ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್ ಮಂಡಳಿ ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧ

Last Updated 19 ಜುಲೈ 2017, 5:56 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ವಕ್ಫ್ ಮಂಡಳಿಯ ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಆಸ್ತಿಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವ ತನ್ವೀರ್‌ ಸೇಠ್ ತಿಳಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿದ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ, ಮುಸ್ಲಿಂ ಹಾಸ್ಟೆಲ್‌ನ ಭೋಜನಾ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ದ್ವಿತೀಯ ಸುತ್ತಿನ ಸರ್ವೆ ಕಾರ್ಯದಲ್ಲಿ ಒಟ್ಟು 425 ವಕ್ಫ್ ಆಸ್ತಿಗಳಲ್ಲಿ 413ರ ಸರ್ವೆ ಕಾರ್ಯ ಮುಕ್ತಾಯಗೊಂಡಿದೆ. ವಕ್ಫ್ ಆಸ್ತಿಗಳ ಇಂಡೀಕರಣ ಕಾರ್ಯವೂ ಪ್ರಗತಿಯಲ್ಲಿದ್ದು, ಈಗಾಗಲೇ 464 ಆಸ್ತಿಗಳ ಇಂಡೀಕರಣ ಆಗಿದೆ. ಉಳಿದ 269 ಆಸ್ತಿಗಳ ಇಂಡೀಕರಣ ಕಾರ್ಯ ತಹಶೀಲ್ದಾರ್ ಕಾರ್ಯಾಲಯ, ತಾಲ್ಲೂಕು ಪಂಚಾಯ್ತಿ, ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಖಬರಸ್ಥಾನಗಳ ಕಾಂಪೌಂಡ್ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ₹45 ಕೋಟಿ ಅನುದಾನ ಮಂಜೂರು ಮಾಡಿದೆ. ಕಳೆದ ವರ್ಷ ₹79 ಕೋಟಿ ಅನುದಾನ ನೀಡಲಾಗಿತ್ತು. ರಾಜ್ಯದಲ್ಲಿ 4,100 ಉರ್ದು ಶಾಲೆಗಳಿದ್ದು, ಅವುಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಕಳೆದ ವರ್ಷ 256 ಶಾಲೆಗಳ ಕೊಠಡಿ ದುರಸ್ತಿ ಕೈಗೊಳ್ಳಲಾಗಿತ್ತು. ಈ ಬಾರಿ 250 ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮೇಯರ್‌ ಅನಿತಾಬಾಯಿ ಮಾಲತೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ‘ದೂಡಾ’ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರೂ ಉಪಸ್ಥಿತರಿದ್ದರು.

ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಮನವಿ
ವಕ್ಫ್‌ ಸಂಸ್ಥೆಗಳ ಅಭಿವೃದ್ಧಿ ಹಾಗೂ ಕಾಂಪೌಂಡ್‌ ನಿರ್ಮಾಣಕ್ಕೆ ಸರ್ಕಾರ ಇದುವರೆಗೂ ₹ 31.6 ಕೋಟಿ ಅನುದಾನ ನೀಡಿದೆ. ಆದರೆ, 81ವಕ್ಫ್‌ ಸಂಸ್ಥೆಗಳ ಅಭಿವೃದ್ಧಿ ಬಾಕಿ ಉಳಿದಿದ್ದು, ಅನುದಾನ ಮಂಜೂರು ಮಾಡುವಂತೆ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಸಿರಾಜ್ ಅವರು  ಸಚಿವ ತನ್ವೀರ್ ಸೇಠ್‌ ಅವರಿಗೆ ಮನವಿ ಮಾಡಿದರು.

ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಹಜರತ್ ಬಾಬಾ ಬುಡನ್ ದರ್ಗಾದ ಯಾತ್ರಿ ನಿವಾಸ ನಿರ್ಮಾಣಕ್ಕೆ ₹45 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಎರಡನೇ ಜೊತೆ ಸಮವಸ್ತ್ರ
ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಚಿತವಾಗಿ ವಿತರಿಸುವ ಎರಡನೇ ಜೊತೆ ಸಮವಸ್ತ್ರದ ಗುಣಮಟ್ಟ ಕಳಪೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆಯೇ ಆ ಸಮವಸ್ತ್ರವನ್ನೂ ವಿತರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.

ಒಂದು ಜೊತೆಯ ಸಮವಸ್ತ್ರವನ್ನು ಇಲಾಖೆಯೇ ವಿತರಿಸುತ್ತಾ ಬಂದಿದೆ. ಮತ್ತೊಂದು ಜೊತೆ ಸಮವಸ್ತ್ರವನ್ನು ಪೋಷಕರೇ ಇರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವಿತರಿಸುತ್ತಿದೆ. ಆದರೆ, ಈ ಬಟ್ಟೆಯ ಗುಣಮಟ್ಟ ಕಳಪೆ ಎಂಬ ದೂರುಗಳಿವೆ. ಇದು ಕಳವಳಕಾರಿ ಸಂಗತಿ ಎಂದು ತನ್ವೀರ್‌ ಆತಂಕ ವ್ಯಕ್ತಪಡಿಸಿದರು. 

ಮುಂದಿನ ವರ್ಷದಿಂದ ರಾಜ್ಯದ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಿಂದಲೇ ಅಷ್ಟೂ ಬಟ್ಟೆಯನ್ನು ಖರೀದಿಸಿ, ವಿತರಿಸಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದರು.

ವಕ್ಫ್ ಆಸ್ತಿ ಇಂಡೀಕರಣ
ಒಟ್ಟು ಆಸ್ತಿಗಳು 733

ಮುಕ್ತಾಯ 464

ಪ್ರಗತಿ 269

ಜಿಲ್ಲೆಯಲ್ಲಿ 262 ಮಸೀದಿಗಳಿವೆ

208 ಪೇಶ್‌ಇಮಾಮ್‌ಗಳು 

208 ಮೌಜಿನ್‌ಗಳಿಗೆ ಸರ್ಕಾರದಿಂದ ಗೌರವ ಧನ ಸಿಗುತ್ತಿದೆ.

ಜಿಲ್ಲೆಯಲ್ಲಿ 

365 ವಕ್ಫ್ ಸಂಸ್ಥೆಗಳು

733 ವಕ್ಫ್ ಆಸ್ತಿಗಳು (ಗೆಜೆಟ್ ಪ್ರಕಟಿತ 316, ನೋಂದಾಯಿತ 417)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT