ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳುವ ‘ಓಳ್‌ ಮುನ್ಸಾಮಿ’

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

‘‘ಈಗ ಕಾಲ ಹೇಗಾಗಿದೆ ಅಂದ್ರೆ ಯಾರಾದ್ರೂ ಸತ್ಯ ಹೇಳಿದ್ರೆ ’ಓಳ್‌ ಬಿಡ್ತಿದ್ದಾನೆ’ ಅಂತಾರೆ. ಅದೇ ಸುಳ್ಳು ಹೇಳಿದ್ರೆ ಸತ್ಯ ಅಂತ ನಂಬ್ತಾರೆ‘‘ ಎಂದು ಪ್ರಚಲಿತ ಪರಿಸ್ಥಿತಿಯನ್ನು ತುಸು ಗಂಭೀರವಾಗಿಯೇ ಹೇಳಿದರು ಆನಂದ್‌ಪ್ರಿಯಾ. ಇದು ಜನರ ಮನಸ್ಥಿತಿಯ ಕುರಿತಾಗಿ ಅವರ ಕಮೆಂಟ್‌ ಅಷ್ಟೇ ಅಲ್ಲ, ಇದೇ ಎಳೆಯನ್ನು ಇಟ್ಟುಕೊಂಡು ಅವರೊಂದು ಸಿನಿಮಾವನ್ನೂ ಮಾಡಿದ್ದಾರೆ. ಅದರ ಹೆಸರೂ ‘ಓಳ್‌ ಮುನ್ಸಾಮಿ’.

‘ಚೌಕ’ ಚಿತ್ರದ ಮೂಲಕ ಭಿನ್ನವಾಗಿ ರೀ ಎಂಟ್ರಿ ಕೊಟ್ಟಿದ್ದ ಹಿರಿಯ ನಟ ಕಾಶೀನಾಥ್‌ ಈ ಚಿತ್ರದಲ್ಲಿ ಮುನ್ಸಾಮಿಯಾಗಿ ಓಳ್‌ ಬಿಡುತ್ತಿದ್ದಾರೆ. ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಅದಕ್ಕೆ ಸೂಕ್ತವಾದ ಚಿತ್ರೀಕರಣ ಸ್ಥಳಗಳನ್ನು ಅರಸಿಕೊಂಡು ಅಡ್ಡಾಡುತ್ತಿದ್ದಾಗ ಭೇಟಿ ನೀಡಿದಲ್ಲೆಲ್ಲ ಒಬ್ಬೊಬ್ಬ ಓಳ್‌ ಬಿಡುವ ಜನರು ಕಾಣಿಸಿಕೊಂಡರಂತೆ. ಇದನ್ನೇ ಸಿನಿಮಾಕ್ಕೆ ಬಳಸಿಕೊಂಡರೆ ಹೇಗೆ ಎಂಬ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದ್ದೇ ’ಓಳ್‌ ಮುನ್ಸಾಮಿ’ ರೂಪುಗೊಂಡಿದೆ.

ಈಗಾಗಲೇ ಸಕಲೇಶಪುರ, ಬೇಲೂರು, ಗುತ್ತಿ, ಬೇವಿನಗುಡ್ಡ ಮುಂತಾದ ಕಡೆಗಳಲ್ಲಿ 28ದಿನಗಳ ಚಿತ್ರೀಕರಣ ಮುಗಿದಿದೆ. ಕಾಶೀನಾಥ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ತಂಡ ವಿಶ್ವಾಸವನ್ನು ಹೆಚ್ಚಿಸಿದೆ. ‘ನಮ್ಮ ಸುತ್ತಲಿನ ಸಮಾಜದಲ್ಲಿ ದಿನನಿತ್ಯ ಕಾಣುವ ನೂನ್ಯತೆಗಳನ್ನು ಸತ್ಯ ಹೇಳುವ ಮೂಲಕವೇ ತಿದ್ದುವ ವಿಶಿಷ್ಟ ವ್ಯಕ್ತಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ’ ಎಂದು ನಿರ್ದೇಶಕರೇ ಕಾಶೀನಾಥ್‌ ಪಾತ್ರದ ಬಗ್ಗೆಯೂ ವಿವರಿಸಿದರು.

’ಅನುಭವ, ಅಜಗಜಾಂತರ, ಅನಂತನ ಅವಾಂತರ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಚೌಕ’ ಸಿನಿಮಾಗಳಿಗಿಂತ ಭಿನ್ನ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂಥ ರೂಪದಲ್ಲಿ ನಾನು ಇದೇ ಮೊದಲ ಬಾರಿಗೆ ಕಾಣಿಸಕೊಳ್ಳುತ್ತಿರುವುದು.

ಪ್ರಸ್ತುತ ಸಮಾಜಕ್ಕೆ ತುಂಬ ಅನ್ವಯವಾಗುವಂಥ ಪಾತ್ರ ಇದು’ ಎಂದು ಹೇಳಿದರು ಕಾಶೀನಾಥ್‌. ಅವರ ಜತೆ ಸದಾ ಗುದ್ದಾಡುವ ನಾಸ್ತಿಕ ಹುಡುಗನ ಪಾತ್ರದಲ್ಲಿ ನಿರಂಜನ ದೇಶಪಾಂಡೆ ನಟಿಸಲಿದ್ದಾರೆ. ಅಖಿಲಾ ಪ್ರಕಾಶ್‌ ಚಿತ್ರದ ನಾಯಕಿ. ರಂಗಭೂಮಿ ಕಲಾವಿದ ಶಿವಮೊಗ್ಗ ರಾಮಣ್ಣ ಕೂಡ ನಟಿಸಿದ್ದಾರೆ. ಚಿತ್ರದಲ್ಲಿನ ಮೂರು ಹಾಡುಗಳಿಗೆ ಸತೀಶ್‌ಬಾಬು ಸಂಗೀತ ಹೊಸೆದಿದ್ದಾರೆ.

ಸಮಾನ ಮನಸ್ಕರು ಸೇರಿಕೊಂಡು ಕಟ್ಟಿಕೊಂಡ ’ಸಮೂಹ ಟಾಕೀಜ್‌’ ಈ ಚಿತ್ರಕ್ಕೆ ಹಣ ಹೂಡಿದೆ. ಆಗಸ್ಟ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT