ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ, ಕಾಲುವೆ ಸೇರುವ ಕೈಗಾರಿಕಾ ತ್ಯಾಜ್ಯ

Last Updated 19 ಜುಲೈ 2017, 5:28 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮಲಿನ ನೀರು ಭದ್ರಾ ನಾಲೆ ಹಾಗೂ ಸುತ್ತಲಿನ ಕೆರೆಗಳಿಗೆ ಸೇರು ತ್ತಿರುವುದು ಬೆಳಕಿಗೆ ಬಂದಿದೆ. ಕೈಗಾರಿಕೆಗಳ ತ್ಯಾಜ್ಯ ನೀರು ಕೆರೆ, ಕಾಲುವೆ ಸೇರುತ್ತಿರುವ ಕಾರಣ ನೀರು ಬಳಸುವ ಜನ, ಜಾನುವಾರು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ದೂರುಗಳಿಗೆ ಸ್ಪಂದಿಸಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಂಗಳವಾರ ನಿದಿಗೆಯ ಉಚ್ಚಂಗಿ ಕೆರೆ, ಭದ್ರಾ ಕಾಲುವೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಪಾಯಕಾರಿ ತ್ಯಾಜ್ಯದ ನೀರು ನೇರವಾಗಿ ಕೆರೆ, ಕಾಲುವೆ ಸೇರುತ್ತಿರುವ ಕಾರಣ  ಕೃಷಿ ಇಳುವರಿ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬೆಳೆಗಳು ಆರಂಭದ ಹಂತದಲ್ಲೇ ಸುಟ್ಟು ಹೋಗುತ್ತಿದೆ. ನೀರು ಸೇವಿಸುವ ಜಾನುವಾರು ಹಲವು ರೋಗಗಳಿಗೆ ತುತ್ತಾಗುತ್ತಿವೆ. ಹಲವು ಗ್ರಾಮಗಳ ಜನರು ಭದ್ರಾ ನಾಲೆಯ ನೀರನ್ನೇ  ಕುಡಿಯಲು ಬಳಸುತ್ತಿದ್ದಾರೆ. ನೀರು ಕುಡಿದ ನಾಗರಿಕರ ಆರೋಗ್ಯದ ಮೇಲೂ  ಪರಿಣಾಮ ಬೀರಿದೆ ಎಂದು ಸ್ಥಳೀಯರು ಆರೋಪಿಸಿದರು.

ವಿಷಕಾರಿ ಅಂಶ ನೀರಿಗೆ ಸೇರ್ಪಡೆ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಕೈಗಾರಿಕೆಗಳಿವೆ. ಕೆಲವು ಕೈಗಾರಿಕೆಗಳು ರಾಸಾಯನಿಕ ಬಳಕೆ ಮಾಡುತ್ತಿವೆ. ಬಳಕೆಯಾದ ನಂತರದ ತ್ಯಾಜ್ಯದ ವಿಷಯುಕ್ತ ನೀರು ಒಳಚರಂಡಿ ಮೂಲಕ ನೇರವಾಗಿ ಭದ್ರಾ ನಾಲೆ, ಕೆರೆ, ಹಳ್ಳ, ಕೊಳ್ಳಗಳಿಗೆ ಸೇರ್ಪಡೆಯಾಗುತ್ತಿದೆ. ನಿಯಮದ ಪ್ರಕಾರ ಯಾವುದೇ ನದಿ, ಕೆರೆ, ಕಾಲುವೆಗೆ ಮಲಿನ ನೀರನ್ನು ನೇರವಾಗಿ ಹರಿಸಲು ಅವಕಾಶವಿಲ್ಲ. 

ಬಳಕೆ ಮಾಡಿದ ನೀರು ವೈಜ್ಞಾನಿಕವಾಗಿ ಸಂಸ್ಕರಿಸಿದ ನಂತರವೇ ಹೊರಗೆ ಹರಿಸಬೇಕು. ಆದರೆ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೀರು ಶುದ್ಧೀಕರಣ ಘಟಕ ಇಲ್ಲ ಎಂದು ಸ್ಥಳೀಯರು ದೂರಿದರು.

ತಕ್ಷಣವೇ ನಿಲ್ಲಿಸಲು ಸೂಚನೆ: ಕೈಗಾರಿಕೆಗಳಲ್ಲಿ ಬಳಸಿದ ಕಲ್ಮಶ ನೀರು ಸಂಸ್ಕರಿಸದೇ ನೇರವಾಗಿ ಕೆರೆಗೆ ಹರಿಸಬಾರದು. ತಕ್ಷಣವೇ ನಿಲ್ಲಿಸಬೇಕು ಎಂದು ಕಾಡಾ ಅಧ್ಯಕ್ಷ ಸುಂದರೇಶ್  ಕೈಗಾರಿಕೆಗಳ ಮುಖ್ಯಸ್ಥರಿಗೆ ಸೂಚಿಸಿದರು.

ರಾಸಾಯನಿಕ ನೀರು ಸಂಸ್ಕರಿಸಿ ನದಿ, -ಕಾಲುವೆಗಳಿಗೆ ಹರಿಸಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್‌ ತೀರ್ಪು ನೀಡಿವೆ.ಆದರೂ ಹಲವು ಕೈಗಾರಿಕೆಗಳುನಿಯಮ ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಚ್ಚಂಗಿ ಕೆರೆಯ ಸುತ್ತಲಿನ ಗ್ರಾಮಗಳ ಜನರು ಕುಡಿಯಲು ಈ ನೀರ ನ್ನೇ ಬಳಸುತ್ತಿದ್ದಾರೆ. ನಿದಿಗೆ ಕೈಗಾರಿಕಾ ವಲಯದಲ್ಲಿ ಕೈಗಾರಿಕೆ ಸ್ಥಾಪಿಸಿದವರು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ನೀರು ಸಂಸ್ಕರಣಾ ಘಟಕ ಅಳವಡಿಸಿ ಕೊಳ್ಳಬೇಕು ಎಂದು  ಸೂಚಿಸಿದರು.

ವಿಷಪೂರಿತ ನೀರು ಬಳಕೆ ಪರಿಣಾಮ ರೈತರು ಬೆಳೆದ ಬೆಳೆಗೆ ಹಾನಿಯಾಗುತ್ತಿದೆ. ಕಲುಷಿತ ನೀರು ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜತೆ ಶೀಘ್ರ  ಸಭೆ ನಡೆಸಲಾಗುವುದು ಎಂದು ರೈತರಿಗೆ ಭರಸವೆ ನೀಡಿದರು.

ಕೆರೆಯ ಪ್ರದೇಶ ಹಸಿರಾಗಿರುವಂತೆ ನೋಡಿಕೊಳ್ಳಲು ಗಿಡಗಳನ್ನು ಬೆಳೆಸಬೇಕು ಹಾಗೂ ಕೆರೆ ಸ್ವಚ್ಛತೆಗೆ ಕಾರ್ಯಯೋಜನೆ ರೂಪಿಸುವಂತೆ ಶಾಹಿ ಗಾರ್ಮೆಂಟ್ಸ್‌ ಆಡಳಿತಾಧಿಕಾರಿ ಶರತ್‌ಚಂದ್ರ, ಹಿರಿಯ ವ್ಯವಸ್ಥಾಪಕ ಅರವಿಂದ್‌ ಅವರಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT