೆ, ಬಿಮ್‌ ತಂತ್ರಜ್ಞಾನ ಈ ಎಲ್ಲ ಸಮಸ್ಯೆಗಳನ್ನು ದೂರವಾಗಿಸಲಿದೆ ಎನ್ನುತ್ತಾರೆ ಕೆಫ್‌ನ ಚೇರ್ಮನ್‌ ಫೈಜಲ್‌ ಇ. ಕೊಟ್ಟಿಕೊಳ್ಳೊನ್‌.

'ಬಿಮ್‌ ತಂತ್ರಜ್ಞಾನ 3ಡಿ ತಂತ್ರಜ್ಞಾನಕ್ಕಿಂತಲೂ ಸುಧಾರಿತ ತಂತ್ರಜ್ಞಾನ. ಇದರಲ್ಲಿ ನಾವು ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ಅಥವಾ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕಂಪ್ಯೂಟರ್‌ನಲ್ಲಿ ತಂತ್ರಾಂಶದಲ್ಲೇ ಪ್ರೊಗ್ರಾಮ್‌ ಮಾಡುತ್ತೇವೆ. ಇದನ್ನು ಬಳಸಿಕೊಂಡು ಪ್ರಾಜೆಕ್ಟ್‌ನ ರೂಪುರೇಷೆಗಳನ್ನು ತಯಾರಿಸುತ್ತೇವೆ. ಈ ಆರಂಭಿಕ ಕೆಲಸವನ್ನು ಸರಿಯಾಗಿ ಮಾಡಿದರೆ ಸಾಕು, ಕಟ್ಟಡ ನಿರ್ಮಿಸುವುದು ತೀರಾ ಸುಲಭ ಎನ್ನುತ್ತಾರೆ' ಅವರು.

‘3ಡಿ ತಂತ್ರಜ್ಞಾನದಲ್ಲಿ ಕಟ್ಟಡದ ರೂಪುರೇಷೆಯನ್ನು ನಿರ್ಮಾಣಕ್ಕೂ ಮೊದಲೇ ಕಾಣಿಸುವಂತೆ ಮಾಡಲಾಗುತ್ತದೆ. 4ಡಿ ತಂತ್ರಜ್ಞಾನವು 3ಡಿ ತಂತ್ರಜ್ಞಾನಕ್ಕಿಂತ ಸುಧಾರಿತ ತಂತ್ರಜ್ಞಾನ. ಇದು ಕೂಡ ಕಟ್ಟಡ ನಿರ್ಮಾಣವನ್ನು ತುಂಬಾ ಸುಲಭವಾಗಿಸುತ್ತದೆ. ಆದರೆ ಬಿಮ್‌ ತಂತ್ರಜ್ಞಾನ 7ಡಿ ತಂತ್ರಜ್ಞಾನವಾಗಿದ್ದು, ಇದು ಕೇವಲ ಕಟ್ಟಡ ನಿರ್ಮಿಸುವುದು ಅಷ್ಟೇ ಅಲ್ಲದೆ ಅಗತ್ಯ ಸೌಕರ್ಯಗಳ ನಿರ್ವಹಣೆಯನ್ನು ಮಾಡುತ್ತದೆ.

'ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೂ ಇದಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವ ವೈರ್‌ಗಳು, ಸ್ವಿಚ್‌ಬೋರ್ಡ್‌ಗಳು, ನೀರು ಪೂರೈಸುವ ಕೊಳವೆಗಳು ಇತ್ಯಾದಿಗಳನ್ನು ಕಟ್ಟಡ ನಿರ್ಮಿಸುವ ಮೊದಲೇ ಸಂಯೋಜಿಸಲಾಗಿರುತ್ತದೆ. ಕಟ್ಟಡ ನಿರ್ಮಿಸಿದ ಹತ್ತು ವರ್ಷಗಳ ನಂತರ ವಿದ್ಯುತ್‌ ತಂತಿಗಳು ಅಥವಾ ಕೊಳವೆಗಳು ಸ್ವಿಚ್‌ಬೋರ್ಡ್‌ಗಳ ಸಮಸ್ಯೆ ಕಂಡುಬಂದರೆ ಕೂಡಲೇ ಸೂಚನೆ ನೀಡುವಂತೆ ವ್ಯವಸ್ಥೆಯೂ ಇದರಲ್ಲಿ ಇದೆ.

ಇದಕ್ಕಾಗಿ ಗೋಡೆಗಳನ್ನು ಒಡೆಯುವ ಅಗತ್ಯವಿಲ್ಲ. ಅವುಗಳನ್ನು ಬದಲಾಯಿಸುವುದು ಸಹ ತೀರಾ ಸುಲಭ. ಆದರೆ ಈ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿಲ್ಲ. ಇದಕ್ಕೆ ನುರಿತ ತಂತ್ರಜ್ಞರ ನೆರವೂ ಬೇಕಾಗುತ್ತದೆ. ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಬಿಮ್‌ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಿಸಿಕೊಳ್ಳಲು ಕೆಫ್‌ ಸಂಸ್ಥೆಯು 8 ಕಾರ್ಖಾನೆಗಳನ್ನು ಆರಂಭಿಸಿದೆ. ಇಲ್ಲಿ ಕಟ್ಟಡದ ಗೋಡೆಗಳು, ಕಿಟಕಿಗಳು, ಒಳಾಂಗಣ ವಿನ್ಯಾಸ, ಟೈಲ್ಸ್‌, ವಿದ್ಯುತ್‌ ದೀಪಗಳ ಅಳವಡಿಕೆ, ಮೇಲ್ಚಾವಣಿ ಮತ್ತು ನೆಲಮಹಡಿ ಕಟ್ಟಡಗಳಿಗಾಗಿ ತಳಪಾಯವನ್ನೂ ಸಹ ತಯಾರಿಸಲಾಗುತ್ತದೆ.

'ಇನ್ನೂ ವಿಶೇಷ ಏನೆಂದರೆ ಈ ಎಲ್ಲ ಕೆಲಸಗಳಿಗಾಗಿ ರೋಬೊಟಿಕ್‌ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ಕಟ್ಟಡ ನಿರ್ಮಿಸಬಹುದು. ಇದಕ್ಕಾಗಿ ಕಂಪ್ಯೂಟರ್‌ನಲ್ಲಿ ಪ್ರೊಗ್ರಾಮಿಂಗ್‌ ಮಾಡುವುದಷ್ಟೇ ತಂತ್ರಜ್ಞರ ಕೆಲಸ.

‘ಕಟ್ಟಡದ ಗೋಡೆಗಳ ಅಳತೆಯನ್ನು ಪ್ರೊಗ್ರಾಮಿಂಗ್ ಮಾಡಿದರೆ ಸಾಕು. ಕಿಟಕಿಗಳು ಎಲ್ಲಿ ಅಳವಡಿಸಬೇಕು ಎಂಬುದನ್ನೂ ರೋಬೊಟ್‌ಗಳೇ ನಿರ್ಧರಿಸುತ್ತವೆ. ಇದಲ್ಲದೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಗಾಜು ಅಥವಾ ಅವರು ಬೇಡಿದ ಫ್ರೇಮ್‌ಗಳನ್ನು ಅಳವಡಿಸಲಾಗುತ್ತದೆ.

ಕಟ್ಟಡಕ್ಕೆ ತಕ್ಕಂತೆ ಗೋಡೆಗಳಲ್ಲಿ ಯಾವ ರೀತಿಯ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕು. ಎಷ್ಟು ಸಿಮೆಂಟ್‌ ಉಪಯೋಗಿಸಬೇಕು, ಕಾಂಕ್ರಿಟ್ ಹೇಗಿರಬೇಕು ಹೀಗೆ ಎಲ್ಲವನ್ನೂ ರೋಬೊಟ್‌ಗಳೇ ನೋಡಿಕೊಳ್ಳುತ್ತವೆ.ಇದೆಲ್ಲಾ ಬಿಮ್‌ ತಂತ್ರಜ್ಞಾನದಲ್ಲೇ ಸಾಧ್ಯ’ ಎಂದು ಕೊಟ್ಟಿಕೊಳ್ಳೋನ್ ತಿಳಿಸುತ್ತಾರೆ.

‘ಇದಲ್ಲದೇ ಬೆಂಗಳೂರಿನಲ್ಲಿ 198 ವಾರ್ಡ್‌ಗಳಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟಿನ್‌ಗಳ ನಿರ್ಮಾಣಕ್ಕೂ ಬಿಮ್‌ ತಂತ್ರಜ್ಞಾನವನ್ನೇ ಬಳಸುತ್ತಿದ್ದೇವೆ. ಕ್ಯಾಂಟಿನ್‌ ನಿರ್ಮಾಣವಾಗುವ ಸ್ಥಳದಲ್ಲಿ ನೆಲವನ್ನು ಸಮತಟ್ಟು ಮಾಡುವುದಷ್ಟೇ ಕೆಲಸ, ಬುನಾದಿಯಿಂದ ಹಿಡಿದು ಮೇಲ್ಚಾವಣಿವರೆಗೆ ಎಲ್ಲ ಕೆಲಸವನ್ನೂ ಘಟಕಗಳಲ್ಲೇ ಮಾಡಲಾಗುತ್ತದೆ’ ಎಂದೂ ಅವರು ವಿವರಿಸುತ್ತಾರೆ.

***

ರಾಜ್ಯದಲ್ಲೂ ಘಟಕ ಸ್ಥಾಪನೆ

‘ದೇಶದ ಹಲವು ನಗರಗಳಲ್ಲಿಯೂ ನಮ್ಮ ಸಂಸ್ಥೆ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ದೊಡ್ಡ ಘಟಕ ಇದೆ. ಇಂತಹ ಘಟಕವನ್ನು ಕರ್ನಾಟಕದಲ್ಲಿಯೂ ಸ್ಥಾಪಿಸುವ ಉದ್ದೇಶವಿದೆ. ಇದಕ್ಕಾಗಿ ಸರ್ಕಾರದ ಜತೆ ಮಾತುಕತೆ ನಡೆಸುತ್ತಿದ್ದೇವೆ. ಈಗಾಗಲೇ ನಾವು ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ಅಲ್ಲಿಯ 65ಕ್ಕೂ ಹೆಚ್ಚು ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. ಅದೇ ರೀತಿ ರಾಜ್ಯದಲ್ಲೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಜೊತೆ ಚರ್ಚಿಸುತ್ತಿದ್ದೇವೆ’ ಎಂದು ಫೈಜಲ್‌ ಇ ಕೊಟ್ಟಿಕೊಳ್ಳೊನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT