ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನ ಪ್ರೀತಿ ಎಂದಿಗೂ ಬಾಡದಿರಲಿ’

Last Updated 19 ಜುಲೈ 2017, 5:50 IST
ಅಕ್ಷರ ಗಾತ್ರ

ದಾವಣಗೆರೆ: ಮಹಿಳೆ ಹಲವು ಕಾರಣಗಳಿಂದಾಗಿ ಏಕಾಂಗಿಯಾಗಿ ಬದುಕಬೇಕಾದ ಸನ್ನಿವೇಶ ಎದುರಾಗುತ್ತದೆ. ಏಕಾಂಗಿತನವನ್ನು ಏಕಾಂತವನ್ನಾಗಿ ಬದಲಿಸಿಕೊಂಡರೆ ಜೀವನದಲ್ಲಿ ಸಂತೋಷ ಉಕ್ಕುತ್ತದೆ ಎಂದು ಹಾಸ್ಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಹೇಳಿದರು.

ಸ್ನೇಹ ಮಹಿಳಾ ಬಳಗ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಹಿಳೆಯ ಬದುಕು ಏಕತಾನತೆಯದ್ದು. ಇದರಿಂದ ಖಿನ್ನತೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ, ಸಣ್ಣ ಸಣ್ಣ ಸಂಗತಿಗಳಲ್ಲೂ ಖುಷಿಯನ್ನು ಹುಡುಕುವುದನ್ನು ಕಲಿಯಬೇಕು’ ಎಂದರು.

‘ಬಿಡುವಿನ ವೇಳೆಯಲ್ಲಿ ಹಾಡು, ನೃತ್ಯ, ಮಿಮಿಕ್ರಿ ಹೀಗೆ ನಮ್ಮೊಳಗಿನ ಲೋಕವನ್ನು ತೆರೆದುಕೊಳ್ಳುವ ಮೂಲಕ ನಮ್ಮ ಸಂತೋಷದ ಮೂಲಗಳನ್ನು ಕಂಡುಕೊಳ್ಳಬೇಕು. ಸುಖ, ಸಂತೋಷವನ್ನು ಮತ್ತೊಬ್ಬರಿಂದ ನಿರೀಕ್ಷಿಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

‘ಪ್ರಸ್ತುತ ಧಾರಾವಾಹಿಗಳು ಎಲ್ಲರನ್ನೂ ಆವರಿಸಿಕೊಂಡಿವೆ. ಮಹಿಳೆಯರನ್ನು ಎಷ್ಟು ಸಾಧ್ಯವೊ ಅಷ್ಟು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ತಲೆಮಾರಿನ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಆತಂಕ ಕಾಡುತ್ತಿದೆ’ ಎಂದರು.

ಬದುಕಿನಲ್ಲಿ ಅಧ್ಯಾತ್ಮ ಹಾಗೂ ಹಾಸ್ಯ ಬಹಳ ಮುಖ್ಯ. ಅಧ್ಯಾತ್ಮ ಸದಾ ರಕ್ಷಣೆಯ ಭಾವ ಮೂಡಿಸಿದರೆ, ಹಾಸ್ಯ ಎಂತಹ ಕಠಿಣ ಸಂದರ್ಭದಲ್ಲೂ ಜೀವನ ಪ್ರೀತಿಯನ್ನು ಬಾಡಲು ಬಿಡುವುದಿಲ್ಲ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತದೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಒಳ್ಳೆಯ ಮನಸ್ಸುಗಳು ಒಂದೆಡೆ ಸೇರಿದರೆ ಉತ್ತಮ ಆಲೋಚನೆಗಳು ಮೊಳೆಯುತ್ತವೆ. ಅರಿವಿರುವಂತಹ ಮಹಿಳೆಯರು ಕಟ್ಟಿಕೊಂಡಿರುವ ಸ್ನೇಹ ಬಳಗ ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸಲಿ ಎಂದು ಆಶಿಸಿದರು. ಸ್ನೇಹ ಮಹಿಳಾ ಬಳಗದ ಗೌರವ ಅಧ್ಯಕ್ಷೆ ಮಂಜುಳಾ ನಿಂಗಪ್ಪ, ಅಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ, ಕಾರ್ಯದರ್ಶಿ ಶೋಭಾ ರವಿ, ಖಜಾಂಚಿ ಯಶೋದಾ ವಿಶ್ವನಾಥ್‌  ಇದ್ದರು.

ವಿಮಾನಗಳಾಗುವ ಬಸ್‌ಗಳು!
‘ಸಮಾರಂಭವೊಂದರಲ್ಲಿ ಸ್ವಾಮೀಜಿಯೊಬ್ಬರು ಮಾತನಾಡುತ್ತ. ಈಚೆಗೆ ದೇವರನ್ನು ಸ್ಮರಿಸುವುದು ಕಡಿಮೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರೂ ದೇವರನ್ನು ನೆನೆಯುತ್ತಾರೆ.

ಕಾರಣ ಇಲ್ಲಿನ ಖಾಸಗಿ ಬಸ್‌ ಚಾಲಕರು. ಮಂಗಳೂರಿನಿಂದ ಉಡುಪಿಗೆ ಬಸ್‌ ಹತ್ತಿದರೆ, ಬಸ್‌ಗಳು ವಿಮಾನಗಳಾಗುತ್ತವೆ. ಚಾಲಕರು ಪೈಲಟ್‌ಗಳಾಗುತ್ತಾರೆ. ಪ್ರಯಾಣಿಕರು ಮಾತ್ರ ಸ್ಥಳ ತಲುಪವವರೆಗೂ ಕಾಪಾಡುವಂತೆ ಎಲ್ಲ ಧರ್ಮದ  ದೇವರನ್ನು ಸ್ಮರಿಸುತ್ತಲೇ ಇರುತ್ತಾರೆ’ ಎಂದು ಹೇಳಿದೆ’ ಎಂದು  ಹೆಗಡೆ ಚಟಾಕಿ ಹಾರಿಸಿದರು.

‘ದಾವಣಗೆರೆ ಮೇಲೆ ಪ್ರೀತಿ ಹೆಚ್ಚು’
‘ದಾವಣಗೆರೆ ಮೇಲೆ ತುಸು ಪ್ರೀತಿ ಹೆಚ್ಚು. ಕಾರಣ, ನನ್ನ ಮದುವೆ ನಿಶ್ಚಯವಾಗಿದ್ದು ಇಲ್ಲಿಯೇ. ಮೊದಲಬಾರಿಗೆ ವಧು ನೋಡುವ ಶಾಸ್ತ್ರದಲ್ಲಿ ವರನ ಸಂಬಂಧಿಯೊಬ್ಬರು ನನ್ನ ನೀಳ ಜಡೆ ಪರೀಕ್ಷಿಸಲು ಎಳೆದಿದ್ದರು. ಜಡೆ ನನ್ನ ಸ್ವಾಭಿಮಾನದ ಸಂಕೇತ ಎಂದು ಗಂಡನ್ನೇ ತಿರಸ್ಕರಿಸಿದೆ. ನಂತರ ಸಣ್ಣ ಕೋರಿಕೆಗಳನ್ನು ಒಪ್ಪಿಕೊಂಡ ಮತ್ತೊಬ್ಬ ಬ್ಯಾಂಕ್‌ ಉದ್ಯೋಗಿಯನ್ನು ಮದುವೆಯಾಗಿ ಸುಖ ಜೀವನ ಸಾಗಿಸುತ್ತಿದ್ದೇನೆ’  ಎಂದು ಭುವನೇಶ್ವರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT