ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹104 ಕೋಟಿ ಬಜೆಟ್‌ ಮಂಡನೆಗೆ ಅನುಮೋದನೆ

Last Updated 19 ಜುಲೈ 2017, 6:01 IST
ಅಕ್ಷರ ಗಾತ್ರ

ಹುಮನಾಬಾದ್‌: ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 2017–18ನೇ ಸಾಲಿನ ₹104.66 ಕೋಟಿ  ಮೊತ್ತದ ಬಜೆಟ್‌ ಮಂಡನೆಗೆ ಸರ್ವ ಸದಸ್ಯರು ಅನುಮೋದಿಸಿದರು.

ತಾಲ್ಲೂಕು ಪಂಚಾಯಿತಿ ಅನುದಾನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ತರಲು ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸರ್ವ ಸದಸ್ಯರು ಪಕ್ಷಾತೀತವಾಗಿ ನಿರ್ಧಾರ ಕೈಗೊಂಡರು.

ಅನುದಾನ ವಿಂಗಡಣೆ: ಸಾರ್ವಜನಿಕ ಶಿಕ್ಷಣ– ₹ 7.93 ಕೋಟಿ, ವೈದ್ಯಕೀಯ ಮತ್ತು ಆರೋಗ್ಯ– ₹ 32.93ಲಕ್ಷ, ಸಮಾಜ ಕಲ್ಯಾಣ– ₹ 7.17ಕೋಟಿ, ವಿಶೇಷ ಘಟಕ ಯೋಜನೆ– ₹30.80 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ– ₹₹ 68ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ–₹5.14ಕೋಟಿ, ಪೌಷ್ಟಿಕ ಆಹಾರ–₹8.31 ಕೋಟಿ, ಕೃಷಿ/ಜಲಾನಯನ– ₹90.65 ಲಕ್ಷ, ತೋಟಗಾರಿಕೆ– ₹1.12ಕೋಟಿ, ಪಶು ಸಂಗೋಪನೆ–₹ 4.40ಕೋಟಿ, ಸಹಕಾರ– ₹92ಸಾವಿರ, ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ–₹5.5ಕೋಟಿ, ರೇಷ್ಮೆ–₹23 ಸಾವಿರ, ರಸ್ತೆ ಮತ್ತು ಸೇತುವೆ–₹3.20ಲಕ್ಷ, ಗಿರಿಜನ ಉಪಯೋಜನೆ– ₹11.60 ಲಕ್ಷ, ಅಲ್ಪಸಂಖ್ಯಾತ–₹ 60 ಸಾವಿರ, ಎಸ್‌ಜಿಎಸ್‌ವೈ ಉಸ್ತುವಾರಿ ಕೋಶ– ₹64 ಸಾವಿರ, ಇತರೆ ಗ್ರಾಮೀಣಾಭಿವೃದ್ಧಿ–4.26ಲಕ್ಷ, ಸ್ಟ್ಯಾಂಪ್‌ಟ್ಯೂಟಿ–₹25.54 ಲಕ್ಷ ಸೇರಿ ಒಟ್ಟು ₹104.66 ಕೋಟಿ ಬಜೆಟ್‌ ಅನ್ನು ತಾ.ಪಂ ಯೋಜನಾಧಿಕಾರಿ ಸೈಯದ್‌ ಅಹ್ಮದ್‌ ಧುಮಾಳೆ ಸಭೆಯಲ್ಲಿ ವಾಚಿಸಿದರು. ನಂತರ ಸರ್ವ ಸದಸ್ಯರು ಚರ್ಚಿಸಿದ ನಂತರ ಸರ್ವಾನುಮತದಿಂದ ಅಂಗೀಕರಿಸಲಾದ ವಿಷಯವನ್ನು ತಾ.ಪಂ ಅಧ್ಯಕ್ಷ ರಮೇಶ ಡಾಕುಳಗಿ ಅಧಿಕೃತ ಘೋಷಿಸಿದರು.

ಅನುದಾನ ಹೆಚ್ಚಳಕ್ಕೆ ಆಗ್ರಹ: ತಾಲ್ಲೂಕು ಪಂಚಾಯಿತಿಯಲ್ಲಿ ಈಗ ಬಿಡುಗಡೆ ಆಗುತ್ತಿರುವ ಅನುದಾನದಲ್ಲಿ ಕನಿಷ್ಠ 8 ರಿಂದ 10 ಸಾವಿರ ಜನಸಂಖ್ಯೆ ಹೊಂದಿರುವ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕೈಗೊಳ್ಳುವುದು ಸಾಧ್ಯವಿಲ್ಲ. ಈ ಅನುದಾನವನ್ನು ಸರ್ಕಾರಕ್ಕೆ ವಾಪಸ್‌ ಕಳುಹಿಸಿ ಎಂದು ಬಿಜೆಪಿ ಸದಸ್ಯ ನಾಗೇಶ ಕಲ್ಲೂರ, ಶ್ರೀಮಂತ ಪಾಟೀಲ, ಮಲ್ಲಿಕಾರ್ಜುನ ಪ್ರಭಾ ಆಗ್ರಹಿಸಿದರು. ನಂತರ ಮಾತನಾಡಿದ ಹಿರಿಯ ಸದಸ್ಯರಾದ ಕಂಟೆಪ್ಪ ದಾನಾ, ಪರಮೇಶ್ವರ ಪಾಟೀಲ ಅವರು, ಅನುದಾನ ಮರಳಿಸುವುದರಿಂದ ಯಾವುದೇ ಪ್ರಯೋಜನವಾಗದು. ಸರ್ವ ಸದಸ್ಯರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸೋಣ ಎಂದಾಗ ಅದಕ್ಕೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏಕೆ ಕುಸಿಯುತ್ತಿದೆ ಎಂದು ಸದಸ್ಯ ಶ್ರೀಮಂತ ಪಾಟೀಲ, ನಾಗೇಶ ಕಲ್ಲೂರ ಅವರು ಪ್ರಶ್ನಿಸಿದರು. ‘ಸರ್ಕಾರಿ ಶಾಲೆಗಳಲ್ಲಿ 5 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಪಾಲಕರು ತಮ್ಮ ಮಕ್ಕಳನ್ನು 3 ವರ್ಷಕ್ಕೆ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿಗೆ ಪ್ರವೇಶ ಕೊಡಿಸುತ್ತಿದ್ದಾರೆ. ಆ ಮಕ್ಕಳು ಸಹಜವಾಗಿಯೇ ಮುಂದಿನ ಓದನ್ನು ಅದೇ ಶಾಲೆಗಳಲ್ಲಿ ಮುಂದುವರೆಸುತ್ತಿರುವ ಏಕೈಕ ಕಾರಣ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕುಸಿಯುತ್ತಿದೆ ಎಂದು ಬಿಇಒ ಅಂಬೃತರಾವ ಬಸಗುಂಡೆ ಪ್ರತಿಕ್ರಿಯಿಸಿದರು.

ತಾಲ್ಲೂಕು ಆಸ್ಪತ್ರೆ ಒಳಗೊಂಡಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ವೈದ್ಯರಿಲ್ಲದ ಕಾರಣ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ವೈದ್ಯರ ನಿಯೋಜನೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲ ಸದಸ್ಯರು ಪ್ರಶ್ನಿಸಿದರು. ‘ಕೊರತೆ ಇರುವ ಹುದ್ದೆಗಳ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೈದ್ಯರನ್ನು ನಿಯೋಜಿಸುವ ಭರವಸೆ ಉನ್ನತ ಅಧಿಕಾರಿಗಳಿಂದ ಬಂದಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರನಾಥ ಕನಕ ಉತ್ತರಿಸಿದರು.

ಕೃಷಿ, ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ, ತೋಟಗಾರಿಗೆ, ಪಂಚಾಯತ್‌ ರಾಜ್‌, ಲೋಕೋಪಯೋಗಿ, ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಲವಂತರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಗೋವಿಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT