ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಭೋವಿ ಸಮಾವೇಶ ಆಯೋಜನೆ

Last Updated 19 ಜುಲೈ 2017, 5:14 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇಶದ ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಭೋವಿ ಸಮುದಾಯದವರನ್ನು ಒಂದೆಡೆ ಒಟ್ಟಾಗಿ ಸೇರಿಸುವ ಉದ್ದೇಶದಿಂದ ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ನಗರದ ಹೊರವಲಯದಲ್ಲಿ ಇರುವ ಭೋವಿ ಗುರುಪೀಠದಲ್ಲಿ ಮಂಗಳವಾರ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸೇವಾದೀಕ್ಷೆಯ 19ನೇ ವಾರ್ಷಿಕೋತ್ಸವ, ಪಟ್ಟಾಧಿಕಾರದ ಎಂಟನೇ ವಾರ್ಷಿಕೋತ್ಸವ ಮತ್ತು 32ನೇ ವಸಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಭೋವಿ ಜನೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಭೋವಿ ಸಮುದಾಯದಲ್ಲಿ ಈ ಮೊದಲು ಸಂಘಟನೆಯ ಕೊರತೆ ಇತ್ತು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾಧ್ಯಕ್ಷರಾದ ಮೇಲೆ ಚಿಕ್ಕಪುಟ್ಟ ಗೊಂದಲವನ್ನೆಲ್ಲ ನಿವಾರಿಸಿ ಜನಾಂಗವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನೇತೃತ್ವದಲ್ಲೇ ಸಮುದಾಯದ ಸಮಾವೇಶ ನಡೆಸಲಾಗುವುದು’ ಎಂದರು.

‘ಸ್ವಾಮೀಜಿ ಅಕ್ಟೋಬರ್‌ನಿಂದ ದೇಶದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಸದ್ಯದಲ್ಲೇ ಸಿದ್ದರಾಮೇಶ್ವರ ಜ್ಯೋತಿ ಯಾತ್ರೆ ಆರಂಭಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ಈ ಯಾತ್ರೆಯೂ ಮುಂದಿನ ಜ.14ರ ಸಂಕ್ರಾಂತಿಯಂದು ಸಮಾರೋಪಗೊಳ್ಳಲಿದೆ. ಮಹಾರಾಷ್ಟ್ರ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯ
ಗಳಲ್ಲಿ ನಮ್ಮ ಸಮುದಾಯ ಹಿಂದುಳಿದಿದೆ. ಅಲ್ಲಿಯೂ ಅಭಿವೃದ್ಧಿ ಕೈಗೊಳ್ಳಲು ಆಯಾ ಸರ್ಕಾರಗಳಿಗೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ರಾಜ್ಯ ಸರ್ಕಾರ ಭೋವಿ ಅಭಿವೃದ್ಧಿ ನಿಗಮಕ್ಕೆ ನೀಡಿರುವ ₹ 60 ಕೋಟಿ ಅನುದಾನ ಸಾಲದು. ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಜತೆಗೆ ಮುಂದಿನ ದಿನಗಳಲ್ಲಿ ಈ ನಿಗಮದಿಂದಲೇ  ಪ್ರತ್ಯೇಕ ಅರ್ಜಿಗಳನ್ನು ಆಹ್ವಾನಿಸಿ ಸಮುದಾಯಕ್ಕೆ ಸರ್ಕಾರ ಸೌಲಭ್ಯ ನೀಡಬೇಕು ಎಂದು ಅವರು ಮನವಿ ಮಾಡಿದರು.

‘ದೇಶದ ವಿವಿಧ ರಾಜ್ಯಗಳಲ್ಲಿ ಭೋವಿ ಸಮುದಾಯ ತೀರಾ ಸಂಕಷ್ಟದಲ್ಲಿದೆ. ಎಲ್ಲ ರಾಜ್ಯಗಳಲ್ಲಿ ಇರುವ ನಮ್ಮ ಸಮುದಾಯದವರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಬೇಕಿದೆ’ ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಯೋಗಗುರು ವಚನಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಬಸವನಾಗೀದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮಾಜಿ ಶಾಸಕ ಎಂ.ಚಂದ್ರಪ್ಪ, ಅಖಿಲ ಭಾರತ ಭೋವಿ ಸಮುದಾಯದ ಅಧ್ಯಕ್ಷ ರವಿ ಮಾಕಳಿ, ವೈ.ರಾಮಪ್ಪ, ಎಚ್.ಆನಂದಪ್ಪ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಮುದಾಯದ ಅನೇಕ ಮುಖಂಡರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT